ADVERTISEMENT

ಹೂವು ದುಬಾರಿ, ತರಕಾರಿ ತುಸು ಕಡಿಮೆ

ಗಣೇಶನ ಹಬ್ಬದ ಸಡಗರಕ್ಕೆ ದರ ಹೆಚ್ಚಳದ ಬಿಸಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2014, 19:30 IST
Last Updated 28 ಆಗಸ್ಟ್ 2014, 19:30 IST

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹೆಚ್ಚಳವಾದ ಹೂವಿನ ಬೆಲೆಯಲ್ಲಿ ಕೊಂಚವೂ ಕುಸಿದಿಲ್ಲ. ಇದರಿಂದಾಗಿ ಗಣೇಶನ ಹಬ್ಬದ ಸಡಗರಕ್ಕೆ ಎದುರು ನೋಡುತ್ತಿರುವ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ಅಡ್ಡಿಯಾಗಿದೆ. ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್‌ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ ಗಗನಕ್ಕೇರಿದ್ದು, ಹೂವು ಖರೀದಿಸುವವರ ಸಂಖ್ಯೆಯೂ ಕಡಿಮೆಯಾಗಿದ್ದು ಕಂಡುಬಂತು.

‘ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ದರ ಹೆಚ್ಚಿದ್ದರೂ ಜನರು ಹೂವು ಖರೀದಿಸಿದ್ದರು. ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೆಚ್ಚು ಹೂವು ಖರೀದಿಸುತ್ತಾರೆ ಎಂದು ಭಾವಿಸಿದ್ದೆವು. ಇದೇ ಕಾರಣಕ್ಕಾಗಿ ಹೆಚ್ಚು ಹೂವು ತಂದು ರಾಶಿ ಹಾಕಿದ್ದೆವು. ಆದರೆ, ಅಂದುಕೊಂಡಷ್ಟು ಮಾರಾಟವಾಗಿಲ್ಲ’ ಎಂದು ಹೂವು ವ್ಯಾಪಾರಿ ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ತಿಂಗಳಿನಿಂದ ಕನಕಾಂಬರ, ಮಲ್ಲಿಗೆ, ಕಾಕಡ, ಮಲ್ಲೆ ಹೂವು, ಸೇವಂತಿಗೆ, ಕಣಗಲ ಹೂವಿನ ದರದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ಹೂವಿನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಾ ಹೋಯಿತು.  ಒಂದು ಕೆ.ಜಿ ಕನಕಾಂಬರದ ಬೆಲೆ ಬೆಳಿಗ್ಗೆ  ₨ 1500 ಇತ್ತು. ಸಂಜೆ ₨ 1200ಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ಹೆಚ್ಚಿನ ಜನರು ಸೇವಂತಿಗೆ ಹಾಗೂ ಗುಲಾಬಿ ಹೂವು ಖರೀದಿಯಲ್ಲಿ ತೊಡಗಿದ್ದರು. ಕೆಲವರು ಹೂವಿನ ಹಾರ ಖರೀದಿಗೆ ಮೊರೆ ಹೋದರು.

ಆದರೆ, ತರಕಾರಿ ಬೆಲೆ ಕಡಿಮೆಯಾಗಿರುವುದು ಹೆಚ್ಚಿನವರಲ್ಲಿ ಖುಷಿಗೆ ಕಾರಣವಾಗಿದೆ. ಟೊಮೊಟೊ (ಕೆ.ಜಿಗೆ ₨ 20ರಿಂದ 30), ಬೀನ್ಸ್‌, ಕ್ಯಾರೇಟ್‌ (ಕೆ.ಜಿ ಗೆ ₨ 40), ಬೆಂಡೆ ಕಾಯಿ (ಕೆ.ಜಿ ಗೆ ₨ 20), ಬದನೆಕಾಯಿ (ಕೆ.ಜಿಗೆ ₨ 20), ನುಗ್ಗೆಕಾಯಿ (ಕೆ.ಜಿಗೆ ₨ 40) ಬೆಲೆ ಕಡಿಮೆಯಾಗಿದೆ. ಏಲಕ್ಕಿ ಬಾಳೆಹಣ್ಣಿನ (₨ 80) ಬೆಲೆ ಹೊರತುಪಡಿಸಿದರೆ ಉಳಿದ ಹಣ್ಣುಗಳ ದರದಲ್ಲಿ ಅಷ್ಟೇನು ಹೆಚ್ಚಾಗಿಲ್ಲ.

