ADVERTISEMENT

ಶಾಲಾ ಮಾರ್ಗಸೂಚಿಗೆ ಪೋಷಕರ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 20:16 IST
Last Updated 1 ಆಗಸ್ಟ್ 2014, 20:16 IST

ಬೆಂಗಳೂರು: ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ, ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ವಿಬ್ಗಯೊರ್ ಶಾಲಾ ಆಡಳಿತ ಮಂಡಳಿ ಹೊರಡಿಸಿರುವ ಹೊಸ ಮಾರ್ಗಸೂಚಿಗಳಿಗೆ ಪೋಷಕರಿಂದ ಭಾರಿ ವಿರೋಧ ವ್ಯಕ್ತವಾಗಿವೆ.

ಬುಧವಾರ (ಜು.30)  ತರಗತಿಗಳು ಪುನರಾರಂಭವಾದ ತರುವಾಯ ಶಾಲೆ 12 ಅಂಶಗಳಿರುವ ಮಾರ್ಗಸೂಚಿ ಪ್ರತಿ­ಯನ್ನು ಪೋಷಕರಿಗೆ ನೀಡಿದ್ದು, ಅದರಲ್ಲಿ­ರುವ ಕೆಲ ಅಂಶಗಳಿಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾರ್ಗಸೂಚಿಯಲ್ಲಿನ ಕೆಲ ಅಂಶ­ಗಳು ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ತಮ್ಮನ್ನೇ ಹೆಚ್ಚು ಹೊಣೆಯಾಗಿಸಿ­ರುವುದಕ್ಕೆ ಪೋಷಕರು  ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಶಾಲೆಗೆ ಭೇಟಿ ನೀಡುವಾಗ ಪೋಷ­ಕರು ಕಡ್ಡಾ­ಯವಾಗಿ ಸರ್ಕಾರ ನೀಡಿ­ರುವ ಅಧಿಕೃತ ಗುರುತಿನ ಪತ್ರ ತರ­ಬೇಕು. ‘ಸಹಾಯಕ ಶಿಕ್ಷಕ’ರ ಪೂರ್ವಾ­ಪರ ಪರಿಶೀಲನೆ ಪಾಲ­ಕರ ಹೊಣೆ, ಇ–ಮೇಲ್ ಮೂಲಕ ದೂರು ಕಳುಹಿಸಿ, ಎಂಬಂಥ ಅಂಶಗಳು ಸೇರಿ ಹಲವು ನಿಯ­ಮಕ್ಕೆ  ಪ್ರತಿರೋಧ ತೋರಿದ್ದಾರೆ.

ಹೊಸ ಮಾರ್ಗಸೂಚಿ: ಶಾಲೆ (ಬೆಳಿಗ್ಗೆ 8.10 ರಿಂದ ಮಧ್ಯಾಹ್ನ 3.10) ಅವಧಿ­ಯಲ್ಲಿ ಶಾಲೆಗೆ ಭೇಟಿ ನೀಡುವ ಪೋಷಕರು ಪ್ರಾಂಶುಪಾಲರು ಅಥವಾ ಸಂಬಂಧ­ಪಟ್ಟ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯಬೇಕು.4ಪೂರ್ವಾನುಮತಿ ಪಡೆದು ಶಾಲೆಗೆ ಭೇಟಿ ನೀಡುವ ಪೋಷಕರು ತಪ್ಪದೆ ತಮ್ಮೊಂದಿಗೆ ಸರ್ಕಾರದ ಯಾವು­­­ದಾ­ದರೂ ಅಧಿಕೃತ ಗುರುತಿನ ಪತ್ರ ಮತ್ತು ತಮ್ಮ ಮಕ್ಕಳ ನೋಂದಣಿ ಸಂಖ್ಯೆಯನ್ನು ಭದ್ರತಾ ಸಿಬ್ಬಂದಿಗೆ ತೋರಿಸಬೇಕು.

