ADVERTISEMENT

ಸಿಮ್‌ಕಾರ್ಡ್‌ ಅಕ್ರಮ ಮಾರಾಟ ಜಾಲ ಪತ್ತೆ

ಶಂಕಿತ ಉಗ್ರನಿಗೂ ಸಿಮ್‌ ಮಾರಿದ್ದ ಆರೋಪಿಗಳು: ಏಳು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 20:16 IST
Last Updated 27 ಜನವರಿ 2015, 20:16 IST

ಬೆಂಗಳೂರು: ನಗರದಲ್ಲಿ ಆಶ್ರಯ ಪಡೆದಿದ್ದ ‘ಬೋಡೊ ಲ್ಯಾಂಡ್‌ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ’ (ಎನ್‌ಡಿಎಫ್‌ಬಿ) ಉಗ್ರ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಶಿಬಿಗಿರಿಗೆ ಅಕ್ರಮವಾಗಿ ಸಿಮ್‌ಕಾರ್ಡ್‌ ಮಾರಾಟ ಮಾಡಿದ್ದ ಆರೋಪದ ಮೇಲೆ ವೊಡಾಫೋನ್‌ ಸಂಸ್ಥೆ ವಿರುದ್ಧ ದೂರು ದಾಖಲಿಸಿರುವ ಸಿಸಿಬಿ ಪೊಲೀಸರು, ಏಳು ಮಂದಿಯನ್ನು ಬಂಧಿಸಿದ್ದಾರೆ.

ಅಪರಾಧ ಹಿನ್ನೆಲೆಯುಳ್ಳ ಶಿಬಿಗಿರಿ, ಬಂಧನ ಭೀತಿ­ಯಿಂದ ಜ.21ರಂದು ಮಧ್ಯಾಹ್ನ 12.30ರ ವೇಳೆಗೆ ಅಸ್ಸಾಂನಿಂದ ರೈಲಿನಲ್ಲಿ ನಗರಕ್ಕೆ ಬಂದಿದ್ದ. ನಂತರ ಅದೇ ದಿನ ಆತ ಎಲೆಕ್ಟ್ರಾನಿಕ್‌ಸಿಟಿಯ ‘ಬಿಸ್ಮಿಲ್ಲಾ ಮೊಬೈಲ್‌ ಕೇರ್‌’ ಮಳಿಗೆಯಲ್ಲಿ ವೊಡಾ­ಫೋನ್‌ ಸಿಮ್‌ಕಾರ್ಡ್‌ ಖರೀದಿಸಿದ್ದ. ಮಳಿಗೆಯ ಮಾಲೀಕ ಸೈಯದ್‌ ಸೈಫುಲ್ಲಾ ಮತ್ತು ಮಾರಾಟ ಪ್ರತಿನಿಧಿ ಎಜಾಜ್‌ ಅಹಮ್ಮದ್‌ ಅವರು ಸೂಕ್ತ ದಾಖಲೆಪತ್ರಗಳನ್ನು ಪಡೆಯದೆ ಮತ್ತು ಆತನ ಪೂರ್ವಾಪರ ಪರಿಶೀಲಿಸದೆ ಸಿಮ್‌ಕಾರ್ಡ್‌ ಮಾರಾಟ ಮಾಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘ಶಿಬಿಗಿರಿ, ನಗರಕ್ಕೆ ಬರುವುದಕ್ಕೆ ಮೂರು ತಾಸು ಮೊದಲೇ ಆ ಸಿಮ್‌ಕಾರ್ಡ್‌ ಜ.21ರಂದು ಬೆಳಿಗ್ಗೆ 9.30ಕ್ಕೆ ಚಾಲು (ಆ್ಯಕ್ಟಿವೇಟ್‌) ಆಗಿತ್ತು. ಸೈಯದ್‌ ಮತ್ತು ಎಜಾಜ್‌, ಬೇರೊಬ್ಬ ವ್ಯಕ್ತಿಯ ಭಾವಚಿತ್ರ, ವೈಯಕ್ತಿಕ ವಿವರ ಹಾಗೂ ದಾಖಲೆಪತ್ರ ಸಲ್ಲಿಸಿ ಸಿಮ್‌ಕಾರ್ಡ್‌ ಚಾಲು ಮಾಡಿಸಿದ್ದರು. ವೊಡಾ­ಫೋನ್‌ ಸಂಸ್ಥೆಯ ವಿತರಕರು, ಏಜೆಂಟರು ಮತ್ತು ಸಿಬ್ಬಂದಿಯು ದಾಖಲೆಪತ್ರ ಹಾಗೂ ವೈಯಕ್ತಿಕ ವಿವರಗಳನ್ನು ಪರಿಶೀಲಿಸದೆ ಆ ಸಿಮ್‌ಕಾರ್ಡ್‌ ಚಾಲು ಮಾಡಿಕೊಟ್ಟಿದ್ದರು’ ಎಂದು ಸಿಸಿಬಿ ಡಿಸಿಪಿ ಅಭಿಷೇಕ್‌ ಗೋಯಲ್‌ ಹೇಳಿದ್ದಾರೆ.

ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್‌ಸಿಟಿ ಸುತ್ತ­ಮುತ್ತಲಿನ ಪ್ರದೇಶದಲ್ಲಿ ವೊಡಾಫೋನ್‌ ಸಿಮ್‌ಕಾರ್ಡ್‌­­ಗಳ ಅಧಿಕೃತ ಮಾರಾಟಗಾರರಾದ ಕುಶಾಲ್‌ ಏಜೆನ್ಸಿಯ ಮಾಲೀಕ ಶ್ರೀನಿವಾಸ್‌ರೆಡ್ಡಿ, ಮಾರಾಟ ವಿಭಾಗದ ವೇಣುಕುಮಾರ್‌, ಸಂತೋಷ್‌, ರಮೇಶ್‌, ಕಂಪ್ಯೂಟರ್‌ ಆಪರೇಟರ್‌ ಗಂಗರಾಜು, ಮಳಿಗೆಯ ಸೈಯದ್‌ ಮತ್ತು ಎಜಾಜ್‌ನನ್ನು ಬಂಧಿಸ­ಲಾಗಿದೆ. ಆರೋಪಿಗಳಿಂದ ನಕಲಿ ದಾಖಲೆಪತ್ರಗಳು, ಭರ್ತಿ ಮಾಡಿದ ಅರ್ಜಿಗಳು ಹಾಗೂ ಭಾವಚಿತ್ರ­ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತನಿಖೆಗೆ ಸಹಕಾರ

‘ಪ್ರಕರಣ ಸಂಬಂಧ ಪೊಲೀಸ್‌ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸಂಸ್ಥೆಯ ಪಾಲು­ದಾರರು, ವಿತರಕರು ಹಾಗೂ ಮಾರಾಟ­ಗಾರರು ಸಹ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಂಧಿತರ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ವೊಡಾಫೋನ್‌ ಸಂಸ್ಥೆಯ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಯಲಾಗಿದ್ದು ಹೇಗೆ
ಆರೋಪಿ ಶಿಬಿಗಿರಿಯ ಬೆನ್ನುಬಿದ್ದಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಅಸ್ಸಾಂ ಪೊಲೀಸರು, ಆತ ಬಳಸುತ್ತಿದ್ದ ಮೊಬೈಲ್‌ ಸಂಖ್ಯೆಯ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು  ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಸೋಮವಾರ (ಜ.26) ಶಿಬಿಗಿರಿಯನ್ನು ಬಂಧಿಸಿದ್ದರು. ನಂತರ ಆತ­ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಿಮ್‌­ಕಾರ್ಡ್‌ ಅಕ್ರಮ ಮಾರಾಟ ಜಾಲ ಬಯಲಾಗಿದೆ.

ADVERTISEMENT

ವೊಡಾಫೋನ್‌ ಸಂಸ್ಥೆ ಹಾಗೂ ಬಂಧಿತರ ವಿರುದ್ಧ ವಂಚನೆ, ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ­ಪತ್ರಗಳ ಸೃಷ್ಟಿ, ಅಪರಾಧ ಸಂಚು, ನಕಲಿ ದಾಖಲೆ­ಪತ್ರ­ಗಳನ್ನು ಅಸಲಿ ಎಂದು ಬಳಸಿ ವಂಚಿಸಿದ ಆರೋಪದಡಿ ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಿಸ­ಲಾಗಿದೆ ಎಂದು ಗೋಯಲ್‌ ತಿಳಿಸಿದ್ದಾರೆ.

