ADVERTISEMENT

ಸಂಗೀತ ವಿ.ವಿ.ಯಿಂದ ಕೆಟ್ಟ ವಿಮರ್ಶಕರ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:49 IST
Last Updated 5 ಜುಲೈ 2015, 19:49 IST

ಬೆಂಗಳೂರು:  ‘ಗಾಯನ ಸಮಾಜ ಗಳಿಂದ ಇಂದು ಸಂಗೀತ ಉಳಿದಿದೆಯೇ ಹೊರತು ಸರ್ಕಾರ ನಡೆಸುತ್ತಿರುವ ಸಂಗೀತ ವಿಶ್ವವಿದ್ಯಾಲಯದಿಂದ ಅಲ್ಲ’ ಎಂದು ಎಸ್‌.ಎಲ್‌. ಭೈರಪ್ಪ ಹೇಳಿದರು.

ಪುಸ್ತಕ ಶಕ್ತಿ ಪ್ರಕಾಶನವು ಭಾನು ವಾರ ನಗರದಲ್ಲಿ ಆಯೋಜಿಸಿದ್ದ ಎಸ್‌. ರಂಗನಾಥ್‌ ಅವರು ಪಠಿಸಿರುವ ‘ಸಮಗ್ರ ಋಗ್ವೇದ ಸಂಹಿತಾ’ ಸಿ.ಡಿ ಹಾಗೂ ‘ಅನ್ನಬ್ರಹ್ಮ’ ಮತ್ತು ‘ಜಾನಕಿ ಜೀವನಮ್‌’ ಪುಸ್ತಕ ಬಿಡುಗಡೆ ಮಾಡಿ ಮಾತ ನಾಡಿದರು. ‘ಸಂಗೀತ ವಿ.ವಿ.ಯಲ್ಲಿನ ಕಲಿಕೆಯ ಕ್ರಮ ನೋಡಿದರೆ ಅಲ್ಲಿ ಕೆಟ್ಟ ವಿಮರ್ಶ ಕರು ಸೃಷ್ಟಿಯಾಗಬಹುದೇ ಹೊರತು ಒಳ್ಳೆಯ ಸಂಗೀತ, ಗಾಯಕರು ಅಲ್ಲ’ ಎಂದರು.

‘ನಿಜವಾಗಿಯೂ ಶುದ್ಧ ಸಂಗೀತವನ್ನು ಉಳಿಸುವ ಕೆಲಸ ಮಾಡುತ್ತಿರುವವರು ಗಾಯನ ಸಮಾಜದವರು. ಅಲ್ಲಿನ ಸಂಗೀತ ಕಛೇರಿಗಳಲ್ಲಿ ಭಾಗವಹಿಸುವ ಜನ ಯಾರು ಒಳ್ಳೆಯ ಗಾಯಕರು ಎಂಬು ದನ್ನು ನಿರ್ಧರಿಸುತ್ತಾರೆ’ ಎಂದರು.

‘ಶುದ್ಧ ಸಂಗೀತಕ್ಕೆ ಬಂದರೆ ಯಾವುದೇ ರಾಗಕ್ಕೆ ಪದ್ಯದ ಹಂಗು ಇರುವುದಿಲ್ಲ. ಅದರಲ್ಲಿ ಶುದ್ಧ ಆಲಾಪ, ಸ್ವರ ಹಾಗೂ ತಾಳ ಇರುತ್ತದೆ. ಇದರ ವಿಚಾರ ಹೆಚ್ಚಿನವರಿಗೆ  ತಿಳಿಯುವುದಿಲ್ಲ’ ಎಂದು ಹೇಳಿದರು. ‘ಸಾಹಿತ್ಯದಲ್ಲಿ ಎಲ್ಲರೂ ಬಾಯಿ ಹಾಕುತ್ತಾರೆ. ಸಂಗೀತದಲ್ಲಿ ಯಾರೂ  ಬಾಯಿ ಹಾಕುವುದಿಲ್ಲ. ಏಕೆಂದರೆ ಬಹಳಷ್ಟು ಜನರಿಗೆ ಸಂಗೀತ ತಿಳಿಯು ವುದಿಲ್ಲ’ ಎಂದು ತಿಳಿಸಿದರು.

‘ವೇದದಿಂದಲೇ ಸಂಗೀತ, ಸ್ವರ ಹುಟ್ಟಿದೆ ಎಂದು ನಂಬದಿದ್ದರೆ ಕೊನೆಗೆ ಸಂಗೀತ ಎಲ್ಲಿ ಉಳಿಯುತ್ತದೆ’ ಎಂದು ಪ್ರಶ್ನಿಸಿದರು.
‘ವೇದದ ಬಗ್ಗೆ ಹೇಳುತ್ತಿದ್ದಾರೆ ಎಂದರೆ ಕೇಸರೀಕರಣದ ಮಾತು ಆಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಯಾರೂ ಅಂತಹವರ ಬಗ್ಗೆ ತಲೆ ಕೆಡಿಸಿ ಕೊಳ್ಳಬಾರದು. ವೇದ ಜ್ಞಾನದ ಕಣಜ. ರಾಮಾಯಣ, ಮಹಾಭಾರತ ವೇದ ದಿಂದಲೇ ಬಂದದ್ದು’ ಎಂದು ಹೇಳಿದರು.
‘ಚೆನ್ನೈನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿಸಿದ ಕಲಾಸಂಸ್ಥೆಗೆ ಕೇಂದ್ರದ ಹಿಂದಿನ ಸರ್ಕಾರ ಲೀಲಾ ಸ್ಯಾಮ್ಸನ್‌ ಎನ್ನುವ ನೃತ್ಯಗಾತಿಯನ್ನು ನಿರ್ದೇಶಕಿ ಯಾಗಿ  ನೇಮಿಸಿತ್ತು. ನಮ್ಮ ದೇಶ, ಕಲೆ ಎಲ್ಲವೂ ಜಾತ್ಯತೀತ ಎಂದು ಹೇಳಿ ಅಲ್ಲಿದ್ದ ಗಣೇಶನ ವಿಗ್ರಹವನ್ನು ಅವರು ತೆಗೆಸಿದ್ದರು’ ಎಂದರು.

‘ನೃತ್ಯ, ಸಂಗೀತ ಸೇರಿದಂತೆ ಇತರ ಕಲೆಗಳನ್ನು ಪ್ರಸ್ತುತಪಡಿಸುವುದಕ್ಕೂ ಮುನ್ನ ಕಲಾವಿದರು ಗಣೇಶನನ್ನು ಸ್ತುತಿ ಸುತ್ತಾರೆ. ನಮ್ಮ ಕಲೆಗೆ ಇಂತಹದ್ದೊಂದು ಸಂಪ್ರದಾಯ ಇದೆ. ಆದರೆ ಎಲ್ಲವನ್ನೂ ಜಾತ್ಯತೀತ ಗೊಳಿಸುತ್ತೇವೆ ಎಂದು ಅದನ್ನು ಬದಲಾಯಿಸಲು ಹೋದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಯಾವ ಸಂಸ್ಥೆಯನ್ನು ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆಯೊ   ಅದಕ್ಕೆ ಅಂತಹ ಹಿನ್ನೆಲೆಯ ಯೋಗ್ಯ ವ್ಯಕ್ತಿ ಯನ್ನು ನೇಮಿಸಬೇಕು.  ಇಲ್ಲದಿದ್ದರೆ ಅದರ ಉದ್ದೇಶ ಈಡೇರುವುದಿಲ್ಲ. ಈ ಕೆಲಸ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆ ಯುತ್ತಿದೆ. ನಮ್ಮಲ್ಲಿ ಶೋಧನಾ ಸಮಿತಿ ಹೆಸರಿಗಷ್ಟೇ ಇದೆ’ ಎಂದರು.

‘ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕೆಂದು ಆಗ್ರಹಿಸಿದವರಲ್ಲಿ ನಾನೂ ಒಬ್ಬ. ಯಡಿಯೂರಪ್ಪ ಸರ್ಕಾರ ಅದನ್ನು ಸ್ಥಾಪಿಸಿತ್ತು. ಆದರೆ ಸಂಸ್ಕೃತದಲ್ಲಿ ಹತ್ತು ನಿಮಿಷ ಭಾಷಣ ಮಾಡಲು ಆಗದವರನ್ನು ಅದಕ್ಕೆ ನೇಮಿಸಿತ್ತು. ಬಹು ತೇಕ ವಿಶ್ವವಿದ್ಯಾಲಯಗಳಲ್ಲಿ  ಸಂಸ್ಕೃತ ವಿದ್ವಾಂಸರು ಐಡಿಯಾಲಜಿ ವಿದ್ವಾಂಸ ರಾಗಿದ್ದಾರೆ. ಯಾವುದೋ ಸಿದ್ಧಾಂತದ ಮೂಲಕ ವಿಷಯವನ್ನು ವಿಶ್ಲೇಷಣೆ ಮಾಡುತ್ತಾರೆ’ ಎಂದರು.

ಶತಾವಧಾನಿ ಆರ್‌. ಗಣೇಶ್‌ ಮಾತ ನಾಡಿ, ‘ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ನೂರಾರು ಕಾಲೇಜುಗಳು ಇವೆ. ಆದರೆ ಬೆರ ಳೆಣಿಕೆಯ ಕಾಲೇಜು ಗಳಲ್ಲಿ ಮಾತ್ರ ಸಂಸ್ಕೃತ ದಲ್ಲಿ ಅಧ್ಯಯನಕ್ಕೆ ಅವಕಾಶ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.