ತುರ್ತು ಸಂದರ್ಭಗಳನ್ನು ಹೊರತು­ಪಡಿಸಿ ಮಕ್ಕಳನ್ನು ಯಾವುದೇ ರೀತಿ­ಯಲ್ಲಿ ಶಾಲೆಯಿಂದ ಬೇಗನೆ ಕಳುಹಿ­ಸಲು ಮತ್ತು ಅರ್ಧ ದಿನದ  ರಜೆ ನೀಡಲು ಅನುಮತಿ ನೀಡುವುದಿಲ್ಲ.ಒಂದೊಮ್ಮೆ ಪೋಷಕರು ತಮ್ಮ ಮಕ್ಕಳನ್ನು ತಡವಾಗಿ ಶಾಲೆಗೆ ಕಳುಹಿ­ಸಲು ನಿರ್ಧರಿಸಿದ್ದರೆ, ಅದಕ್ಕೆ ಪೂರ್ವಾ­ನುಮತಿ ಪಡೆಯಬೇಕು.ವಿಶೇಷ ಮಕ್ಕಳಿಗಾಗಿ ನಿಯೋಜಿಸಿ­ಕೊಂಡಿರುವ ಸಹಾಯಕ ಶಿಕ್ಷಕರಿಲ್ಲದೆ ಪೋಷಕರು ಮಕ್ಕಳನ್ನು ಶಾಲೆಗೆ ಕಳು­ಹಿ­­ಸ­ಬಾರದು. ಅಂತಹ ಶಿಕ್ಷಕರ ಪೂರ್ವಾ­­­ಪರಗಳನ್ನು ಪರಿಶೀಲಿ­ಸು­ವುದು ಪೋಷಕರ ಜವಾಬ್ದಾರಿ. ಸಹಾ­ಯಕ ಶಿಕ್ಷಕರ ಕುರಿತು ಪೋಷ­ಕರು ಆಗಸ್ಟ್‌ 31ರ ಒಳಗೆ ಶಾಲೆಯ ಆಪ್ತಸಮಾ­ಲೋಚಕ­ರಿಗೆ ಮಾಹಿತಿ ಒದಗಿಸಬೇಕು. ಪಾಲಕರ ಮತ್ತು ಶಿಕ್ಷಕರ ಸಭೆಗೆ (ಪಿಟಿಎಂ) ಪೋಷಕರು ತಪ್ಪದೆ  ಹಾಜರಾಗಬೇಕು.

ಮಕ್ಕಳ ಅನಾರೋಗ್ಯ ಕುರಿತಂತೆ ಶಾಲೆ ಮಾಹಿತಿ ನೀಡಿದರೆ ಪೋಷಕರು ವಿಳಂಬ ಮಾಡದೆ ಅವರನ್ನು ಕರೆದುಕೊಂಡು ಹೋಗಬೇಕು. ಶಾಲೆಗೆ ಭೇಟಿ ನೀಡುವ ಪೋಷಕರು ಸಭ್ಯ ಉಡುಪು ಧರಿಸಬೇಕು. ಶಾಲೆಯ ಮತ್ತು ಭದ್ರತಾ ಸಿಬ್ಬಂದಿ­ಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು.ಮಕ್ಕಳ ದಿನಚರಿ ಪುಸ್ತಕವನ್ನು ಪಾಲಕರು ನಿತ್ಯವು ಪರಿಶೀಲಿಸಬೇಕು.
ರಜಾ ಚೀಟಿಯನ್ನು ಮಕ್ಕಳ ದಿನಚರಿ­ಯೊಂದಿಗೆ ಕಳುಹಿಸಬೇಕು. ದೀರ್ಘ­ಕಾಲ ರಜೆ ಬೇಕಾದರೆ ಶಾಲಾ ಸಂಯೋ­­­ಜಕರು ಅಥವಾ ಮುಖ್ಯಸ್ಥ­ರಿಂದ ಮೊದಲು ಅನುಮತಿ ಪಡೆಯಬೇಕು.

ಶಾಲೆಗೆ ಸಂಬಂಧಿತ ಯಾವುದೇ ಸಮಸ್ಯೆ­ಗಳಿದ್ದರೆ ಪೋಷಕರು ಪೂರ್ವಾ­­­ನು­­ಮತಿ ಪಡೆದು ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 3.30 ರಿಂದ ಸಂಜೆ 4.30ರ ಒಳಗೆ ಪ್ರಾಂಶುಪಾಲರು ಅಥವಾ ಉಪ ಪ್ರಾಂಶುಪಾಲರನ್ನು ಮುಕ್ತವಾಗಿ ಭೇಟಿ ಮಾಡಬಹುದು.4ಒಂದೊಮ್ಮೆ  ತಮ್ಮ ಯಾವುದೇ ಸಮಸ್ಯೆಗೆ ಸಿಬ್ಬಂದಿಯಿಂದ ಪರಿಹಾರ ದೊರೆಯದಿದ್ದಾಗ ಪೋಷಕರು ಶಾಲೆಯ ನಿರ್ದೇಶಕರಿಗೆ ಇ–ಮೇಲ್  ಮೂಲಕ ದೂರು ಕಳುಹಿಸಬಹುದು. ದೂರಿನ ಒಂದು ಪ್ರತಿಯನ್ನು ಪ್ರಾಂಶುಪಾಲರಿಗೂ ಕಳುಹಿಸಬೇಕು.ಶಾಲೆಗೆ ಮಕ್ಕಳನ್ನು ಕರೆತರುವ  ಮತ್ತು ಕರೆದೊಯ್ಯುವ ಪೋಷಕರು ಗುರುತಿನ ಚೀಟಿ ಪಡೆಯಲು ತಮ್ಮ ಬಗೆಗಿನ ಮಾಹಿತಿ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.