ADVERTISEMENT

ಹೆಡ್‌ಕಾನ್‌ಸೆıಬಲ್‌ಗೆ ಇರಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2016, 20:13 IST
Last Updated 1 ಏಪ್ರಿಲ್ 2016, 20:13 IST

ಬೆಂಗಳೂರು: ತಮ್ಮನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯುತ್ತಿದ್ದ ಹೆಡ್‌ಕಾನ್‌ಸ್ಟೆಬಲ್‌ಗೆ ಮೊಬೈಲ್‌ ಕಳ್ಳರು ಚಾಕುವಿನಿಂದ ಇರಿದು, ಆಟೊದಿಂದ ಕೆಳಗೆ ತಳ್ಳಿದ ಘಟನೆ ಮಲ್ಲೇಶ್ವರ ಸಮೀಪದ ಮುನೇಶ್ವರ ಬ್ಲಾಕ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ವೈಯಾಲಿಕಾವಲ್‌ ಠಾಣೆ ಹೆಡ್‌ಕಾನ್‌ಸ್ಟೆಬಲ್ ನಾಗರಾಜ್ (58) ಗಾಯಗೊಂಡವರು. ಘಟನೆ ನಂತರ ಆರೋಪಿಗಳು ಪರಾರಿಯಾಗುತ್ತಿದ್ದ ಆಟೊ, ಮುನೇಶ್ವರ ಬ್ಲಾಕ್‌ನಲ್ಲಿ ಮಗುಚಿ ಬಿದ್ದಿದೆ. ಆಗ ಪೊಲೀಸರು ಆಟೊ ಚಾಲಕ ಮಂಜುನಾಥ್‌ನನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

‘ರಾತ್ರಿ 12 ಗಂಟೆ ಸುಮಾರಿಗೆ ಸಂಪಿಗೆ ರಸ್ತೆಯಲ್ಲಿ ಶಿವಪ್ರಕಾಶ್ ಎಂಬುವರಿಂದ ಮೊಬೈಲ್‌ ಕಿತ್ತುಕೊಂಡ ಆರೋಪಿಗಳು,   ನಂತರ ವಿನಾಯಕ ವೃತ್ತಕ್ಕೆ ಬಂದಿದ್ದಾರೆ. ಆಗ ಅಲ್ಲಿ ಗಸ್ತು ತಿರುಗುತ್ತಿದ್ದ ನಾಗರಾಜ್ ಮತ್ತು ಕಾನ್‌ಸ್ಟೆಬಲ್‌ ರೇವಣಸಿದ್ದಪ್ಪ, ಅನುಮಾನದ ಮೇಲೆ ಆರೋಪಿಗಳಿದ್ದ ಆಟೊವನ್ನು ತಡೆದಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್‌ರೆಡ್ಡಿ ಘಟನೆಯನ್ನು ವಿವರಿಸಿದರು.

‘ನಂತರ ಸಿಬ್ಬಂದಿಯು ವಿಚಾರಣೆ ನಡೆಸಿದಾಗ ಆರೋಪಿಗಳು ಹೆಸರು–ವಿಳಾಸ ಹೇಳಲು ನಿರಾಕರಿಸಿದ್ದಾರೆ. ಹೀಗಾಗಿ  ಠಾಣೆಗೆ ಕರೆದೊಯ್ದು ಪೂರ್ವಾಪರ ವಿಚಾರಿಸಲು ನಿರ್ಧರಿಸಿದ ನಾಗರಾಜ್, ಅವರ ಜತೆ ಆಟೊದಲ್ಲಿ ಕುಳಿತು ಠಾಣೆಯತ್ತ ವಾಹನ ಚಾಲೂ ಮಾಡುವಂತೆ ಹೇಳಿದ್ದಾರೆ. ರೇವಣ ಸಿದ್ದಪ್ಪ ಆ ಆಟೊವನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ.