ಹಣ ಸಂಪಾದನೆ ಮತ್ತು ಗ್ರಾಹಕರನ್ನು ಸೆಳೆಯಲು ಎಲೆಕ್ಟ್ರಾನಿಕ್‌ಸಿಟಿ ಸುತ್ತಮುತ್ತ ಈ ರೀತಿ ಅಕ್ರಮವಾಗಿ ಸಿಮ್‌ಕಾರ್ಡ್‌ ಮಾರಲಾಗುತ್ತಿದೆ. ನಕಲಿ ದಾಖಲೆಪತ್ರ, ವೈಯಕ್ತಿಕ ವಿವರ ಸಲ್ಲಿಸಿ ನಿಗದಿತ ಅವಧಿಗೂ ಮುನ್ನವೇ ಕಾನೂನುಬಾಹಿರವಾಗಿ ಸಿಮ್‌ಕಾರ್ಡ್‌ ಚಾಲು ಮಾಡಿಕೊಡಲಾಗುತ್ತಿದೆ. ಈ ಅಕ್ರಮದಲ್ಲಿ ವೊಡಾಫೋನ್‌ ಸಂಸ್ಥೆ ಸಿಬ್ಬಂದಿ ಕೂಡ ಕುಶಾಲ್‌ ಏಜೆನ್ಸಿಯೊಂದಿಗೆ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

24 ತಾಸು ಬೇಕು: ಸಿಮ್‌ಕಾರ್ಡ್‌ ಚಿಲ್ಲರೆ ಮಾರಾಟ­ಗಾರರು (ರಿಟೇಲರ್‌್ಸ) ಗ್ರಾಹಕರ ಭಾವಚಿತ್ರ, ದಾಖಲೆಪತ್ರ ವೈಯಕ್ತಿಕ ವಿವರ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಸಗಟು ವ್ಯಾಪಾರಿಗಳಿಗೆ ಸಲ್ಲಿಸಬೇಕು. ನಂತರ ಸಗಟು ವ್ಯಾಪಾರಿಗಳು ಆ ಎಲ್ಲಾ ದಾಖಲೆಗಳನ್ನು ಸಿಮ್‌ಕಾರ್ಡ್‌ ಸಂಸ್ಥೆಗೆ ಕಳುಹಿಸಿಕೊಡುತ್ತಾರೆ.

ಬಳಿಕ ಸಂಸ್ಥೆಯ ಸಹಾಯವಾಣಿ ಸಿಬ್ಬಂದಿಯು ಗ್ರಾಹಕರಿಗೆ ಕರೆ ಮಾಡಿ, ಅವರ ವೈಯಕ್ತಿಕ ವಿವರ ಹಾಗೂ ದಾಖಲೆಪತ್ರ ಮತ್ತಿತರ ಅಂಶಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಆ ನಂತರವಷ್ಟೇ ಸಿಮ್‌ಕಾರ್ಡ್‌ ಚಾಲುವಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ 24 ತಾಸುಗಳ ಕಾಲಾವಕಾಶ ಬೇಕು.

ಆದರೆ, ಕುಶಾಲ್‌ ಏಜೆನ್ಸಿ ಮತ್ತು ವೊಡಾಫೋನ್‌ ಸಂಸ್ಥೆ ನಡುವಣ ಹೊಂದಾಣಿಕೆಯಿಂದ ಮೂರು ತಾಸಿನಲ್ಲೇ ಸಿಮ್‌ಕಾರ್ಡ್‌ಗಳು ಚಾಲುವಾಗುತ್ತಿದ್ದವು. ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಸಂಸ್ಥೆಯ ಸಹಾಯವಾಣಿ ಸಿಬ್ಬಂದಿಗೆ ಕರೆ ಮಾಡಿ ಸಿಮ್‌ಕಾರ್ಡ್‌ಗಳನ್ನು ಬೇಗನೆ ಚಾಲು ಮಾಡಿಸು­ತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.