ADVERTISEMENT

ಹಣವೂ ಇಲ್ಲ, ಚಿಕಿತ್ಸೆಗೆ ವಿಶೇಷ ಘಟಕವೂ ಇಲ್ಲ...

ಆನುವಂಶಿಕ ಕಾಯಿಲೆ: ಸರ್ಕಾರ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಬೆಂಗಳೂರು: ಪ್ರಸಕ್ತ ಸಾಲಿನ  ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅಪ­ರೂಪದ ಕಾಯಿಲೆಗಳಿಂದ ಬಳಲುವವರ ಚಿಕಿತ್ಸೆಗಾಗಿ ₨10 ಕೋಟಿ ಮೀಸಲಿಟ್ಟಿದೆ. ಆದರೆ, ಈವರೆಗೆ ಆರೋಗ್ಯ ಇಲಾಖೆಯಿಂದ ಧನಸಹಾಯ ಬಿಡುಗಡೆಯಾಗಿಲ್ಲ. ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ  ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವಿಶೇಷ ಘಟಕವನ್ನು ಸ್ಥಾಪಿಸುವುದಾಗಿ ನೀಡಿದ್ದ ಭರವಸೆಯು ಇನ್ನೂ ಈಡೇರಿಲ್ಲ.

‘2014–15 ರ ಬಜೆಟ್‌ನಲ್ಲಿ ಅಪರೂಪದ ಆನುವಂಶಿಕ ಕಾಯಿಲೆಗೆ ಹಣ ಬಿಡುಗಡೆ ಮಾಡುವ ಪ್ರಸ್ತಾಪವಿರುವುದು ನಿಜ. ಆದರೆ, ಹಣವು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಅಪರೂಪದ ಆನುವಂಶಿಕ ಕಾಯಿಲೆಯ ಚಿಕಿತ್ಸೆಗೆ ಅಧಿಕ ವೆಚ್ಚ ತಗುಲುತ್ತದೆ. ಒಂದು ಬಾರಿ ಬದ್ಧವಾದರೆ, ಆಮೇಲೆ ಹಣವನ್ನು ನೀಡದೆ ಇರಲು ಸಾಧ್ಯವಾಗುವುದಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್‌ ಈ ಕುರಿತು ಪ್ರತಿಕ್ರಿಯಿಸಿದರು.

‘ಈ ಕಾಯಿಲೆಯಿಂದ ಬಳಲುತ್ತಿರುವ 14 ವರ್ಷದೊಳಗಿನ ಮಕ್ಕಳಿಗೆ  ಈಗಾಗಲೇ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವಿಶೇಷ ಘಟಕದ ಸ್ಥಾಪನೆಗೆ ಚರ್ಚೆ ನಡೆದಿದೆ’ ಎಂದು ಹೇಳಿದರು.

‘ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಇಂದಿರಾ­ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ­ದಲ್ಲಿ ವಿಶೇಷ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದ ಮಾತನ್ನುಸರ್ಕಾರ ಮರೆ­ತಿದೆ. ಈ ಕಾಯಿಲೆಗಳು ಸರ್ಕಾರದ ಪಟ್ಟಿಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಅಧಿ­ಕಾರಿ­ಗಳು ಅರ್ಜಿಗಳನ್ನು ಪರಿಗಣಿಸುತ್ತಿಲ್ಲ’ ಎಂದು ಲೈಸೊಸೊಮಲ್‌ ಸ್ಟೋರೇಜ್‌ ಡಿಸಾರ್ಡ್‌ರ್ಸ್‌ (ಎಲ್‌ಎಸ್‌ಡಿ) ಸಪೋರ್ಟ್‌ ಸೊಸೈಟಿ ಸದಸ್ಯ ಪ್ರಸನ್ನ ಶಿರೋಳ ಹೇಳಿದರು. 

ಇಂದು ಪ್ರತಿಭಟನೆ
ಸರ್ಕಾರದ ನಿರ್ಲಕ್ಷ್ಯ ಹಾಗೂ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಆಗ್ರಹಿಸಿ ಲೈಸೊಸೊಮಲ್‌ ಸ್ಟೋರೇಜ್‌ ಡಿಸಾರ್ಡ್‌ರ್ಸ್‌ (ಎಲ್‌ಎಸ್‌ಡಿ) ಸಪೋರ್ಟ್‌ ಸೊಸೈಟಿ ಶನಿವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದು ಎರಡು ತಿಂಗಳಲ್ಲಿ 3 ನೇ ಬಾರಿ ಪ್ರತಿಭಟನೆಯಾಗಿದೆ.

ತಮ್ಮ ಮಗಳಿಗೆ ಅಪರೂಪದ ಕಾಯಿಲೆಗಳಲ್ಲಿ ಒಂದಾದ ‘ಪಾಂಪೆ’ ಎಂಬ ಕಾಯಿಲೆಗೆ ಚಿಕಿತ್ಸೆಯನ್ನು ಕೊಡಿಸುತ್ತಿರುವ ಅವರು, ಸರ್ಕಾರವು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.

