ADVERTISEMENT

ಸೇಬು ಮಾರಾಟ ಮೇಳಕ್ಕೆ ಚಾಲನೆ

ಚೀನಾ, ಅಮೆರಿಕ, ಬ್ರೆಜಿಲ್‌ ದೇಶಗಳ 10 ಬಗೆಯ ಸೇಬು ಲಭ್ಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:46 IST
Last Updated 28 ಏಪ್ರಿಲ್ 2016, 19:46 IST
ಸೇಬು ಹಣ್ಣುಗಳ ಮೇಳವನ್ನು ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಿದರು. ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ, ಅಧ್ಯಕ್ಷ ಜಿ.ಆರ್‌.ಶ್ರೀನಿವಾಸನ್‌, ವಾಂಗ್‌ ಹೈ ಫೆಂಗ್‌ ಇದ್ದಾರೆ. –ಪ್ರಜಾವಾಣಿ ಚಿತ್ರ
ಸೇಬು ಹಣ್ಣುಗಳ ಮೇಳವನ್ನು ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಿದರು. ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ, ಅಧ್ಯಕ್ಷ ಜಿ.ಆರ್‌.ಶ್ರೀನಿವಾಸನ್‌, ವಾಂಗ್‌ ಹೈ ಫೆಂಗ್‌ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಚೀನಾ ದೇಶದ ಪ್ರಸಿದ್ಧ ತಳಿಗಳ ಸೇಬು ಹಣ್ಣುಗಳನ್ನು ಸವಿಯಬೇಕೆಂದರೆ ಲಾಲ್‌ಬಾಗ್‌ನ ಗಾಜಿನ ಮನೆ ಬಳಿ ಇರುವ ಮಾರಾಟ ಮಳಿಗೆಗೆ ಭೇಟಿ ನೀಡಬಹುದು. ಹಾಪ್‌ಕಾಮ್ಸ್‌ ಹಾಗೂ ಭಾರತ– ಚೀನಾ ಆರ್ಥಿಕ ಮತ್ತು ಸಂಸ್ಕೃತಿ ಮಂಡಳಿ ವತಿಯಿಂದ ಗುರುವಾರದಿಂದ ಮೇ ಒಂದರವರೆಗೆ ಸೇಬು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ಮೇಳದಲ್ಲಿ ಚೀನಾ, ಬ್ರೆಜಿಲ್‌, ಇರಾನ್‌, ನ್ಯೂಜಿಲ್ಯಾಂಡ್‌, ಅಮೆರಿಕ ದೇಶದ ಒಟ್ಟು ಹತ್ತು ಬಗೆಯ ಸೇಬು ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 6 ಬಗೆಯ ಸೇಬುಗಳಿಗೆ ಶೇ 10ರಿಂದ 15ರಷ್ಟು  ರಿಯಾಯಿತಿ  ನೀಡಲಾಗುತ್ತದೆ.

ಮೇಳಕ್ಕೆ ಚಾಲನೆ ನೀಡಿದ ತೋಟ ಗಾರಿಕೆ ಸಚಿವ ಶಾಮನೂರು ಶಿವ ಶಂಕರಪ್ಪ ಮಾತನಾಡಿ, ‘ಭಾರತ ಹಾಗೂ ಚೀನಾ ದ್ವಿಪಕ್ಷೀಯ ಮಾತುಕತೆ ನಡೆಸಿ ಹಣ್ಣುಗಳ ಪರಸ್ಪರ ವಿನಿಮಯಕ್ಕೆ ಸಂಕಲ್ಪ ಮಾಡಲಾಗಿದೆ. ಈ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳುವುದರಿಂದ ಎರಡೂ ದೇಶಗಳ ಬೆಳೆಗಾರರಿಗೆ ಅನುಕೂಲ ಆಗಲಿದೆ’ ಎಂದರು.

