ADVERTISEMENT

‘ಇನ್ನಾತನೇ ನಟಂ, ನಟರೋಳ್‌ ಅಗ್ಗಳಂ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 20:03 IST
Last Updated 24 ಏಪ್ರಿಲ್ 2014, 20:03 IST

ಬೆಂಗಳೂರು: ‘ನಾನಿರುವುದೆ ನಿಮ­ಗಾಗಿ, ನಾಡಿರುವುದು ನಮಗಾಗಿ...’ ಗೀತೆಯನ್ನು ವೇದಿಕೆ ಮೇಲಿದ್ದ ಬೃಹತ್ ಪರದೆ ಮೇಲೆ ದೊರೆ ಮಯೂರನಾಗಿ ಬಂದ ಡಾ. ರಾಜ್‌ಕುಮಾರ್‌ ಹಾಡುತ್ತಿ­ದ್ದರೆ ಸಭಾಂಗಣದಲ್ಲೆಲ್ಲ ಸಿಳ್ಳೆ–ಚಪ್ಪಾಳೆ ಸದ್ದೇ ಸದ್ದು. ಕಿಕ್ಕಿರಿದು ತುಂಬಿದ್ದ ‘ಅಭಿ­ಮಾನಿ ದೇವರು’ಗಳು ‘ಡಾ. ರಾಜ್‌ಗೆ ಜೈ’ ಎಂಬ ಘೋಷಣೆ ಹಾಕುತ್ತಿದ್ದರು.

ವಾರ್ತಾ ಇಲಾಖೆ ರವೀಂದ್ರ ಕಲಾ­ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಡಾ. ರಾಜ್‌ಕುಮಾರ್‌ ಅವರ 86ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಪ್ರತಿ ನಡೆಯಲ್ಲೂ ಆ ಮೇರುನಟನ ನೆನಪೇ ಜಿನುಗುತ್ತಿತ್ತು.

ಬೇಡರ ಕಣ್ಣಪ್ಪನಾಗಿ, ಭಕ್ತ ಕುಂಬಾರ­ನಾಗಿ, ಮಹಾತ್ಮ ಕಬೀರನಾಗಿ, ಕವಿರತ್ನ ಕಾಳಿದಾಸನಾಗಿ, ರಾಜಾ ಮಯೂರ­ನಾಗಿ, ಶ್ರೀಕೃಷ್ಣದೇವರಾಯ­ನಾಗಿ, ಬಂಗಾರದ ಮನುಷ್ಯನಾಗಿ ಡಾ. ರಾಜ್‌ ತೆರೆಯ ಮೇಲೆ ಬಂದು ಸದಾ ಹಸಿರಾದ ಸಂಭಾಷಣೆಗಳು ಅವರ ಕಂಠದಲ್ಲಿ ಕೇಳಿ­ಬರುವಾಗ ಅಭಿಮಾನಿಗಳ ಅಂತಃಕರಣವೇ ಕಲಕಿಹೋಗಿತ್ತು. ‘ಅಣ್ಣಾವ್ರು ಸದಾ ಅಮರ’ ಎಂಬ ಘೋಷಣೆ ಕೇಳುತ್ತಿತ್ತು.
‘ಸದಾ ಕಣ್ಣಲಿ, ಮಾಣಿಕ್ಯ ವೀಣಾ, ಯಾವ ಕವಿಯು ಬರೆಯಲಾರ...’ ಗೀತೆಗಳ ತುಣುಕುಗಳೂ ತೇಲಿ ಬಂದವು. ಪ್ರಕಾಶ ಶೆಟ್ಟಿ ಮತ್ತು ಅವರ ತಂಡ ಹಾಡಿದ ರಂಗಗೀತೆಗಳಲ್ಲೂ ಡಾ. ರಾಜ್‌ ಅವರ ಸ್ಪರ್ಶವೇ ಇತ್ತು. ಅಣ್ಣಾವ್ರು ಅಭಿನಯಿಸಿದ ನಾಟಕಗಳ ಗೀತೆಗಳನ್ನೂ ಆ ತಂಡ ಹಾಡಿತು.

ಹರಿಕೃಷ್ಣ ಮತ್ತು ವಾಣಿ ಹರಿಕೃಷ್ಣ ಅವರ ತಂಡ ಡಾ. ರಾಜ್‌ ರಾಗಮಾಲಿಕೆ ಪ್ರಸ್ತುತಪಡಿಸಿತು. ಪಾರ್ವತಮ್ಮ ರಾಜ್‌­ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿ­ದಂತೆ ರಾಜ್‌ ಕುಟುಂಬದ ಸದಸ್ಯರೆಲ್ಲ ಅಲ್ಲಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ‘ಇನ್ನಾತನೇ ನಟಂ, ನಟ­ರೋಳ್‌ ಅಗ್ಗಳಂ (ಇಂತಹ ನಟ ಬೇರಿಲ್ಲ, ನಟರಲ್ಲಿಯೇ ಅಗ್ರಗಣ್ಯ)’ ಎಂಬ ಶಾಸನವೊಂದು ಎಂಟನೇ ಶತಮಾನದ ಕಲಾವಿದನ ಮೇಲಿದೆ. ಬೇರೆ ಯಾವ ನಟನಿಗೂ ಅಂತಹ ಗೌರವ ಇಲ್ಲ. ಒಂದು­ವೇಳೆ ಅಂತಹ ಶಾಸನ ಮಾಡುವುದಿದ್ದರೆ ಅದಕ್ಕೆ ರಾಜ್‌ ಒಬ್ಬರೇ ಅರ್ಹರು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಕಲಾವಿದೆ ಸಾಹುಕಾರ್‌ ಜಾನಕಿ ಮಾತನಾಡಲು ಎದ್ದುನಿಂತಾಗ ಕಾಲ ಸರ್ರನೇ ಐದು ದಶಕ ಹಿಂದೆ ಸರಿದ ಅನುಭವ. ರಾಜ್‌ ಕಾಲದ ಕಪ್ಪು–ಬಿಳುಪು ನೆನಪುಗಳಿಗೆ ಹೋದ ಜಾನಕಿ, ಆಗಿನ ಮದ್ರಾಸ್‌ (ಚೆನ್ನೈ) ಸಿನಿಮಾ ಲೋಕದ ರಸನಿಮಿಷಗಳನ್ನು ಮೆಲುಕು ಹಾಕುತ್ತಾ ಭಾವುಕರಾದರು.

‘ಡಾ.ರಾಜ್‌ ಅವರಿದ್ದ ಒಂದೊಂದು ಸಿನಿಮಾವೂ ಶ್ರೇಷ್ಠ ಕಲಾಕೃತಿಯಾಗಿತ್ತು. ಸಮಾಜಕ್ಕೆ ಆದರ್ಶ­ಗಳನ್ನು ಕಟ್ಟಿಕೊಡು­ತ್ತಿತ್ತು. ಒಳ್ಳೆಯ ಸಂದೇಶ ದಾಟಿಸು­ತ್ತಿತ್ತು’ ಎಂದು ಹೇಳಿದರು.

ಪಾರ್ವತಮ್ಮ ರಾಜ್‌ಕುಮಾರ್‌, ‘ಅವರ ದಯೆ, ನಿಮ್ಮ ಆಶೀರ್ವಾದ­ದಿಂದ ನಾವೆಲ್ಲ ಚೆನ್ನಾಗಿದ್ದೇವೆ. ಇಷ್ಟನ್ನು ಮಾತ್ರ ನಾನು ಹೇಳಲು ಬಯಸುವುದು’ ಎಂದು ಚುಟುಕಾಗಿ ಮಾತು ಮುಗಿಸಿದರು.

ಸಚಿವ ಆರ್‌. ರೋಷನ್‌ ಬೇಗ್‌ ಮಾತನಾಡಲು ಎದ್ದುನಿಂತಾಗ, ಅಭಿ­ಮಾ­ನಿಗಳು ಡಾ.ರಾಜ್‌ ಜನ್ಮದಿನಕ್ಕೂ ರಜೆ ನೀಡಬೇಕು ಎಂದು ಘೋಷಣೆ ಹಾಕಿದರು. ಅದಕ್ಕೆ ಪುನೀತ್‌ ‘ಬೇಡ’ ಎಂದು ಸನ್ನೆ ಮಾಡಿದರು. ‘ಡಾ.ರಾಜ್‌ ಗೋಕಾಕ್‌ ಚಳವಳಿ ನಡೆಸಿ ಕನ್ನಡದ ಅಭಿಮಾನ ಎತ್ತಿಹಿಡಿದ ಕಾರಣವೇ ಈಗ ರಾಜ್ಯ ಸರ್ಕಾರದ ಆಡಳಿತವೆಲ್ಲ ಕನ್ನಡ­ದಲ್ಲಿ ನಡೆದಿದೆ’ ಎಂದು ಸಚಿವ ಬೇಗ್‌ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎನ್‌. ಶ್ರೀನಿವಾಸಾಚಾರಿ ಮತ್ತು ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.