‘ಸ್ವಲ್ಪ ದೂರ ಬಂದಾಗ ಆಟೊ ನಿಲ್ಲಿಸುವಂತೆ ಸೂಚಿಸಿದ ನಾಗರಾಜ್, ರಸ್ತೆ ಬದಿ ಟೀ ಮಾರುತ್ತಿದ್ದ ಹುಡುಗರಿಗೆ ಜಾಗ ಖಾಲಿ ಮಾಡಿಸಲು ಮುಂದಾಗಿದ್ದಾರೆ. ಹೀಗೆ ಅವರ ಗಮನ ಬೇರೆಡೆ ಹೋಗುತ್ತಿದ್ದಂತೆಯೇ ಒಬ್ಬಾತ ಚಾಕುವಿನಿಂದ ಕೈ ಹಾಗೂ ತೊಡೆಗೆ ಇರಿದು ಅವರನ್ನು ಆಟೊದಿಂದ ಕೆಳಗೆ ತಳ್ಳಿದ್ದಾನೆ.

‘ಟೀ ಹುಡುಗರು ನಾಗರಾಜ್ ಅವರ ರಕ್ಷಣೆಗೆ ಧಾವಿಸಿದ್ದಾರೆ. ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಆರೋಪಿಗಳ ಆಟೊವನ್ನು ಹಿಂಬಾಲಿಸಿದ್ದಾರೆ. ಮುನೇಶ್ವರ ಬ್ಲಾಕ್‌ನ ತಿರುವಿನಲ್ಲಿ ಆಟೊ ಮಗುಚಿ ಬಿದ್ದಿದ್ದು, ಮಂಜುನಾಥ್‌ನನ್ನು ಕಾನ್‌ಸ್ಟೆಬಲ್‌ ವಶಕ್ಕೆ ಪಡೆದಿದ್ದಾರೆ. ಈ ಹಂತದಲ್ಲಿ ಉಳಿದಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕರೆಸಿಕೊಂಡ ರೇವಣಸಿದ್ದಪ್ಪ, ಆರೋಪಿ ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

‘ಆಟೊ ಮಗುಚಿದ್ದರಿಂದ ಮಂಜುನಾಥ್‌ನ ತಲೆಗೂ ಪೆಟ್ಟು ಬಿದ್ದಿದೆ. ಚಿಕಿತ್ಸೆ ನಡೆಯುತ್ತಿರುವ ಕಾರಣ ಆತನ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಪರಾರಿಯಾಗಿರುವ ಆರೋಪಿಗಳ ಪೂರ್ವಾಪರ ಸಿಕ್ಕಿದ್ದು, ಸಿಬ್ಬಂದಿ ಅವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಚರಣ್‌ರೆಡ್ಡಿ ಮಾಹಿತಿ ನೀಡಿದರು.

ಬ್ಯಾಡರಹಳ್ಳಿ ನಿವಾಸಿಯಾದ ನಾಗರಾಜ್, 2017ರಲ್ಲಿ  ನಿವೃತ್ತಿಯಾಗಲಿದ್ದಾರೆ. ಆರೋಪಿಗಳು ತೊಡೆಗೆ ಇರಿದಿದ್ದರಿಂದ ತೀವ್ರ ರಕ್ತ ಸ್ರಾವವಾಗಿದೆ. ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈಯಾಲಿಕಾವಲ್‌ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಕಾರ್ಯವೈಖರಿಗೆ ಮೆಚ್ಚುಗೆ
‘ಘಟನೆ ನಂತರ ಆಟೊವನ್ನು ಹಿಂಬಾಲಿಸಿ ಚಾಲಕನನ್ನು ಹಿಡಿದ ಕಾನ್‌ಸ್ಟೆಬಲ್‌ ಕಾರ್ಯವೈಖರಿ ಮೆಚ್ಚುವಂಥದ್ದು.  ನಾಗರಾಜ್ ಹಾಗೂ ರೇವಣಸಿದ್ದಪ್ಪ ‘ಬೀಟ್‌–1’ರ ಸಿಬ್ಬಂದಿ. ಈ ಹಿಂದೆಯೂ ಗಸ್ತು ತಿರುಗುವಾಗ ತಮ್ಮ ಸಮಯ ಪ್ರಜ್ಞೆಯಿಂದ ಹಲವು ಕಳ್ಳರನ್ನು ಪತ್ತೆ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಇಬ್ಬರಿಗೂ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು’ ಎಂದು ಚರಣ್‌ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT