ADVERTISEMENT

‘ಬ್ರ್ಯಾಂಡ್ ಫ್ಯಾಕ್ಟರಿ’ಗೆ ಬೆಂಕಿ

8 ತಾಸು ಕಾರ್ಯಾಚರಣೆ * ಆತಂಕ ಸೃಷ್ಟಿಸಿದ್ದ ಬಂಕ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:54 IST
Last Updated 2 ಅಕ್ಟೋಬರ್ 2015, 19:54 IST

ಬೆಂಗಳೂರು: ಎಚ್‌ಎಎಲ್‌ ಮುಖ್ಯ ರಸ್ತೆಯ ಮಾರತ್‌ಹಳ್ಳಿ ಬಳಿ ಶುಕ್ರವಾರ ಬೆಳಗಿನ ಜಾವ ಐದು ಅಂತಸ್ತಿನ ‘ಬ್ರಾಂಡ್‌ ಫ್ಯಾಕ್ಟರಿ’ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು. ಪಕ್ಕದಲ್ಲೇ ಪೆಟ್ರೋಲ್ ಬಂಕ್‌ ಇದ್ದುದರಿಂದ ಅಗ್ನಿ ನಂದಿಸುವವರೆಗೂ ಸ್ಥಳೀಯರ ಮುಖದಲ್ಲಿ ಆತಂಕದ ಛಾಯೆ ಆವರಿಸಿತ್ತು.

ವಿಷಯ ತಿಳಿದು 23 ವಾಹನಗಳಲ್ಲಿ ಸ್ಥಳಕ್ಕೆ ತೆರಳಿದ 150ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಸತತ ಎಂಟು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಎಂದಿನಂತೆ ಗುರುವಾರ ರಾತ್ರಿ 11 ಗಂಟೆಗೆ ವಹಿವಾಟು ಮುಗಿದಿತ್ತು. ಕಟ್ಟಡದ  ಭದ್ರತಾ ಸಿಬ್ಬಂದಿ, ಹೊರಗಿನ ಶೆಡ್‌ಗೆ ಹೋಗಿ ಮಲಗಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿರುವುದನ್ನು ಕಂಡ ರಾಮಿಕ್ ಶರ್ಮಾ ಎಂಬುವರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು.

ಕೂಡಲೇ ರಾತ್ರಿ ಗಸ್ತಿನಲ್ಲಿದ್ದ ಪಶ್ಚಿಮ ವಿಭಾಗದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ (ಆರ್ಎಫ್‌ಒ) ರವಿಶಂಕರ್ ಅವರಿಗೆ ವಿಷಯ ಮುಟ್ಟಿಸಿದ ನಿಯಂತ್ರಣ ಕೊಠಡಿ ಸಿಬ್ಬಂದಿ, ಅವರ ಸೂಚನೆಯಂತೆ 56 ಅಡಿ ಎತ್ತರಕ್ಕೆ ಹೋಗುವ ಏರಿಯಲ್ ಲ್ಯಾಡರ್‌ ಸೇರಿದಂತೆ 23 ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದರು.

ಅಂತಸ್ತಿಗೊಂದು ತಂಡ: ‘ಯಾವ ಅಂತಸ್ತಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು ಎಂಬುದು ಗೊತ್ತಿಲ್ಲ. ಸ್ಥಳಕ್ಕೆ ತೆರಳುವ ವೇಳೆಗಾಗಲೇ ದಟ್ಟ ಹೊಗೆ ಇಡೀ ಕಟ್ಟಡವನ್ನು ಆವರಿಸಿತ್ತು. ವಿಪರೀತ  ಮಳೆ ಸುರಿಯುತ್ತಿದ್ದ ಕಾರಣ ಕಾರ್ಯಾಚರಣೆ ಸವಾಲಾಗಿತ್ತು. ಅಂತಸ್ತಿಗೆ ಒಂದರಂತೆ ಐದು ತಂಡಗಳನ್ನು ರಚಿಸಲಾಯಿತು. ಪ್ರತಿ ತಂಡದಲ್ಲಿ 30 ಮಂದಿ ಸಿಬ್ಬಂದಿ ಇದ್ದರು’ ಎಂದು ಅಗ್ನಿಶಾಮಕ ಇಲಾಖೆ ಡಿಐಜಿ ರೇವಣ್ಣ ಕಾರ್ಯಾಚರಣೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಕಟ್ಟಡದಲ್ಲಿ ಬಟ್ಟೆ, ಚಪ್ಪಲಿ, ಬೆಲ್ಟ್, ಶೂ ಮಾರಾಟ ಮಳಿಗೆಗಳೇ ಹೆಚ್ಚಿದ್ದ ಕಾರಣ  ಕ್ಷಣ ಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚುತ್ತಿತ್ತು. ಅಗ್ನಿಯ ಕೆನ್ನಾಲಿಗೆ ಪಕ್ಕದ ಪೆಟ್ರೋಲ್‌ ಬಂಕ್‌ಗೆ ವ್ಯಾಪಿಸಿದರೆ ಗತಿ ಏನು? ಎಂಬ ಆತಂಕವೂ ಇತ್ತು. ಕಟ್ಟಡವನ್ನು ಸುತ್ತುವರಿದೂ ಎಲ್ಲ ಮೂಲೆಗಳಿಂದಲೂ ನೀರು ಚಿಮ್ಮಿಸಲು ಪ್ರಾರಂಭಿಸಿದೆವು. ಅಗ್ನಿ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಸಿಬ್ಬಂದಿ ಕೃತಕ ಉಸಿರಾಟ ಉಪಕರಣಗಳನ್ನು ಹಾಕಿಕೊಂಡು ಒಳಗೆ ನುಗ್ಗಿದರು.

