ADVERTISEMENT

‘ಕಾವ್ಯ, ವಿದ್ವತ್ ಸಮನ್ವಯಗೊಳಿಸಿದ ತೀನಂಶ್ರೀ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 19:37 IST
Last Updated 7 ಫೆಬ್ರುವರಿ 2016, 19:37 IST
‘ಕವಿದನಿ’ ಕಾರ್ಯಕ್ರಮದಲ್ಲಿ ಅರ್ಚನಾ ಭಟ್ ಅವರು ಗಮಕ ವಾಚಿಸಿದರು.  ಎಚ್‌.ಎಲ್‌. ಪುಷ್ಪಾ, ಎಂ.ಎನ್. ವ್ಯಾಸರಾವ್, ಎಂ. ಚಿದಾನಂದ ಮೂರ್ತಿ, ತೀ.ನಂ. ಶ್ರೀ ಅವರ ಪುತ್ರ ನಾಗಭೂಷಣ್‌ ಇದ್ದಾರೆ  – ಪ್ರಜಾವಾಣಿ ಚಿತ್ರ
‘ಕವಿದನಿ’ ಕಾರ್ಯಕ್ರಮದಲ್ಲಿ ಅರ್ಚನಾ ಭಟ್ ಅವರು ಗಮಕ ವಾಚಿಸಿದರು.  ಎಚ್‌.ಎಲ್‌. ಪುಷ್ಪಾ, ಎಂ.ಎನ್. ವ್ಯಾಸರಾವ್, ಎಂ. ಚಿದಾನಂದ ಮೂರ್ತಿ, ತೀ.ನಂ. ಶ್ರೀ ಅವರ ಪುತ್ರ ನಾಗಭೂಷಣ್‌ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ (ತೀ.ನಂ.ಶ್ರೀ) ಅವರು ಕಾವ್ಯ ಹಾಗೂ ವಿದ್ವತ್ತನ್ನು ಸಮನ್ವಯಗೊಳಿಸಿದ ಅಪರೂಪದ ವ್ಯಕ್ತಿ’ ಎಂದು ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಹೇಳಿದರು.

ಹೊಂಬಾಳೆ ಪ್ರತಿಭಾರಂಗ ಸಂಸ್ಥೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕವಿದನಿ- ತೀ.ನಂ.ಶ್ರೀಕಂಠಯ್ಯ ಅವರ ಕವಿತೆಗಳ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತೀ.ನಂ.ಶ್ರೀ ಅವರು ಬರೆದಿದ್ದಕ್ಕಿಂತ ಓದಿದ್ದು ಹೆಚ್ಚು. ನಮ್ಮ ಬರಹದಲ್ಲಿ ಕಬ್ಬಿಣ, ಹಿತ್ತಾಳೆ, ತಾಮ್ರ ಮಿಶ್ರಣವಿರುತ್ತದೆ. ಆದರೆ ತೀ.ನಂ.ಶ್ರೀ  ಅವರ ಅಲ್ಪ ಬರಹ ಅಪ್ಪಟ ಚಿನ್ನವಿದ್ದಂತೆ’ ಎಂದರು.

ಇದೇ ವೇಳೆ ಕವಿಗಳಾದ ಎಂ.ಎನ್. ವ್ಯಾಸರಾವ್, ಎಚ್.ಎಲ್. ಪುಷ್ಪಾ ಅವರು ತೀ.ನಂ.ಶ್ರೀ ರಚಿತ ಕವಿತೆಗಳನ್ನು ಓದಿದರು. ಪುತ್ತೂರು ನರಸಿಂಹ ನಾಯಕ್ ಅವರ ಗಾಯನ, ಅರ್ಚನಾ ಭಟ್ ಅವರ ಗಮಕ ವಾಚನ ಸಭಿಕರ ಗಮನಸೆಳೆಯಿತು.

ಮುತ್ತು ಕೊಡಲಿಲ್ಲವೆಂದು ಪಶ್ಚಾತಾಪ : ತೀ.ನಂ.ಶ್ರೀ ರಚಿತ ‘ಪಶ್ಚಾತಾಪ’ ಕವನ ವಾಚಿಸಿದ ಚಿದಾನಂದಮೂರ್ತಿ ಅವರು, ‘ತನ್ನ ಪತಿ ಆಗಬೇಕಿದ್ದ ತೀ.ನಂ.ಶ್ರೀ ಅವರನ್ನು ನೋಡಲು ರಾತ್ರಿ ಹೊತ್ತು ಹಿರಿಯರ ಕಣ್ಣು ತಪ್ಪಿಸಿ ಬಂದಿದ್ದ ಹುಡುಗಿ, ತೀ.ನಂ.ಶ್ರೀ ಕಾಲಿಗೆ ನಮಸ್ಕರಿಸಿ ವಾಪಸ್ ಹೋಗಿದ್ದಳು. ಆಕೆಗೆ ಮುತ್ತು ಕೊಡಲಿಲ್ಲ ಎಂಬ ಪಶ್ಚಾತಾಪದಲ್ಲಿ ತೀ.ನಂ.ಶ್ರೀ ಅವರು ಈ ಕವನವನ್ನು ರಚಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.