ADVERTISEMENT

ಯುವತಿಯರ ಮೈ ಸವರಿ ಹೋಗುತ್ತಿದ್ದ ‘ಸೈಕೊ’ ಸೆರೆ

ಎಂ.ಸಿ.ಮಂಜುನಾಥ
Published 13 ಮೇ 2017, 19:52 IST
Last Updated 13 ಮೇ 2017, 19:52 IST
ವಿನೀತ್
ವಿನೀತ್   

ಬೆಂಗಳೂರು: ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿಯ ಮೈ ಸವರಿ ಹೋಗಿದ್ದ ವಿನೀತ್ ಕುಮಾರ್ ಅಲಿಯಾಸ್ ಸೈಕೊ (33), ತಿಂಗಳ ಬಳಿಕ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿಯ ದೇಹ ಮುಟ್ಟಿ ಪೊಲೀಸರ ಅತಿಥಿಯಾಗಿದ್ದಾನೆ.

ಶ್ರೀಗಂಧಕಾವಲು ನಿವಾಸಿಯಾದ ಆತ, ಏ.10ರಂದು ನಾಗರಬಾವಿಯ ಮಾರ್ಕೆಟ್ ರಸ್ತೆಯಲ್ಲಿ ಕಾನೂನು ವಿದ್ಯಾರ್ಥಿನಿಯ ಮೈ ಮುಟ್ಟಿ ಹೋಗಿದ್ದ. ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದ ಕಾರಣ ಅವರು ತಡವಾಗಿ (ಮೇ 3ರಂದು) ದೂರು ಕೊಟ್ಟಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾ ಆಧರಿಸಿ ಪೊಲೀಸರು ಶೋಧ ಪ್ರಾರಂಭಿಸಿದ್ದ ಬೆನ್ನಲ್ಲೇ ಆತ, ಮೇ 5ರಂದು ಇನ್ನೊಬ್ಬ ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿದ್ದ.

ದೂರಿನ ವಿವರ: ‘ರಾತ್ರಿ 9 ಗಂಟೆಗೆ ಸ್ನೇಹಿತರ ಜತೆ ನಾಗರಬಾವಿ–ಜ್ಞಾನಭಾರತಿ ರಸ್ತೆಯಲ್ಲಿನ ಲಸ್ಸಿ ಶಾಪ್‌ಗೆ ಹೋಗಿದ್ದೆ. ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ನನ್ನ ದೇಹದ ಹಿಂಭಾಗ ಸವರಿದ. ಇದರಿಂದ ಕಸಿವಿಸಿಯಾಗಿ ಅಳುತ್ತ ದೂರ ಸರಿದೆ. ಈ ವರ್ತನೆಯನ್ನು ಸ್ನೇಹಿತರು ಪ್ರಶ್ನಿಸಲು ಮುಂದಾದಾಗ, ಆತ ಓಡಲಾರಂಭಿಸಿದ. ಕೊನೆಗೆ ಸಾರ್ವಜನಿಕರ ನೆರವಿನಿಂದ ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದೇವೆ. ಲೈಂಗಿಕ ಆಸಕ್ತಿಯಿಂದ ನನ್ನನ್ನು ಸ್ಪರ್ಶಿಸಿದ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂತ್ರಸ್ತೆ ಪೊಲೀಸರನ್ನು ಕೋರಿದ್ದಾರೆ.

ADVERTISEMENT

ಕೆಲಸ ಮುಗಿದ ಬಳಿಕ ಈ ಕಾಯಕ!: ‘ಲೈಂಗಿಕ ಕಿರುಕುಳ (ಐಪಿಸಿ 354) ಆರೋಪದಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಎಂಜಿನಿಯರಿಂಗ್ ಪದವೀಧರನಾದ ವಿನೀತ್, ಕಾರ್ಖಾನೆಯೊಂದರ ಮೆಕ್ಯಾನಿಕಲ್ ವಿಭಾಗದಲ್ಲಿ ಉದ್ಯೋಗಿ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ನಾಗರಬಾವಿಯ ಕಾನೂನು ಕಾಲೇಜಿನ ಬಳಿ ಬರುತ್ತಿದ್ದ ಈತ, ಅಲ್ಲಿ ಓಡಾಡುವ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುವ ಖಯಾಲಿ ಹೊಂದಿದ್ದ. ಅಷ್ಟೇ ಅಲ್ಲದೆ, ಬೆಳಿಗ್ಗೆ ಹಾಗೂ ಸಂಜೆ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಬಿಎಂಟಿಸಿ ಬಸ್‌ಗಳನ್ನು ಹತ್ತಿ, ಮಹಿಳೆಯರ ಮೈ–ಕೈ ಮುಟ್ಟುತ್ತಿದ್ದ’  ಎಂದು ತಿಳಿಸಿದರು.

ಸೈಕೊ ಎಂದ ಪೋಷಕರು: ‘ವಿನೀತ್‌ನ ತಂದೆ–ತಾಯಿ ಇಬ್ಬರೂ ಬ್ಯಾಂಕ್ ವ್ಯವಸ್ಥಾಪಕರು. ‘ಮಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆತನಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಆರೋಪಿಯು ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯ ಎಸಗುತ್ತಿದ್ದ ಎಂಬುದು ಆತನ ವಿಚಾರಣೆಯಿಂದ ಗೊತ್ತಾಗಿದೆ. ವಿನೀತ್‌ನಿಂದ ಕಿರುಕುಳಕ್ಕೆ ಒಳಗಾದವರು ಚಂದ್ರಾಲೇಔಟ್ ಠಾಣೆಗೆ ದೂರು ಕೊಡಬಹುದು. ಅವರ ಹೆಸರನ್ನು ಗೌಪ್ಯವಾಗಿಟ್ಟು ತನಿಖೆ ನಡೆಸುತ್ತೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.