‘ಹೀಗೆ ಸತತ ಪರಿಶ್ರಮದಿಂದಾಗಿ ಮಧ್ಯಾಹ್ನ 12.30ರ ಸುಮಾರಿಗೆ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿತು. ಪೀಠೋಪಕರಣ ಸೇರಿದಂತೆ ಒಳಗೆ ಮಾರಾಟಕ್ಕಿಟ್ಟಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ಶಾರ್ಟ್‌ ಸರ್ಕೀಟ್‌ನಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ನಷ್ಟದ ಪ್ರಮಾಣ ಖಚಿತವಾಗಿ ಗೊತ್ತಾಗಿಲ್ಲ. ಈ ಬಗ್ಗೆ ಬ್ರ್ಯಾಂಡ್ ಫ್ಯಾಕ್ಟರಿಯ ವ್ಯವಸ್ಥಾಪಕ ಶ್ರೀಕಾಂತ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಆ ಕಟ್ಟಡ ಶಿವಕುಮಾರ್, ಹೇಮಾರೆಡ್ಡಿ ಹಾಗೂ ರವಿಕುಮಾರ್ ಎಂಬುವರಿಗೆ ಸೇರಿದ್ದು. ಮುಂಬೈ ಮೂಲದ ಕಿಶನ್‌ ಲಾಲ್‌ ಎಂಬುವರು, ಆ ಕಟ್ಟಡವನ್ನು ಬಾಡಿಗೆ ಪಡೆದು ಎಂಟು ವರ್ಷಗಳಿಂದ ಬ್ರ್ಯಾಂಡ್‌ ಫ್ಯಾಕ್ಟರಿ ನಡೆಸುತ್ತಿದ್ದರು. ಕಾರ್ಯಾಚರಣೆಯಿಂದ ನಾಲ್ಕೈದು ಸಿಬ್ಬಂದಿ ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ರೇವಣ್ಣ  ಹೇಳಿದರು.

ಕಟ್ಟಡ ನಿಯಮ ಉಲ್ಲಂಘನೆ
‘ಅಗ್ನಿಶಾಮಕ ಇಲಾಖೆಯಿಂದ ನಿರಾ ಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯದೆ ಈ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ 2005ರ ‘ರಾಷ್ಟ್ರೀಯ ಕಟ್ಟಡ ನಿಯಮ’ (ಎನ್‌ಬಿಸಿ) ಉಲ್ಲಂಘಿಸಿ ಇದನ್ನು ನಿರ್ಮಿಸಲಾಗಿದೆ’ ಎಂದು ಅಗ್ನಿಶಾಮಕ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ತಿಳಿಸಿದರು.

‘50 ಮೀಟರ್‌ಗಿಂತ ಎತ್ತರದ ಹಾಗೂ 4ಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡಗಳನ್ನು ಬಹುಮಹಡಿ ಎಂದು ಎನ್‌ಬಿಸಿ ವ್ಯಾಖ್ಯಾನಿಸಿದೆ. ಇಂಥ ಕಟ್ಟಡಗಳ ಸುತ್ತ ಅಗ್ನಿ ಶಾಮಕ ವಾಹನಗಳು ಸರಾಗವಾಗಿ ಓಡಾಡುವಷ್ಟು ಜಾಗ ಇರಬೇಕು, ರಸ್ತೆ ಹಾಗೂ ಕಟ್ಟಡದ ನಡುವೆ ಕನಿಷ್ಠ 12 ಮೀಟರ್‌ ಅಂತರ  ಇರಬೇಕು. ಒಳಗೆ ಅಗ್ನಿ ನಂದಕ ಸಲಕರಣೆಗಳಿರಬೇಕು ಎಂದು ಎನ್‌ಬಿಸಿ ಹೇಳಿದೆ.

‘ಆದರೆ, ಇಂಥ ಯಾವುದೇ ಸುರಕ್ಷತಾ ಕ್ರಮಗಳು ಕಟ್ಟಡದಲ್ಲಿ ಇಲ್ಲ. ಬೆಂಕಿ ನಂದಿಸಲು ತೆರಳಿದ್ದ ಸಿಬ್ಬಂದಿ, ವಾಹನಗಳನ್ನು ಒಳಗೆ ತೆಗೆದುಕೊಂಡು ಹೋಗಲು ಪರದಾಡಬೇಕಾಯಿತು.

ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಘಟನೆ ಸಂಬಂಧ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಎಂ.ಎನ್.ರೆಡ್ಡಿ ಅವರು ವಿವರಿಸಿದರು.

ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ
‘ಕೆಲಸದ ನಿಮಿತ್ತ ದೆಹಲಿಗೆ ತೆರಳಬೇಕಿದ್ದರಿಂದ ಬೆಳಿಗ್ಗೆಯೇ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೆ. ಕಟ್ಟಡದಿಂದ ದಟ್ಟವಾದ ಹೊಗೆ ಬರುತ್ತಿರುವುದು ಕಾಣಿಸಿತು. ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ (101) ಕರೆ ಮಾಡಿ, ವಿಮಾನ ತಪ್ಪುತ್ತದೆ ಎಂಬ ಆತಂಕದಲ್ಲಿ ಕಾರು ನಿಲ್ಲಿಸದೆ ಹೊರಟು ಹೋದೆ’ ಎಂದು ವೈಟ್‌ಫೀಲ್ಡ್‌ ನಿವಾಸಿ ರಾಮಿಕ್ ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT