ADVERTISEMENT

‘ಜಂಕ್ಷನ್‌’ ಸಂಚಾರ ಕಿರಿಕಿರಿ ತಪ್ಪಿಸಲು ಯೋಜನೆ

ಪ್ರಮುಖ ಜಂಕ್ಷನ್ ವಿಸ್ತರಣೆಗೆ ಅಡ್ಡಿಯಾದರೆ ಬಿಬಿಎಂಪಿ ಅಧಿಕಾರಿಗಳ ನೆರವು

ಸಂತೋಷ ಜಿಗಳಿಕೊಪ್ಪ
Published 26 ಜೂನ್ 2016, 19:46 IST
Last Updated 26 ಜೂನ್ 2016, 19:46 IST
ನಗರದಲ್ಲಿ ಸಂಚಾರ ದಟ್ಟಣೆಯದೇ ದೊಡ್ಡ ಸಮಸ್ಯೆ.   -ಪ್ರಜಾವಾಣಿ ಚಿತ್ರ
ನಗರದಲ್ಲಿ ಸಂಚಾರ ದಟ್ಟಣೆಯದೇ ದೊಡ್ಡ ಸಮಸ್ಯೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿಯಲ್ಲಿ ವಾಹನ ಸಂಚಾರ ದಟ್ಟಣೆಯದ್ದೇ ದೊಡ್ಡ ಸಮಸ್ಯೆ. ಅದರಲ್ಲೂ ಪ್ರಮುಖ ಜಂಕ್ಷನ್‌ಗಳನ್ನು ನಿಮಿಷಗಟ್ಟಲೇ ಕಾದು ಮುಂದಕ್ಕೆ ಹೋಗಬೇಕಾದ ಸ್ಥಿತಿ ಇದೆ. ಅದರಿಂದ ಸವಾರರಿಗೆ ಮುಕ್ತಿ ನೀಡಲು ಪೊಲೀಸರು ಹೊಸದೊಂದು ಯೋಜನೆ ಕೈಗೆತ್ತಿ ಕೊಂಡಿದ್ದಾರೆ.

‘ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಈಗಾಗಲೇ ಹಲವು ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಈಗ 100 ಜಂಕ್ಷನ್‌ಗಳ ಸುಧಾರಣೆಗೆ ಚಿಂತನೆ ನಡೆಸಲಾಗಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್. ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ಈ ವೇಳೆಯೇ ವಾಹನ ದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ ನಾಲ್ಕಕ್ಕಿಂತ ಹೆಚ್ಚು ರಸ್ತೆಗಳು ಬಂದು ಸೇರುವ ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆ ಪ್ರಮಾಣ ಹೆಚ್ಚು. ಆ ಕುರಿತು ಸಾರ್ವಜನಿಕರಿಂದ ಸಾವಿರಾರು ದೂರು ಗಳು ಬಂದಿವೆ’ ಎಂದು  ವಿವರಿಸಿದರು.

ವಿಸ್ತರಣೆಗೆ ಒತ್ತು: ‘ದಟ್ಟಣೆ ಹೆಚ್ಚಿರುವ ಜಂಕ್ಷನ್‌ಗಳನ್ನು ಗುರುತಿಸಿ ವರದಿ ನೀಡುವಂತೆ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಹಿತೇಂದ್ರ ತಿಳಿಸಿದರು. ‘ಕೆಲ ಜಂಕ್ಷನ್‌ಗಳಲ್ಲಿ ರಸ್ತೆ ಕಿರಿದಾಗಿ ರುವುದೇ ದಟ್ಟಣೆಗೆ ಕಾರಣವಾಗುತ್ತಿದೆ. ಹೀಗಾಗಿ ತಜ್ಞರು ವರದಿ ನೀಡಿದ ಬಳಿಕ ಮೊದಲಿಗೆ ಜಂಕ್ಷನ್‌ ವಿಸ್ತರಣೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ. ಈ ವೇಳೆ ಯಾವುದೇ ಅಡ್ಡಿಗಳು ಎದುರಾದರೂ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನೆರವು ಪಡೆಯುತ್ತೇವೆ’ ಎಂದು ಅವರು ವಿವರಿಸಿದರು.

‘ಬಿ ಟ್ರ್ಯಾಕ್‌’ ಯೋಜನೆಯಡಿ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಸರ್ಕಾರ ₹76 ಕೋಟಿ ನೀಡಿದೆ. ಅದರಲ್ಲಿಯೇ ಜಂಕ್ಷನ್‌ ಅಭಿವೃದ್ಧಿಗೆ ಹಣ ಬಳಸುತ್ತೇವೆ. ಕೆಲವೆಡೆ  ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಅಲ್ಲೆಲ್ಲ ಟೆಂಡರ್‌ ಮೂಲಕ ಕೆಲಸ ಹಂಚಿಕೆ ಮಾಡಲಾಗು ವುದು. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಎರಡು ವರ್ಷಗಳಲ್ಲಿ ಸುಧಾರಿತ ಜಂಕ್ಷನ್‌ಗಳಲ್ಲಿ ಸಂಚಾರ ಸಾಧ್ಯವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಸುಧಾರಣೆ ಪಟ್ಟಿಯಲ್ಲಿರುವ ಜಂಕ್ಷನ್‌ ಗಳು: ಅಡಿಗಾಸ್‌ ಜಂಕ್ಷನ್‌,  ಆಡು ಗೋಡಿ ಜಂಕ್ಷನ್‌ , ಅಮೃತಹಳ್ಳಿ ಜಂಕ್ಷನ್‌ (ಬ್ಯಾಟರಾಯನಪುರ ಏರ್‌ಪೋರ್ಟ್‌ ರಸ್ತೆ), ಅರಕೆರೆ ಗೇಟ್‌ ಜಂಕ್ಷನ್‌, ಆರ್ಟ್‌ ಆ್ಯಂಡ್‌ ಕ್ರಾಫ್ಟ್‌, ಅಶೋಕನಗರ (ಶೋಲೆ ವೃತ್ತ), ಅತ್ತಿಗುಪ್ಪೆ ವೃತ್ತ, ಬಾಗಲೂರು ಕ್ರಾಸ್‌, ಬನಶಂಕರಿ ಬಸ್‌ ನಿಲ್ದಾಣ, ಬೆಂಗಳೂರು ಮೆಡಿಕಲ್‌ ಕಾಲೇಜ್‌, ಬಸವಂತಪ್ಪ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ, ಬಸವೇಶ್ವರ ವೃತ್ತ, ಬಿಡಿಎ ಜಂಕ್ಷನ್‌, ಭಾಷ್ಯಂ ವೃತ್ತ (ಸದಾಶಿವನಗರ),

