ADVERTISEMENT

ರಾಜ್ಯಪಾಲ–ಮುಖ್ಯಮಂತ್ರಿ ಭೇಟಿ ಇಂದು

ಲೋಕಾಯುಕ್ತರನ್ನು ನೇಮಿಸುವ ಸಂಬಂಧ ಮಾತುಕತೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:55 IST
Last Updated 22 ಜನವರಿ 2017, 19:55 IST
ರಾಜ್ಯಪಾಲ–ಮುಖ್ಯಮಂತ್ರಿ ಭೇಟಿ ಇಂದು
ರಾಜ್ಯಪಾಲ–ಮುಖ್ಯಮಂತ್ರಿ ಭೇಟಿ ಇಂದು   
ಬೆಂಗಳೂರು: ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಸೋಮವಾರ ಭೇಟಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಾಯುಕ್ತ ನೇಮಕ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
 
ರಾಜ್ಯಪಾಲರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬೆಳಿಗ್ಗೆ 10ಕ್ಕೆ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳುವರೆಂದು ಮೂಲಗಳು ಹೇಳಿವೆ.
 
‘ಲೋಕಾಯುಕ್ತ ಹುದ್ದೆಗೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಆಯ್ಕೆ ಸಮಿತಿ ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ಹೈಕೋರ್ಟ್‌ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ಸಹಮತ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿ ಶೆಟ್ಟಿ ಅವರು ಕಳಂಕಿತರಲ್ಲ, ಅವರ ವಿರುದ್ಧ ಗುರುತರ ಆಪಾದನೆಗಳಿಲ್ಲ’ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಲು ಸಿದ್ದರಾಮಯ್ಯ ಇಚ್ಛಿಸಿದ್ದಾರೆ ಎನ್ನಲಾಗಿದೆ.
 
ನ್ಯಾಯಮೂರ್ತಿ ಶೆಟ್ಟಿ ಅವರನ್ನು ಲೋಕಾಯುಕ್ತರಾಗಿ ನೇಮಿಸುವಂತೆ ಸರ್ಕಾರ ಕಳುಹಿಸಿದ್ದ ಶಿಫಾರಸನ್ನು ಒಪ್ಪದ ರಾಜ್ಯಪಾಲರು, ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರುಗಳ ಕುರಿತು ವಿವರ ನೀಡುವಂತೆ ಸೂಚಿಸಿ ಕಡತ ವಾಪಸು ಕಳುಹಿಸಿದ್ದರು. ಇದರ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕಾನೂನು ಇಲಾಖೆ ಮತ್ತು ಅಡ್ವೊ ಕೇಟ್ ಜನರಲ್‌ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಅಡ್ವೊಕೇಟ್ ಜನರಲ್‌ ಮಧುಸೂದನ ನಾಯಕ್‌ ಅವರು, ಈ ಸಂಬಂಧ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
 
ಈ  ವಿಷಯಗಳನ್ನೂ ರಾಜ್ಯಪಾಲರ ಮುಂದೆ ಇಡಲಿರುವ ಸಿದ್ದರಾಮಯ್ಯ, ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಮತ್ತೊಮ್ಮೆ  ಕಳುಹಿಸುವುದಾಗಿ ಹಾಗೂ ಅದಕ್ಕೆ ಒಪ್ಪಿಗೆ ಸೂಚಿಸಬೇಕೆಂದು ಕೋರಲಿರುವುದಾಗಿ ತಿಳಿದುಬಂದಿದೆ.
 
ಫೆ.6ರಂದು ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಬರುವಂತೆ ಅಧಿಕೃತ ಆಮಂತ್ರಣವನ್ನೂ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಇದೇ ವೇಳೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.