ADVERTISEMENT

ಸಾಹಿತ್ಯದಿಂದ ಸೌಹಾರ್ದತೆ

ಸಾರ್ಕ್‌ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವನಾಥ್‌ ಪ್ರಸಾದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೆಂಗಳೂರು: ‘ಸಾಹಿತ್ಯದಿಂದ ಮಾತ್ರ ಸೌಹಾರ್ದತೆ ತರಲು ಸಾಧ್ಯ.  ಸಾಹಿತ್ಯಕ್ಕೆ ಅಂತಹ ಶಕ್ತಿ ಇದೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್‌ ಪ್ರಸಾದ್ ತಿವಾರಿ ಅವರು ಅಭಿಪ್ರಾಯಪಟ್ಟರು.

ಸಾರ್ಕ್‌ ಸಾಂಸ್ಕೃತಿಕ ಕೇಂದ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ಕ್‌ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಂವೇದನೆ ಮರೆಯಾಗುತ್ತಿದೆ. ಭಯೋತ್ಪಾದನೆ, ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಧ್ವನಿ ಇಲ್ಲದವರಿಗೆ ಧ್ವನಿ ಒದಗಿಸಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಮೋದ್‌ ಜೈನ್‌ ಮಾತನಾಡಿ, ‘ವಿಶ್ವದ ವಿವಿಧ ಭಾಷೆಗಳಲ್ಲಿ ಸಾಹಿತ್ಯ ರಚನೆಯಾಗಿದೆ. ಆದರೆ, ಎಲ್ಲ ಸಾಹಿತ್ಯದ ಸಂವೇದನೆ ಒಂದೇ ಆಗಿದೆ.  ದಕ್ಷಿಣ ಏಷ್ಯಾ ರಾಷ್ಟ್ರಗಳು ಸೇರಿ ಸಾಂಸ್ಕೃತಿಕ, ಸಾಹಿತ್ಯಿಕ ವಿಷಯಗಳ ವಿನಿಮಯಕ್ಕಾಗಿ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕೆಲಸ’ ಎಂದರು.

ಶ್ರೀಲಂಕಾ ಸಾಂಸ್ಕೃತಿಕ ಇಲಾಖೆ ಅಧಿಕಾರಿ ಮಲಿಂದಾ ಸೇನವಿರತ್ನೆ ಮಾತನಾಡಿ, ‘ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಯುವ ಜನತೆ ಸಮಾಜ ವಿರೋಧಿ ಚಟುವಟಿಕೆಗಳತ್ತ ಹೆಚ್ಚು ವಾಲುತ್ತಿದ್ದಾರೆ. ಇದನ್ನು ತಡೆಯುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ’ ಎಂದು ಹೇಳಿದರು.

ಅಕಾಡೆಮಿಯ ಉಪಾಧ್ಯಕ್ಷ ಚಂದ್ರಶೇಖರ ಕಂಬಾರ, ‘ನಮ್ಮ ದೇಶದಲ್ಲಿ ಉತ್ತಮ ಸಾಹಿತ್ಯ ಇದೆ. ಆದರೆ, ಇಂಗ್ಲಿಷ್‌ ಸಾಹಿತ್ಯವೇ ಶ್ರೇಷ್ಠ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ಕ್‌ ಸದಸ್ಯ ರಾಷ್ಟ್ರಗಳ ಕಾವ್ಯವನ್ನು ವಿಶ್ವಕ್ಕೆ ಪರಿಚಯಿಸಲು ಈ ಉತ್ಸವ ಉತ್ತಮ ವೇದಿಕೆಯಾಗಿದೆ’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಇದು ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಿದೆ. ಆಯಾ ರಾಜ್ಯಗಳ ರಾಜ್ಯ ಭಾಷೆ ಮೂಲಕ ಶಿಕ್ಷಣ ನೀಡಲು ಕಾನೂನು ರೂಪಿಸಬೇಕಾದ ಅಗತ್ಯ ಇದೆ.  ಈ ಬಗ್ಗೆ ಅಕಾಡೆಮಿ ವತಿಯಿಂದ 5ಲಕ್ಷ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.