ADVERTISEMENT

ಯುವತಿಗೆ ಬ್ಲ್ಯಾಕ್‌ಮೇಲ್: ಬ್ಯಾಂಕ್ ನೌಕರರ ಸೆರೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಗೌರವ್ ಚೌಧರಿ
ಗೌರವ್ ಚೌಧರಿ   

ಬೆಂಗಳೂರು: ಪ್ರಿಯತಮೆಯೊಂದಿಗೆ ರಹಸ್ಯವಾಗಿ ಕಳೆದ ಕ್ಷಣಗಳನ್ನು ವಿಡಿಯೊ ಮಾಡಿದ್ದ ಪ್ರಿಯಕರ ಹಾಗೂ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಿಯಕರನ ಸ್ನೇಹಿತನನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮುರುಗೇಶ್‌ಪಾಳ್ಯದ ಅಭಿಷೇಕ್ ಕುಮಾರ್ ಝಾ ಹಾಗೂ ಹೊಂಗಸಂದ್ರದ ಗೌರವ್ ಚೌಧರಿ ಬಂಧಿತರು. ಲ್ಯಾಟ್‌ಟಾಪ್‌, ರಹಸ್ಯ ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ವಾಚ್, ಐ–ಪಾಡ್‌ ಹಾಗೂ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಹಾರದ ಮೂಲದ ಅಭಿಷೇಕ್ ಹಾಗೂ ಪಶ್ಚಿಮ ಬಂಗಾಳ ಮೂಲದ ಗೌರವ್ ಚೌಧರಿ ಅವರು, ಕೊಟಕ್ ಮಹೀಂದ್ರ ಬ್ಯಾಂಕ್ ಉದ್ಯೋಗಿಗಳು. ಅಭಿಷೇಕ್, ಬ್ಯಾಂಕ್‌ನ ಗಿರಿನಗರ ಮತ್ತು ಗೌರವ್‌, ಬೊಮ್ಮನಹಳ್ಳಿ ಶಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿದ್ದಾರೆ. ಇಬ್ಬರೂ ಒಂದೇ ಬ್ಯಾಂಕ್‌ನಲ್ಲಿದ್ದ ಕಾರಣ ಅವರಲ್ಲಿ ಆತ್ಮೀಯತೆ ಬೆಳೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಒಂದೂವರೆ ವರ್ಷದಿಂದ ನಗರದಲ್ಲಿರುವ ಅಭಿಷೇಕ್‌ಗೆ, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ನೊಂದಿದ್ದ ಪ್ರಿಯತಮೆ, ಅಭಿಷೇಕ್‌ನಿಂದ ದೂರವಾಗಿದ್ದಳು. ಈ ವಿಷಯವನ್ನು ಅಭಿಷೇಕ್‌, ಗೆಳೆಯನೊಂದಿಗೆ ಹಂಚಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.

ಆನ್‌ಲೈನ್‌ ಮೂಲಕ ಕ್ಯಾಮೆರಾ ಇದ್ದ ವಾಚ್‌ ಖರೀದಿಸಿದ್ದ ಅಭಿಷೇಕ್‌, ಆ ಕ್ಯಾಮೆರಾದಿಂದ ಪ್ರಿಯತಮಗೆ ಗೊತ್ತಿಲ್ಲದೆ ಖಾಸಗಿ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದ. ಈ ವಿಡಿಯೋ ನೋಡಿದ್ದ, ಗೌರವ್‌, ಸ್ನೇಹಿತನ ಗಮನಕ್ಕೆ ತರದೆ, ಅದನ್ನು ಈ ಮೇಲ್‌ ವಿಳಾಸಕ್ಕೆ ವರ್ಗಾಯಿಸಿಕೊಂಡಿದ್ದ.

ಬೇಬಿ ಯು ಆರ್‌ ಗಾನ್‌: ಇನ್‌ಸ್ಟ್ರಾಗ್ರಾಂನಲ್ಲಿ ‘baby ur gone’ ಎಂಬ ಹೆಸರಿನಲ್ಲಿ ಇದೇ 12ರಂದು ನಕಲಿ ಖಾತೆ ತೆರೆದ ಗೌರವ್‌, ವಿಡಿಯೋದ ಸ್ಕ್ಟ್ರೀನ್‌ ಶಾಟ್‌ ಅನ್ನು ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ ಕಳುಹಿಸಿ, ಐ–ಫೋನ್‌ ಎಕ್ಸ್‌ ಮೊಬೈಲ್‌ ನೀಡುವಂತೆ ಬೇಡಿಕೆ ಇಟ್ಟಿದ್ದ.

ಬೇಡಿಕೆ ಈಡೇರಿಸದಿದ್ದರೆ, ವಿಡಿಯೊವನ್ನು ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ ಗುರುವಾರ ಪೊಲೀಸರಿಗೆ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡು, ಮೊಬೈಲ್‌ ಸಂಖ್ಯೆ ಆಧಾರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.