ADVERTISEMENT

ಶಾಲಾ ಆಡಳಿತ ಮಂಡಳಿ ಸದಸ್ಯ ಬಂಧನ, ಬಿಡುಗಡೆ

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 20:02 IST
Last Updated 11 ಫೆಬ್ರುವರಿ 2016, 20:02 IST

ಬೆಂಗಳೂರು: ‘ಹೋಂ ವರ್ಕ್’ ಮಾಡಿಲ್ಲವೆಂದು 7ನೇ ತರಗತಿ ವಿದ್ಯಾರ್ಥಿಯ ಬೆನ್ನು, ಮರ್ಮಾಂಗ ಸೇರಿದಂತೆ ದೇಹದ ವಿವಿಧೆಡೆ ಕೋಲಿನಿಂದ ಹೊಡೆದಿದ್ದ ಪ್ರಕರಣ ಸಂಬಂಧ ಹಲಸೂರು ಪೊಲೀಸರು ಶಾಲಾ ಆಡಳಿತ ಮಂಡಳಿ ಸದಸ್ಯ ಶೇಕ್ ಶಫಿವುಲ್ಲಾ ಅವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಡಿಕನ್ಸನ್‌ ರಸ್ತೆಯಲ್ಲಿರುವ ಮುಸ್ಲಿಂ ಅನಾಥ ಮಕ್ಕಳ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿತ್ತು. ಏಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸೈಯದ್ ಸುಲ್ತಾನ್, ಚಿಕಿತ್ಸೆ ಪಡೆದು ಸಂಜೆಯೇ ಆಶ್ರಮಕ್ಕೆ ಮರಳಿದ್ದ.

ಆದರೆ, ಕೆಲ ದಿನ ವಿಶ್ರಾಂತಿ ಪಡೆದು ಶಾಲೆಗೆ ವಾಪಸಾಗುವಂತೆ ಆ ವಿದ್ಯಾರ್ಥಿಗೆ ಗುರುವಾರದಿಂದ ರಜೆ ಕೊಟ್ಟು ಕಳುಹಿಸಿರುವ ಆಡಳಿತ ಮಂಡಳಿ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ವಿದ್ಯಾರ್ಥಿ ಹಾಗೂ ಆತನ ತಾಯಿಗೆ ಎಚ್ಚರಿಕೆಯನ್ನೂ ನೀಡಿದೆ.

ಹೋಂವರ್ಕ್ ಮಾಡಿದ್ದ:  ‘ಬುಧವಾರ ಆಸ್ಪತ್ರೆಗೆ ತೆರಳಿ ನಡೆದ ಘಟನೆ ಬಗ್ಗೆ ವಿದ್ಯಾರ್ಥಿಯಿಂದ ಮಾಹಿತಿ ಪಡೆಯಲಾಗಿದೆ. ತಾನು ಹೋಂವರ್ಕ್ ಮಾಡಿದ್ದೆ. ಆದರೆ, ಮುಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಸಹಪಾಠಿಗಳು ಮಾಡಿರಲಿಲ್ಲ. ಮೊದಲು ಅವರಿಗೆ ಹೊಡೆದ ಶಫೀವುಲ್ಲಾ, ನಂತರ ತನಗೂ ಏಟು ನೀಡಿದರು ಎಂದು ಆ ವಿದ್ಯಾರ್ಥಿ ಸುಲ್ತಾನ್ ಹೇಳಿಕೆ ಕೊಟ್ಟಿದ್ದಾನೆ’ ಎಂದು ಅನಾಥಾಶ್ರಮದ ಹಳೇ ವಿದ್ಯಾರ್ಥಿಗಳ ಕಲ್ಯಾಣ ಸಂಘದ ಅಧ್ಯಕ್ಷ ಮೊಹಮದ್ ಅಮೀರ್ ತಿಳಿಸಿದರು.

‘ವಿದ್ಯಾರ್ಥಿಗಳು ಹೋಂವರ್ಕ್ ಮಾಡಿದ್ದರೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು ಶಫೀವುಲ್ಲಾ ಶಿಕ್ಷಕರಲ್ಲ. ಅವರು ಅನಾಥಾಶ್ರಮದ ಸಮಿತಿ ಸದಸ್ಯರಷ್ಟೆ. ಏನಿದ್ದರೂ ಆಡಳಿತ ಸಂಬಂಧಿ ವಿಷಯಗಳನ್ನಷ್ಟೇ ಅವರು ನೋಡಿಕೊಳ್ಳಬೇಕು. ಈಗ ವಿದ್ಯಾರ್ಥಿ ಹಾಗೂ ಆತನ ತಾಯಿಗೆ ಮಾಧ್ಯಮಗಳ ಜತೆ ಮಾತನಾಡದಂತೆ ಸೂಚನೆ ನೀಡಿರುವುದೂ ಸರಿಯಲ್ಲ’ ಎಂದು ಅಮೀರ್  ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಶಫೀವುಲ್ಲಾ ಅವರನ್ನು ಸಮಿತಿಯಿಂದ ತೆಗೆದು ಹಾಕಬೇಕು ಅಥವಾ ವಿದ್ಯಾರ್ಥಿಗಳ ಜತೆ ಸರಿಯಾಗಿ ವರ್ತಿಸುವಂತೆ ಎಚ್ಚರಿಕೆ ನೀಡಬೇಕು’ ಎಂದು ಸಮಿತಿಯ ಕೆಲ ಸದಸ್ಯರು ವಕ್ಫ್‌ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.