‘ಚೀನಾ ದೇಶದಲ್ಲಿ ವಾರ್ಷಿಕ 3.32 ಕೋಟಿ ಟನ್‌ ಸೇಬು, ಅಮೆರಿಕದಲ್ಲಿ 42 ಸಾವಿರ ಟನ್‌, ಟರ್ಕಿಯಲ್ಲಿ 26 ಸಾವಿರ ಟನ್‌, ಇಟಲಿಯಲ್ಲಿ 22 ಸಾವಿರ ಟನ್‌, ಭಾರತದಲ್ಲಿ 21 ಸಾವಿರ ಟನ್‌ ಸೇಬು ಹಣ್ಣುಗಳನ್ನು ಬೆಳೆಯಲಾಗುತ್ತದೆ. ಜಗತ್ತಿನ ಸೇಬು ಹಣ್ಣುಗಳ ಉತ್ಪಾದನೆ ಯಲ್ಲಿ ಚೀನಾದ ಪಾಲು ಶೇ 40ರಷ್ಟು ಇದೆ’ ಎಂದರು.

‘ಮೇಳದಲ್ಲಿ ₹ 20ರಿಂದ 30 ಕಡಿಮೆ ದರಕ್ಕೆ ಸೇಬು ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಚೀನಾ ದೇಶದ 50  ಪ್ರತಿನಿಧಿಗಳು, 15 ಮಂದಿ ವರ್ತಕರು ಮೇಳದಲ್ಲಿ ಭಾಗವಹಿಸಿ ದ್ದಾರೆ’ ಎಂದು ಹೇಳಿದರು.

ಚೀನಾದ ವೈನಮ್‌ ಮುನ್ಸಿಪಲ್‌ ಪೀಪಲ್ಸ್‌ ಗೌರ್‍ನಮೆಂಟ್‌ನ ಡೆಪ್ಯೂಟಿ ಸೆಕ್ರೆಟರಿ ಜನರಲ್‌ ವಾಂಗ್‌ ಹೈ ಫೆಂಗ್‌ ಮಾತನಾಡಿ, ‘ಚೀನಾ ಮತ್ತು ಭಾರತ ಶರವೇಗದಲ್ಲಿ ಅಭಿವೃದ್ಧಿ ಹೊಂದು ತ್ತಿರುವ ರಾಷ್ಟ್ರಗಳು. ಎರಡೂ ದೇಶಗಳ ಹಣ್ಣುಗಳ ಪರಸ್ಪರ ವಿನಿಮಯಕ್ಕೆ ಇಂತಹ ಮೇಳಗಳು ಸಹಕಾರಿಯಾ ಗುತ್ತವೆ’ ಎಂದರು.

ಚೀನಾ ದೇಶದ ಆರು ಮಂದಿಗೆ ಮೈಸೂರು ಪೇಟ ತೊಡಿಸಿ, ಶಲ್ಯ ಹಾಕಿ, ಮೈಸೂರು ಅರಮನೆಯ ಪ್ರತಿಕೃತಿಯನ್ನು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ಚೀನಾದ ಪ್ರತಿನಿಧಿಗಳು ಚೀನೀ ಲಿಪಿಯನ್ನು ಒಳಗೊಂಡ ವಸ್ತ್ರವನ್ನು ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಿ ಸನ್ಮಾನಿಸಿದರು.

ಸೇಬು ತಳಿ  ದರ (ಕೆ.ಜಿ.ಗೆ)
* ಡೆಲಿಷಿಯಸ್‌ ಸೇಬು ₹ 148
* ವಾಷಿಂಗ್ಟನ್‌ ಸೇಬು ₹ 198
* ಹಸಿರು ಸೇಬು ₹ 240
* ಇರಾನ್‌ ಸೇಬು ₹ 163
* ಚೈನಾ ಪ್ಯೂಜಿ ಸೇಬು ₹ 166
* ಚೈನಾ ವೆರೈಟಿ ಸೇಬು  ₹ 126
* ಬ್ರೆಜಿಲ್‌ ಸೇಬು ₹165
* ನ್ಯೂಜಿಲ್ಯಾಂಡ್‌ ಗಾಲ ಸೇಬು ₹ 220
* ಗೋಲ್ಡನ್‌ ಡೆಲಿಷಿಯಸ್‌ಸೇಬು ₹ 190
* ಆನ್‌ಯು ಸೇಬು ₹ 145

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.