ADVERTISEMENT

ಶಿವಪುರದ ನವಿಲುಗುಡ್ಡಕ್ಕೆ ಕಂಟಕ

ಪಶ್ಚಿಮಘಟ್ಟದ ಅಂಚಿನ ಪ್ರದೇಶದಲ್ಲಿ ಅಲಂಕಾರಿಕ ಶಿಲೆ ಗಣಿಗಾರಿಕೆ

ಬಿ.ಜೆ.ಧನ್ಯಪ್ರಸಾದ್
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಶಿವಪುರದ ನವಿಲುಗುಡ್ಡಕ್ಕೆ ಕಂಟಕ
ಶಿವಪುರದ ನವಿಲುಗುಡ್ಡಕ್ಕೆ ಕಂಟಕ   

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರದ ಸರ್ವೆ ನಂ 51ರ ಜಾಗವನ್ನು ಡೀಮ್ಡ್‌ ಫಾರೆಸ್ಟ್‌ (ಪರಿಗಣಿತ ಅರಣ್ಯ) ಎಂದು ತಜ್ಞರ ಸಮಿತಿ ನಮೂದಿಸಿದ್ದರೂ, ಆ ಜಾಗದಲ್ಲಿ ಕಲ್ಲು ಗಣಿಗಾರಿಕೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿರುವುದು ನವಿಲುಗುಡ್ಡಕ್ಕೆ ಕಂಟಕವಾಗಿ ಪರಿಣಮಿಸಿದೆ.

ಶಿವಪುರ ಗ್ರಾಮದ ಸರ್ವೆ ನಂ 51ರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಅಲ್ಲಿನ ಸಸ್ಯಸಂಕುಲವು ಸರ್ಕಾರಿ ಆದೇಶ (2014ರ ಮೇ 15) ಅನುಸಾರ ಡೀಮ್ಡ್‌ ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಇದು ಗೋಮಾಳ ಜಾಗ ಎಂದು ಉಲ್ಲೇಖಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಪರಿಗಣಿತ ಅರಣ್ಯ ವ್ಯಾಪ್ತಿಗೆ ಒಳಪಡಬೇಕಾದರೆ ಆ ಜಾಗದಲ್ಲಿ ಹೆಕ್ಟೇರ್‌ಗೆ ಇಂತಿಷ್ಟು ಗಿಡಮರಗಳು ಇರಬೇಕು ಎಂಬ ಮಾನದಂಡ ಇದೆ. ಮಾನದಂಡ ಆಧರಿಸಿ ತರೀಕೆರೆ ವಿಭಾಗದಲ್ಲಿ ಬಹಳಷ್ಟು ಪ್ರದೇಶವನ್ನು ಪರಿಗಣಿತ ಅರಣ್ಯ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಶಿವಪುರದ ಜಾಗವನ್ನು ಪರಿಶೀಲಿಸಿ ವಾಸ್ತಾವಾಂಶವನ್ನು ವರದಿಯಲ್ಲಿ ದಾಖಲಿಸಲಾಗಿದೆ’ ಎಂದು ತರೀಕೆರೆ ವಿಭಾಗದ ಆಗಿನ ಸಹಾಯಕ ಅರಣ್ಯಾಧಿಕಾರಿ ಶ್ರೀನಿವಾಸ್‌ ತಿಳಿಸಿದರು.

ADVERTISEMENT

ಪಶ್ಚಿಮಘಟ್ಟದ ಅಂಚಿನಲ್ಲಿರುವ ನವಿಲುಗುಡ್ಡದ ಈ ಜಾಗದಲ್ಲಿ ಅಲಂಕಾರಿಕ ಶಿಲೆ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 30 ವರ್ಷ ಅವಧಿಗೆ ಮಂಜೂರಾತಿ ನೀಡಿದೆ. ಗುತ್ತಿಗೆದಾರರು ಗಣಿಗಾರಿಕೆ ಆರಂಭಿಸಿದ್ದಾರೆ. ಗುಡ್ಡದ ಒಡಲು ಬಗೆದು, ಬಂಡೆಗಳನ್ನು ಸ್ಫೋಟಿಸಿ ಶಿಲೆಗಳನ್ನು ಒಯ್ಯಲಾಗುತ್ತಿದೆ.
‘ಡೀಮ್ಡ್‌ ಫಾರೆಸ್ಟ್‌ ತಜ್ಞರ ಸಮಿತಿಯು ಶಿಫಾರಸನ್ನು ಬದಲಾಯಿಸಲು ಅರಣ್ಯಾಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಅಧಿಕಾರ ಇಲ್ಲ. ಮತ್ತೊಂದು ತಜ್ಞರ ಸಮಿತಿಯೇ ಪರಿಶೀಲನೆ ನಡೆಸಿ ವರದಿ ನೀಡಬೇಕು’ ಎಂದು ಪರಿಸರ ತಜ್ಞ ಎ.ಎನ್‌.ಯಲ್ಲಪ್ಪರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ಡೀಮ್ಡ್‌ ಫಾರೆಸ್ಟ್‌ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿರುವ ಜಾಗವನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿ ಅದು ಡೀಮ್ಡ್‌ ಫಾರೆಸ್ಟ್‌ ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿವರಣೆ ನೀಡಿರುವುದು ತಪ್ಪು’ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ನವಿಲುಗುಡ್ಡದಲ್ಲಿ ನವಿಲು, ಜಿಂಕೆ, ಕರಡಿ, ಮುಳ್ಳುಹಂದಿಗಳು ಇವೆ. ಬೆಟ್ಟಶ್ರೇಣಿಗಳು ಮಾರುತಗಳನ್ನು ತಡೆದು ಈ ಭಾಗದಲ್ಲಿ ಮಳೆ ಸುರಿಸಲು ಸಹಕಾರಿಯಾಗಿವೆ.

ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ದುರ್ಗದಕೋಟೆಯು ಗುಡ್ಡದ ಸನಿಹದಲ್ಲಿ ಇದೆ. ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಹಾನಿ ಉಂಟಾಗುವ ಆತಂಕ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆವರಿಸಿದೆ.

ಕುಡ್ಲೂರು, ಶಿವಪುರ, ಕೊರಟೀಕೆರೆ, ಪುಂಡನಹಳ್ಳಿ ಗ್ರಾಮಸ್ಥರು, ಪರಿಸರ ತಜ್ಞರ ಪ್ರಬಲ ವಿರೋಧದ ನಡುವೆಯೂ ಗಣಿಗಾರಿಕೆ ಮುಂದುವರಿದಿದೆ. ಈ ಪ್ರದೇಶದ ಸುತ್ತಮುತ್ತ ಗಣಿಗಾರಿಕೆಗೆ ಅನುಮತಿ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಇನ್ನೂ 21ಮಂದಿ ಅರ್ಜಿ ಸಲ್ಲಿಸಿರುವುದು ಗ್ರಾಮಸ್ಥರನ್ನು ಕಂಗೆಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.