ಭಾಷ್ಯಂ ವೃತ್ತ (ರಾಜಾಜಿನಗರ), ಬೊಮ್ಮನಹಳ್ಳಿ ಜಂಕ್ಷನ್‌, ಬೈಯಪ್ಪನಹಳ್ಳಿ ಜಂಕ್ಷನ್‌, ಕಾವೇರಿ ಜಂಕ್ಷನ್‌, ಚಂದ್ರಾ ಲೇಔಟ್‌ ವಾಟರ್‌ ಟ್ಯಾಂಕ್‌ ಹತ್ತಿರ, ಚೌಡರಾಯ ವೃತ್ತ (ಐಎಸ್‌ಡಿ ಕಚೇರಿ ಹತ್ತಿರ), ಚಿಕ್ಕಜಾಲ, ಇಎಸ್‌ಐ ಆಸ್ಪತ್ರೆ ಜಂಕ್ಷನ್‌– ರಾಜಾಜಿನರ, ಗರುಡಾ ಮಾಲ್‌ ಜಂಕ್ಷನ್‌, ಗೀತಾ ವೃತ್ತ– ಜಯನಗರ, ಹಾವನೂರು ಜಂಕ್ಷನ್‌ – ಬಸವೇಶ್ವರನಗರ, ಹೈಗ್ರೌಂಡ್ಸ್‌ ಹಳೇ ಪೊಲೀಸ್‌ ನಿಲ್ದಾಣ, ಹಡ್ಸನ್‌ ವೃತ್ತ, 

ಇಂದಿರಾನಗರ ಇಎಸ್‌ಐ ಆಸ್ಪತ್ರೆ ಜಂಕ್ಷನ್‌, ಕೆ.ಆರ್‌. ವೃತ್ತ ಜಂಕ್ಷನ್, ಕೃಪಾನಿಧಿ ಕಾಲೇಜ್‌ ಜಂಕ್ಷನ್, ಲಾಲ್‌ಬಾಗ್‌ ಮುಖ್ಯ ದ್ವಾರ ಜಂಕ್ಷನ್‌, ಮೇಖ್ರಿ ವೃತ್ತ ಜಂಕ್ಷನ್‌, ನಂಜಪ್ಪ ವೃತ್ತ, ನಿಮ್ಹಾನ್ಸ್‌ ಜಂಕ್ಷನ್‌, ರಾಜರಾಜೇಶ್ವರಿ ಜಂಕ್ಷನ್, ರಿಚ್ಮಂಡ್‌ ವೃತ್ತ, ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಹಾಗೂ ಯಲಹಂಕ ಬೈಪಾಸ್‌. 

ಸುಧಾರಣೆ ಹೇಗೆ?
* ಜಂಕ್ಷನ್‌ ಹಾಗೂ ಅದಕ್ಕೆ ಸೇರುವ ಪ್ರತಿಯೊಂದು ರಸ್ತೆ ಅಕ್ಕ–ಪಕ್ಕ ವಿಸ್ತರಣೆ
* ಸಂಚಾರಕ್ಕಾಗಿ ಸುಸಜ್ಜಿತ ಫುಟ್‌ಪಾತ್‌
* ಅತ್ಯಾಧುನಿಕ ಸಿಗ್ನಲ್‌ ಹಾಗೂ ಕ್ಯಾಮೆರಾಗಳ ಅಳವಡಿಕೆ
* ಆಂಬುಲೆನ್ಸ್‌ ಸೇರಿದಂತೆ ಇತರೆ ತುರ್ತು ವಾಹನಗಳ ಸಂಚಾರಕ್ಕೆ ಜಂಕ್ಷನ್‌ನಲ್ಲಿ ಪ್ರತ್ಯೇಕ್‌ ಕ್ರಾಸಿಂಗ್‌ ವ್ಯವಸ್ಥೆ
* ಪಾದಚಾರಿಗಳು ರಸ್ತೆ ದಾಟಲು ಜಿಬ್ರಾ ಕ್ರಾಸಿಂಗ್‌ ಸುಧಾರಣೆ
* ಸಂಚಾರ ನಿರ್ವಹಣೆಗಾಗಿ ಜಂಕ್ಷನ್‌ ಬಳಿ ಇಬ್ಬರು ಕಾನ್‌ಸ್ಟೆಬಲ್‌ ಕುಳಿತುಕೊಳ್ಳುವ ಸಾಮರ್ಥ್ಯವುಳ್ಳ ಕೇಂದ್ರ  ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.