‘ವಿಶ್ವದಾದ್ಯಂತ ಏಳು ಅಪರೂಪದ ಆನುವಂಶಿಕ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಭಾರತದಲ್ಲಿ ನಾಲ್ಕು ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತದೆ. ಚಿಕಿತ್ಸೆಯ ವೆಚ್ಚ ರೋಗಿಯ ತೂಕ ಆಧರಿಸಿ ಹೆಚ್ಚುತ್ತ ಹೋಗುತ್ತದೆ. ರಾಜ್ಯದಲ್ಲಿ ಎಂಪಿಎಸ್‌ ಟೈಪ್ –1, ಪಾಂಪೆ, ಪ್ಯಾಬ್ರಿ ಮತ್ತು ಗೌಷರ್ಸ್‌ನಂತಹ ಅಪ­ರೂಪದ ಕಾಯಿಲೆಗಳಿಂದ ಬಳಲುತ್ತಿರುವ ಸುಮಾರು ಮಕ್ಕಳಿದ್ದಾರೆ. ಆನುವಂಶಿಕ­ವಾಗಿ ಬರುವ ಈ ಕಾಯಿಲೆಗಳ ಚಿಕಿತ್ಸೆ ವೆಚ್ಚವನ್ನು ಬಡವರು ಭರಿಸುವುದು ಕಷ್ಟ’ ಎಂದರು.

‘ಈ ಚಿಕಿತ್ಸೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರು ತೀವ್ರತರವಾದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಾರೆ. ಮಧ್ಯಮವರ್ಗ ಮತ್ತು ಬಡವರ ಮಕ್ಕಳಿಗೆ ಈ ಅಪರೂಪದ ಕಾಯಿಲೆ ಬಂದರೆ ಅವರಿಗೆ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಚಿಕಿತ್ಸೆಯನ್ನು ಒದಗಿಸಲು ಸರ್ಕಾರವು ನೆರವು ನೀಡಬೇಕಾಗಿದೆ’ ಎಂದರು.

‘ಆರೋಗ್ಯ ಎನ್ನುವುದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ಹೀಗಾಗಿ, ನಿಮ್ಮ ಮಕ್ಕಳು ನಿಮಗೆ ಬಿಟ್ಟಿದ್ದು ಎನ್ನುವ ಸರ್ಕಾರದ ಧೋರಣೆ ಸರಿಯಲ್ಲ. ಅಪರೂಪದ ಕಾಯಿಲೆಗಳಲ್ಲಿ ಚಿಕಿತ್ಸೆ ಲಭ್ಯವಿರುವ ಕಾಯಿಲೆಗಳಿಗಾದರೂ ಚಿಕಿತ್ಸೆ ನೀಡಲು ಸರ್ಕಾರ ನೆರವು ನೀಡಬೇಕು’ ಎಂದು ಹೇಳಿದರು.

ಹೆಚ್ಚಿನ ವೆಚ್ಚ
ಅಪರೂಪದ ಆನುವಂಶಿಕ ಕಾಯಿಲೆಗೆ ಹೆಚ್ಚಿನ ವೆಚ್ಚ ತಗುಲುತ್ತದೆ. ಹೀಗಾಗಿ, ಸರ್ಕಾರ ಒಂದು ಬಾರಿ ಬದ್ಧವಾದರೆ ಪ್ರತಿ ವರ್ಷವೂ ಹಣವನ್ನು ನೀಡಬೇಕಾಗುತ್ತದೆ. ಆದರೆ, ಸರ್ಕಾರ  ಚಿಕಿತ್ಸೆಗೆ ತನ್ನಿಂದಾದ ಸಹಾಯವನ್ನು ಮಾಡುತ್ತದೆ.
ಯು.ಟಿ.ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಇದುವರೆಗೂ ಯಾವುದೇ ಅನುದಾನವಿಲ್ಲ
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಅಪರೂಪದ ಆನುವಂಶಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಿಶೇಷ ಘಟಕವನ್ನು ಸ್ಥಾಪಿಸುವ ಕುರಿತು ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ಆದರೆ, ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಘಟಕವನ್ನು ಸ್ಥಾಪಿಸಲು ಒಂದು ಬಾರಿ ಮಾತ್ರ ಹಣ ವಿನಿಯೋಗ ಮಾಡಬಹುದು. ಆದರೆ, ಪ್ರತಿ ತಿಂಗಳೂ ಮಕ್ಕಳ ಚಿಕಿತ್ಸೆಗೆ ಹೆಚ್ಚು ಹಣ ಒದಗಿಸಬೇಕಾಗುತ್ತದೆ.
– ಡಾ.ಪ್ರೇಮಲತಾ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ

ಗಂಭೀರವಾಗಿ ಪರಿಗಣಿಸಿಲ್ಲ
ಬಜೆಟ್‌ನಲ್ಲಿ ಸರ್ಕಾರ ಮಾಡಿದ ಘೋಷಣೆಯಲ್ಲಿ ಸ್ಪಷ್ಟತೆ ಇಲ್ಲ. ಬಡ ರೋಗಿಗಳು ಅನೇಕ ಸಾರಿ ಸಹಾಯ­ಕ್ಕಾಗಿ ವಿಧಾನಸೌಧಕ್ಕೆ ಅಲೆದಾಡಿದ್ದಾರೆ. ಏನು ಪ್ರಯೋಜನ­ವಾಗಿಲ್ಲ. ಜನರ ಆರೋಗ್ಯದ ಹಕ್ಕು ಸರ್ಕಾರದ್ದಾಗಿದೆ. ಆದರೂ, ಈ ಸಮಸ್ಯೆಯನ್ನು ಸಂಬಂಧಪಟ್ಟವರು ಗಂಭೀರ­ವಾಗಿ ಪರಿಗಣಿಸಿಲ್ಲ. ಹೀಗಾದರೆ, ಬಡಕುಟುಂಬಗಳು ಬೀದಿಗೆ ಬರುತ್ತವೆ.
ಪ್ರಸನ್ನ ಶಿರೋಳ, ಎಲ್‌ಎಸ್‌ಡಿ ಸಪೋರ್ಟ್‌ ಸೊಸೈಟಿ ಸದಸ್ಯ

ಏನಿದು ಅಪರೂಪದ ಆನುವಂಶಿಕ ಕಾಯಿಲೆ?: ‘ಜೀವ ರಾಸಾಯನಿಕ ಕ್ರಿಯೆಯಲ್ಲಿ ಕ್ರಿಯಾ­ವರ್ಧಕವಾಗಿ ಪಾತ್ರ ನಿರ್ವಹಿಸುವ ಪ್ರೊಟೀನ್ ಪದಾರ್ಥ ಎಂಜೈಮ್‌ನ (ಕಿಣ್ವ) ಅಭಾ-ವದಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಲೈಸೊಸೊಮಲ್‌ ಸ್ಟೋರೇಜ್‌ ಡಿಸಾರ್ಡ್‌ರ್ಸ್‌ (ಎಲ್ಎಸ್‌ಡಿ) ಯಲ್ಲಿ 45 ವಿಧದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ ಡಾ.ಪ್ರೇಮಲತಾ ತಿಳಿಸಿದರು.

‘ಸಾಮಾನ್ಯವಾಗಿ ಜೀವಕೋಶದಲ್ಲಿ ಸಂಗ್ರಹವಾಗುವ ಅನಗತ್ಯ ಪದಾರ್ಥಗಳನ್ನು ಜೀವ ರಾಸಾಯನಿಕ ಕ್ರಿಯೆಯ ಮೂಲಕ ಎಂಜೈಮ್‌ಗಳು ಹೊರಹಾಕುತ್ತವೆ. ಇದರಿಂದ ಜೀವಕೋಶಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಶರ್ಕರ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದರೆ ಜೀವಕೋಶಗಳೇ ಸಾವನ್ನ­ಪ್ಪುತ್ತವೆ’ ಎಂದು ವಿವರಿಸಿದರು.

‘ಜೀವಕೋಶಗಳ ಇಂತಹ ಅಕಾಲಿಕ ಮರಣದಿಂದ ದೇಹದ ವಿವಿಧ ಅಂಗಗಳ ಮೇಲೆ ನೇರವಾದ ಪರಿಣಾಮ ಉಂಟಾಗುತ್ತದೆ. ಬೆಳವಣಿಗೆ ಕುಂಠಿತ, ಕಿವುಡುತನ, ಕುರುಡುತನ, ಹೃದಯ ಮತ್ತು ನರರೋಗ ಸಮಸ್ಯೆ, ಮೂಳೆಗಳಲ್ಲಿ ಸಮಸ್ಯೆ... ಹೀಗೆ ನಾನಾ ಆಯಾಮಗಳಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕಾಯಿಲೆ ಪ್ರಭಾವ ಜೋರಾಗಿದ್ದರೆ ಮಗು ಸಾವನ್ನೂ ಅಪ್ಪುತ್ತದೆ’ ಎಂದರು.

‘ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿಯೇ ಸುಮಾರು 60 ರಿಂದ 70 ಮಕ್ಕಳು ಅಪ­ರೂಪದ ಆನುವಂಶಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರೂಪದ ಆನು­ವಂಶಿಕ ಕಾಯಿಲೆಯ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆಯಿಲ್ಲ. ಕೆಲವು ಕಾಯಿಲೆಗಳಿಗೆ ಮಾತ್ರ ಎಂಜೈಮ್‌ (ಕಿಣ್ವ) ಚಿಕಿತ್ಸೆಯನ್ನು ನೀಡಬೇಕು.  ಈ ಮಕ್ಕಳಿಗೆ ಪ್ರತಿ ತಿಂಗಳು ನೀಡುವ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.