ಮೂರ್ತಿ ಬೆಲೆ ದುಪ್ಪಟ್ಟು
ಗೌರಿ ಗಣೇಶನ ಮೂರ್ತಿ ಬೆಲೆ ದುಪ್ಪಟ್ಟಾಗಿದೆ.  ₨ 100ನಿಂದ ಹಿಡಿದು ₨ 2 ಸಾವಿರ ವರೆಗಿನ ಪುಟ್ಟ ಮೂರ್ತಿಗಳನ್ನು ಜನರು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ತರಕಾರಿ ಬೆಲೆ ಪರವಾಗಿಲ್ಲ
ಈ ಬಾರಿ ತರಕಾರಿ ಬೆಲೆ ಪರವಾಗಿಲ್ಲ. ಆದರೆ, ಹೂವು ಖರೀದಿಸಲು ಎರಡು ಬಾರಿ ಯೋಚಿಸಬೇಕಾಗಿದೆ. ಹೂವಿಗೆ ಇಷ್ಟೊಂದು ಬೆಲೆಯೇರಿದ್ದನ್ನು ನಾನು ಕಂಡಿಲ್ಲ.
–ಗಾಯತ್ರಿ ದೇವಿ (ಬಿನ್ನಿಪೇಟೆ ನಿವಾಸಿ)

ಶೃಂಗರಿಸಲು ಹೂವು ಅಗತ್ಯ
ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸದಿದ್ದರೆ ಹೇಗೆ? ಮಕ್ಕಳು ಮನೆಯಲ್ಲಿ ಗಣೇಶನ ಮೂರ್ತಿ ಇಡುತ್ತಾರೆ. ಅದನ್ನು ಶೃಂಗರಿಸಲು ಹೂವು ಅಗತ್ಯ. ಹಾಗಾಗಿ ಬೆಲೆ ಹೆಚ್ಚಾಗಿದ್ದರೂ ಹೂವು ಖರೀದಿಸಿದ್ದೇನೆ.
–ಶೀಲಾವತಿ (ಚಾಮರಾಜಪೇಟೆ ನಿವಾಸಿ)

ಸಂಭ್ರಮಕ್ಕೆ ಬ್ರೇಕ್‌ 
ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ ಎನ್ನಬಹುದು. ಆದರೂ ಅದ್ದೂರಿಯಾಗಿ ಆಚರಿಸಬೇಕು ಎನ್ನುವ ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ.
–ಸಂಧ್ಯಾ (ಹಳೇಗುಡ್ಡದ ನಿವಾಸಿ)

ಮಳೆ ಇಲ್ಲ; ಬೆಳೆ ಇಲ್ಲ
ಸರಿಯಾಗಿ ಮಳೆ ಇಲ್ಲದ ಕಾರಣ ಕನಕಾಂಬರ ಹೂವಿನ ಬೆಳೆ ಕಡಿಮೆಯಾಗಿದೆ. ಮಾರುಕಟ್ಟೆಗೂ ಹೆಚ್ಚು ಬರುತ್ತಿಲ್ಲ. ಇದರಿಂದ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.
–ಸಾದತ್‌ ಹುಸೇನ್‌, ಹೂವಿನ ವ್ಯಾಪಾರಿ (ಕೆ.ಆರ್‌.ಮಾರುಕಟ್ಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.