ADVERTISEMENT

ಸುಲಿಗೆ: ಕರವೇ ವಾರ್ಡ್‌ ಅಧ್ಯಕ್ಷ ಸೆರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ವರುಣ್
ವರುಣ್   

ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಕರ್ನಾಟಕ ರಕ್ಷಣಾ ವೇದಿಕೆಯ ಜೋಗುಪಾಳ್ಯ ವಾರ್ಡ್‌ ಘಟಕದ ಅಧ್ಯಕ್ಷ ವರುಣ್‌ ಹಾಗೂ ಆತನ ಸಹಚರ ರಿಷಿ ಎಂಬಾತನನ್ನು ಹಲಸೂರು ಬಂಧಿಸಲಾಗಿದೆ.

ಚಿನ್ನಿ ಅಲಿಯಾಸ್‌ ವರುಣ್‌ ಗ್ಯಾಂಗ್‌ ಕಟ್ಟಿಕೊಂಡು ಈ ಕೃತ್ಯ ಎಸಗುತ್ತಿದ್ದ. ಆತ ಕೃತ್ಯಕ್ಕೆ ಬಳಸಿದ್ದ ಸ್ಕೂಟರನ್ನು ಜಪ್ತಿ ಮಾಡಲಾಗಿದೆ.

‘ಹಲಸೂರಿನ ಶಾಪಿಂಗ್‌ ಮಾಲ್‌ನಲ್ಲಿ ಕೆಲಸ ಮಾಡುತ್ತಿರುವ ವಿಲ್ಸನ್‌ ಎಂಬುವರು ಭಾನುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿ
ದ್ದರು. ಅವರನ್ನು ಮೆಟ್ರೊ ನಿಲ್ದಾಣದ ಬಳಿ ಅಡ್ಡಗಟ್ಟಿದ್ದ ವರುಣ್‌ ಹಾಗೂ ಆತನ ನಾಲ್ವರು ಸಹಚರರು, ₹4,750 ಹಾಗೂ ವಾಚ್‌ ಸುಲಿಗೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಘಟನೆ ಬಗ್ಗೆ ವಿಲ್ಸನ್‌, ರಾತ್ರಿಯೇ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚುವಂತೆ ಗಸ್ತಿನಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದೆವು. ತಡರಾತ್ರಿಯೇ ವರುಣ್‌ ಹಾಗೂ ರಿಷಿ ಸಿಕ್ಕಿಬಿದ್ದರು. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದರು.

ಮೊದಲ ಬಾರಿ ಕೃತ್ಯ: ‘ಖರ್ಚಿಗೆ ಹಣವಿರಲಿಲ್ಲ. ಹೀಗಾಗಿ ಗ್ಯಾಂಗ್‌ ಕಟ್ಟಿಕೊಂಡು ಮೊದಲ ಬಾರಿಗೆ ಇಂಥ ಕೃತ್ಯ ಎಸಗಿದೆ’ ಎಂದು ವರುಣ್‌ ತಪ್ಪೊಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.