ADVERTISEMENT

ಸೋಲಿನ ಭೀತಿಯಿಂದ ಹತಾಶೆಯ ಹೇಳಿಕೆ

ಸದಾನಂದಗೌಡಗೆ ಡಿಕೆಶಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:42 IST
Last Updated 12 ಫೆಬ್ರುವರಿ 2016, 19:42 IST
ಸೋಲಿನ ಭೀತಿಯಿಂದ ಹತಾಶೆಯ ಹೇಳಿಕೆ
ಸೋಲಿನ ಭೀತಿಯಿಂದ ಹತಾಶೆಯ ಹೇಳಿಕೆ   

ಬೆಂಗಳೂರು: ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಭೀತಿಯಿಂದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಚುನಾವಣಾ ಅಕ್ರಮದ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಟೀಕಿಸಿದರು.

‘ಗುರುವಾರ ಸಂಜೆ ಪ್ರಚಾರದ ಅವಧಿ ಮುಗಿದ ನಂತರ ನಮ್ಮ ಸಚಿವರಾಗಲಿ, ಶಾಸಕರಾಗಲಿ ಹೆಬ್ಬಾಳ ಕ್ಷೇತ್ರದಲ್ಲಿ ಇರಲಿಲ್ಲ. ವಿನಾಕಾರಣ ಸದಾನಂದ ಗೌಡರು ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು. ‘ನಮ್ಮ ಪಕ್ಷದ ಸ್ಥಳೀಯ ಮುಖಂಡರೇ ಚುನಾವಣೆ ನಡೆಸುತ್ತಿ
ದ್ದಾರೆ. ಯಾವ ಅಕ್ರಮವೂ ನಡೆಸಿಲ್ಲ. ಸೋಲುವ ಭೀತಿಯಿಂದಾಗಿ ಹಣ ಹಂಚುತ್ತಿದ್ದಾರೆನ್ನುವ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿ ಒಡೆದ ಮನೆಯಾಗಿದೆ. ಆ ಪಕ್ಷದ ಸ್ಥಳೀಯ ಮುಖಂಡರೇ ಅವರ ಅಭ್ಯರ್ಥಿಯನ್ನು ಸೋಲಿಸಲು ಪಣತೊಟ್ಟಿದ್ದಾರೆ. ಹೀಗಾಗಿ ಬರೇ ಆರೋಪಗಳ ಮೂಲಕ ಜನರ ಮನಸ್ಸನ್ನು ಬದಲಿಸಲು ಸಾಧ್ಯ ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದು ಖಚಿತ’ ಎಂದು ಹೇಳಿದರು.

‘ನಾವು ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ. ಆ ಬಗ್ಗೆ ಏನಾದರೂ ಪುರಾವೆಗಳು ಇದ್ದರೆ ಯಾರಿಗೆ ಬೇಕಾದರೂ ದೂರು ನೀಡಬಹುದು’ ಎಂದು ಅವರು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಯುತ್ತರ ನೀಡಿದರು.

‘ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯವು ಕೆಲಸ ಆಗಿತ್ತು. ಆದರೆ, ಬಿಜೆಪಿ ಅವಧಿಯಲ್ಲಿ ನಗರವನ್ನು ಕಡೆಗಣಿಸಲಾಯಿತು. ಈಗ ಪುನಃ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಬೆಂಗಳೂರಿನಲ್ಲಿ ಅಭಿವೃದ್ಧಿ ಚಟುವಟಿಕೆ
ಗಳು ಕಾಣುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.