ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ: ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 20:00 IST
Last Updated 25 ಸೆಪ್ಟೆಂಬರ್ 2016, 20:00 IST
ವಾರ್ಷಿಕೋತ್ಸವದಲ್ಲಿ ಕಲಾವಿದರು ಗಾಯನ ಪ್ರಸ್ತುತಪಡಿಸಿದರು    –ಪ್ರಜಾವಾಣಿ ಚಿತ್ರ
ವಾರ್ಷಿಕೋತ್ಸವದಲ್ಲಿ ಕಲಾವಿದರು ಗಾಯನ ಪ್ರಸ್ತುತಪಡಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.ಹಡ್ಸನ್ ಸ್ಮಾರಕ ಚರ್ಚ್‌ನ ಸಮುದಾಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಹಡ್ಸನ್ ಸ್ಮಾರಕ ಚರ್ಚ್‌ನ 112ನೇ ವಾರ್ಷಿಕೋತ್ಸವ’
ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದ ಬಹುತೇಕ ಶಾಲಾ–ಕಾಲೇಜು, ಆಸ್ಪತ್ರೆಗಳನ್ನು ಕ್ರೈಸ್ತ ಸಮುದಾಯದವರೇ ಮುನ್ನಡೆಸುತ್ತಿದ್ದಾರೆ. ಶಾಂತಿ, ಸಹಬಾಳ್ವೆಗೆ ಒತ್ತು ನೀಡುತ್ತಾ ಬರುತ್ತಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾದ ಹಡ್ಸನ್‌ ಚರ್ಚ್‌ನಲ್ಲಿ ಇಂದಿಗೂ ಕನ್ನಡದಲ್ಲಿ ಪ್ರಾರ್ಥನೆ ನಡೆಯುತ್ತದೆ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಲೇಖಕ ಡಾ.ಎಲ್.ಎಸ್. ಶ್ರೀನಿವಾಸಮೂರ್ತಿ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಭ್ಯಾಸ ಪಡೆಯಬೇಕೆಂದರೂ ಮದ್ರಾಸ್‌ಗೆ ಹೋಗಬೇಕಿತ್ತು. ಸ್ಥಳೀಯವಾಗಿ ಅಧ್ಯಯನ ನಡೆಸಿದರೂ ಮದ್ರಾಸ್‌ನಲ್ಲೇ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಆದರೆ, 1879ರಲ್ಲಿ ಹಡ್ಸನ್‌ ಅವರು, ಮೈಸೂರಿ
ನಲ್ಲೇ ಪರೀಕ್ಷೆ ನಡೆಸುವಂತೆ ಒತ್ತಾಯ ಮಾಡಿದ್ದರು. ಕೊನೆಗೂ ಮೈಸೂರಿನಲ್ಲೇ ಪರೀಕ್ಷೆಗಳನ್ನು ನಡೆಸುವಂತಾಯಿತು’ ಎಂದು ಹೇಳಿದರು.

‘ಹಡ್ಸನ್‌ ಅವರು ಬಿತ್ತಿದ ಅಕ್ಷರ ಬೀಜದ ಫಲವಾಗಿ 1915ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಮೈಸೂರು ಪ್ರಾಂತ್ಯದ ಜನರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು’ ಎಂದರು. ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.