ADVERTISEMENT

ರವೀಂದ್ರನಾಥ ಟ್ಯಾಗೋರ್‌ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:11 IST
Last Updated 22 ಮಾರ್ಚ್ 2018, 20:11 IST
ರವೀಂದ್ರನಾಥ ಟ್ಯಾಗೋರ್‌ ಪುತ್ಥಳಿಯನ್ನು ಉಮಾಶ್ರೀ ಅನಾವರಣಗೊಳಿಸಿದರು. ಎನ್‌.ಆರ್‌.ವಿಶುಕುಮಾರ್‌, ಶ್ರೀನಿವಾಸ ಜಿ.ಕಪ್ಪಣ್ಣ, ವೆಂಕಟಾಚಲಪತಿ, ರವೀಂದ್ರ ಕಲಾಕ್ಷೇತ್ರ–50 ಸಮಿತಿಯ ಸದಸ್ಯರಾದ ಡಾ.ಬಿ.ವಿ.ರಾಜಾರಾಂ, ಸುಮಾ ಸುಧೀಂದ್ರ, ಜೆ.ಲೋಕೇಶ್‌, ಚಂದ್ರಶೇಖರ್‌, ಪ್ರೊ.ಎಲ್.ಎನ್.ಮುಕುಂದರಾಜ್, ಕೆ.ವಿ.ನಾಗರಾಜಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ
ರವೀಂದ್ರನಾಥ ಟ್ಯಾಗೋರ್‌ ಪುತ್ಥಳಿಯನ್ನು ಉಮಾಶ್ರೀ ಅನಾವರಣಗೊಳಿಸಿದರು. ಎನ್‌.ಆರ್‌.ವಿಶುಕುಮಾರ್‌, ಶ್ರೀನಿವಾಸ ಜಿ.ಕಪ್ಪಣ್ಣ, ವೆಂಕಟಾಚಲಪತಿ, ರವೀಂದ್ರ ಕಲಾಕ್ಷೇತ್ರ–50 ಸಮಿತಿಯ ಸದಸ್ಯರಾದ ಡಾ.ಬಿ.ವಿ.ರಾಜಾರಾಂ, ಸುಮಾ ಸುಧೀಂದ್ರ, ಜೆ.ಲೋಕೇಶ್‌, ಚಂದ್ರಶೇಖರ್‌, ಪ್ರೊ.ಎಲ್.ಎನ್.ಮುಕುಂದರಾಜ್, ಕೆ.ವಿ.ನಾಗರಾಜಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ–50 ಸುವರ್ಣ ಸಂಭ್ರಮದ ಸಮಾರೋಪದಲ್ಲಿ ರವೀಂದ್ರನಾಥ ಟ್ಯಾಗೋರ್‌ ಪುತ್ಥಳಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಗುರುವಾರ ಅನಾವರಣಗೊಳಿಸಿದರು.

ಕಲಾಕ್ಷೇತ್ರ ಆವರಣದ ಶಿಲ್ಪವನದಲ್ಲಿ ಈ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಿಲ್ಪಕಲಾವಿದರಾದ ವೆಂಕಟಾಚಲಪತಿ, ಎಲ್‌.ನರಸಿಂಹ ಹಾಗೂ ಬಿ.ಸಿ.ಶಿವಕುಮಾರ್‌ ಇದನ್ನು ನಿರ್ಮಿಸಿದ್ದಾರೆ.

‘2017ರ ಮಾರ್ಚ್‌ನಲ್ಲಿ 50 ಶಿಲ್ಪಕಲಾವಿದರ ಶಿಲ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿವಿಧ ಕಲಾಕೃತಿಗಳ ಜತೆಗೆ ಟ್ಯಾಗೋರರ ಪುತ್ಥಳಿ ನಿರ್ಮಿಸುವ ಆಲೋಚನೆ ಬಂತು. ಅಧಿಕಾರಿಗಳು ಮತ್ತು ರವೀಂದ್ರ ಕಲಾಕ್ಷೇತ್ರ–50 ಸಮಿತಿಯ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಇದಕ್ಕೆ ಒಪ್ಪಿಗೆ ಸೂಚಿಸಿದರು’ ಎಂದು ಮುಖ್ಯಶಿಲ್ಪಿ ವೆಂಕಟಾಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಟ್ಯಾಗೋರರ ಪುತ್ಥಳಿಯನ್ನು ಮಣ್ಣಿನಲ್ಲಿ ಮಾಡಿಕೊಂಡು ಬಳಿಕ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಅಚ್ಚು ತೆಗೆದುಕೊಂಡೆವು. ಫೈಬರ್‌ ಗಾಜು ಹಾಗೂ ಅಂಟು ಬೆರೆಸಿ ಅಚ್ಚಿಗೆ ಹಾಕಿದೆವು. ಅದು ಗಟ್ಟಿಯಾದ ಮೇಲೆ ಅಂತಿಮ ಸ್ಪರ್ಶ ನೀಡಿದೆವು. ಪುತ್ಥಳಿ ನಿರ್ಮಾಣಕ್ಕೆ ಒಂದು ತಿಂಗಳು ಹಿಡಿಯಿತು’ ಎಂದು ವಿವರಿಸಿದರು.

‘ಇದಕ್ಕೆ ಬೇಕಾದ ವಸ್ತುಗಳನ್ನು ಇಲಾಖೆಯೇ ಒದಗಿಸಿದೆ. ನಿರ್ಮಾಣ ವೆಚ್ಚ ಬಿಟ್ಟರೆ ಯಾವುದೇ ಸಂಭಾವನೆ ಪಡೆದಿಲ್ಲ’ ಎಂದು ಹೇಳಿದರು.

ಉಮಾಶ್ರೀ, ‘ಟ್ಯಾಗೋರರ ಶತಮಾನೋತ್ಸವ ಆಚರಣೆಯ ಪ್ರಯುಕ್ತ ದೇಶದ ವಿವಿಧ ಕಡೆಗಳಲ್ಲಿ ರವೀಂದ್ರ ಕಲಾಕ್ಷೇತ್ರಗಳನ್ನು ನಿರ್ಮಿಸಲಾಗಿತ್ತು. ಈ ಭವನ ನಿರ್ಮಿಸಿ 50 ವರ್ಷಗಳು ಕಳೆದಿದ್ದರಿಂದ ನೆನಪಿನೋಕುಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಲಾಕ್ಷೇತ್ರದ ಜತೆ ನನಗೆ ಅವಿನಾಭಾವ ಸಂಬಂಧವಿದೆ. ಆಗ ಇಲ್ಲಿ ಹೋಟೆಲ್‌ ಇರಲಿಲ್ಲ. ಪಕ್ಕದಲ್ಲೇ ಇದ್ದ ಮೆಟ್ರೊ ಹೋಟೆಲ್‌ನಲ್ಲಿ ಬನ್‌ ಹಾಗೂ ಟೀ ಕುಡಿದು ಕಾಲ ಕಳೆಯುತ್ತಿದ್ದೆವು. ಈಗ ಚಿತ್ರಾನ್ನ, ಬಜ್ಜಿ, ಟೀ, ಕಾಫಿ ಸಿಗುತ್ತಿದೆ’ ಎಂದು ನೆನಪು ಮಾಡಿಕೊಂಡರು.

‘ಧ್ವನಿ, ಬೆಳಕು’ ಇಂದು ಚಾಲನೆ

ರವೀಂದ್ರ ಕಲಾಕ್ಷೇತ್ರದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಅದಕ್ಕೆ ಶುಕ್ರವಾರ ಚಾಲನೆ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ತಿಳಿಸಿದರು.

ಇದು ಹವ್ಯಾಸಿ ಕಲಾವಿದರಿಗೆ ಮೀಸಲಾಗಿರುವ ಕ್ಷೇತ್ರ. ಹೀಗಾಗಿ, 10 ದಿನಗಳ ನಾಟಕೋತ್ಸವ ಮಾಡುತ್ತಿದ್ದು, ಹವ್ಯಾಸಿ ತಂಡಗಳು ಉಚಿತವಾಗಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಂಕಿ–ಅಂಶ

15 ಅಡಿ

ಟ್ಯಾಗೋರ್‌ ಪುತ್ಥಳಿ ಎತ್ತರ


₹3 ಲಕ್ಷ

ಪುತ್ಥಳಿ ನಿರ್ಮಾಣ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.