ADVERTISEMENT

ಸೈನೈಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:33 IST
Last Updated 21 ಫೆಬ್ರುವರಿ 2017, 19:33 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಕೊಠಡಿಯ ಪಕ್ಕದ ಸೆಲ್‌ನಲ್ಲಿದ್ದ ಸರಣಿ ಕೊಲೆಗಳ ಹಂತಕಿ ಸೈನೈಡ್ ಮಲ್ಲಿಕಾಳನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.

‘ಮಲ್ಲಿಕಾ ಮೊದಲು ಹಿಂಡಲಗಾ ಜೈಲಿನಲ್ಲೇ ಇದ್ದಳು. ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತರಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕಾರಣ ಆಕೆಯನ್ನು ಮತ್ತೆ ಸ್ಥಳಾಂತರ ಮಾಡಲಾಗಿದೆ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಶಶಿಕಲಾ ಅವರಿಗೆ ಭದ್ರತೆ ಒದಗಿಸುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ADVERTISEMENT

ಭೇಟಿಯಾಗದ ಶಶಿಕಲಾ: ತಮ್ಮ ನೆಚ್ಚಿನ ನಾಯಕಿಯನ್ನು ಭೇಟಿಯಾಗಲು ಮಂಗಳವಾರ ಜೈಲಿಗೆ ಬಂದಿದ್ದ ತಮಿಳುನಾಡಿನ ಮೂವರು ಮಾಜಿ ಸಚಿವೆಯರು, ಶಶಿಕಲಾ ಅವರ ಭೇಟಿಯ ಅವಕಾಶ ಸಿಗದೆ ನಿರಾಸೆಯಿಂದ ಮರಳಿದರು.

ಕುಟುಂಬ ಸದಸ್ಯರು ಹಾಗೂ ವಕೀಲರನ್ನು ಹೊರತುಪಡಿಸಿ, ಸದ್ಯ ಯಾರಿಗೂ ಭೇಟಿಯ ಅವಕಾಶ ಕೊಡಬೇಡಿ ಎಂದು ಶಶಿಕಲಾ ಅವರೇ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಸೋಮವಾರವಷ್ಟೇ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸಂಬಂಧಿ ದೀಪಕ್ ಅವರು ಜೈಲಿಗೆ ಬಂದು ಶಶಿಕಲಾ ಜತೆ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪಕ್ಷದ ಮಹಿಳಾ ಕಾರ್ಯಕರ್ತೆಯರು ಜೈಲಿಗೆ ಬಂದಿದ್ದರು.

ಮುಂದುವರಿದ ಕಸರತ್ತು
ಶಶಿಕಲಾ ಅವರು ಚೆನ್ನೈ ಕಾರಾಗೃಹಕ್ಕೆ ಸ್ಥಳಾಂತರವಾಗಲು ವಕೀಲರ ಮೂಲಕವೇ ಕಸರತ್ತು ಮುಂದುವರಿಸಿದ್ದಾರೆ. ಫೆ.19ರೊಳಗೆ ಉಭಯ ರಾಜ್ಯಗಳ ಬಂದೀಖಾನೆ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆಯಲು ನಿರ್ಧರಿಸಿದ್ದ ಶಶಿಕಲಾ, ವಕೀಲರ ಸಲಹೆಯಂತೆಯೇ ತಡವಾಗಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.