ADVERTISEMENT

ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕೆಂಪೇಗೌಡ ಭವನ ಉದ್ಘಾಟಿಸಿದರು. ರಾಜಣ್ಣ,  ಬಿಬಿಎಂಪಿ ಸದಸ್ಯ ವಾಸುದೇವ್‌, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ್‌ ಹೇರೋಹಳ್ಳಿ, ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಪ್ಪ  ಇದ್ದಾರೆ
ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕೆಂಪೇಗೌಡ ಭವನ ಉದ್ಘಾಟಿಸಿದರು. ರಾಜಣ್ಣ, ಬಿಬಿಎಂಪಿ ಸದಸ್ಯ ವಾಸುದೇವ್‌, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ್‌ ಹೇರೋಹಳ್ಳಿ, ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಪ್ಪ ಇದ್ದಾರೆ   

ಬೆಂಗಳೂರು: ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಪಕ್ಕದಿಂದ ಮೈಸೂರು ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಎಸ್‌.ಟಿ.ಸೋಮಶೇಖರ್‌ ಗುದ್ದಲಿ ಪೂಜೆ ನೆರವೇರಿಸಿದರು.

ಅಂದಾಜು ₹ 38ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಈ ರಸ್ತೆ  ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಳಿಸಲಿದೆ. 
ಉದ್ಘಾಟನೆ: ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ  ಕೆಂಪೇಗೌಡ ಭವನ, ಗ್ರಂಥಾಲಯ ಕಟ್ಟಡ, ಕನಕಭವನ, ವಾಲ್ಮೀಕಿ ಭವನ ಹಾಗೂ  ಶುದ್ಧ ನೀರಿನ ಘಟಕಗಳನ್ನು ಶಾಸಕರು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿ, ‘ಕಡಿಮೆ ಅವಧಿಯಲ್ಲಿ ಮೈಸೂರು ರಸ್ತೆ ತಲುಪಲು ಟೋಲ್‌ ರಹಿತ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯರು ಸುಂಕ ಪಾವತಿಸಬೇಕಾದ ನೈಸ್‌ ರಸ್ತೆಯನ್ನು ಬಳಸುವುದು ತಪ್ಪಲಿದೆ’ ಎಂದರು.

‘ಹೇರೋಹಳ್ಳಿ ವಾರ್ಡ್‌ನ ಎಲ್ಲ ಬಡಾವಣೆಗಳಿಗೆ ಕಾವೇರಿ ನೀರು ಪೂರೈಸಲು ಬಿಡಿಎ ಜಲಮಂಡಲಿಗೆ ₹ 35ಕೋಟಿ ಪಾವತಿಸಿದೆ. ಬಜಾಜ್‌ ಸಂಸ್ಥೆ ₹ 14ಕೋಟಿ ಹಣವನ್ನು ಜಲಮಂಡಲಿಗೆ ಪಾವತಿಸಲಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ  ಯೋಜನೆಗೆ ಚಾಲನೆ ನೀಡಲಿದ್ದಾರೆ’ ಎಂದರು.
‘ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೇರಿಸಿ ಸಹಾಯಕ ಪೊಲೀಸ್‌ ಆಯುಕ್ತರ  ಕಚೇರಿ ಪ್ರಾರಂಭಿಸಲಾಗುವುದು. ತುಂಗಾನಗರ, ಕೆಂಪೇಗೌಡ ನಗರ, ಮಾರುತಿನಗರ ಮುಂತಾದ ಕಡೆ ಕುಡುಕರ, ಗೂಂಡಾಗಳ ಹಾವಳಿ ತಪ್ಪಿಸಲು ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಕಡುಬಡವರಿಗಾಗಿ ತಲಾ ₹4.50ಲಕ್ಷ ವೆಚ್ಚದಲ್ಲಿ 1,800 ಮನೆ ನಿರ್ಮಿಸಲಾಗುವುದು’ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಬಿಎಂಪಿ ಆಡಳಿತ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ , ‘ಹೇರೋಹಳ್ಳಿ ವಾರ್ಡ್‌ನಲ್ಲಿ ಒಟ್ಟು ₹125ಕೋಟಿ ವೆಚ್ಚದ  ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.  ದನದ ಮಂದೆ, ಕರೆಕಲ್ಲು, ಬಿಳಿಕಲ್ಲು ಸೇರಿದಂತೆ ವಿವಿಧ ಬಡಾವಣೆಯ ಬಡವರಿಗೆ ಅಕ್ಟೋಬರ್ 2ರಂದು ಆಶ್ರಯ ನಿವೇಶನ ಹಕ್ಕು ಪತ್ರಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.