ADVERTISEMENT

‘ಮೌಲಿಕ ಬರವಣಿಗೆಯಿಂದ ಉಳಿಯುವ ಬರಹಗಾರ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 20:06 IST
Last Updated 27 ಜನವರಿ 2015, 20:06 IST
ಕನ್ನಡ ಪುಸ್ತಕ ಪ್ರಾಧಿಕಾರವು ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌. ನಾಗಾಂಬಿಕಾದೇವಿ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ, ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ, ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಚಿತ್ರದಲ್ಲಿದ್ದಾರೆ	– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಹಂಬಲ ಹಾಗೂ ಮೌಲ್ಯ­ಯುತ ಬರವಣಿಗೆಯಿಂದ ಮಾತ್ರ ಬರಹ­ಗಾರ ಎಲ್ಲರ ಮನಸ್ಸಿನಲ್ಲಿ ಉಳಿಯಲು ಸಾಧ್ಯ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ’ದಲ್ಲಿ ಮಾತನಾಡಿದರು.

‘ಸಾಹಿತ್ಯದಲ್ಲಿ ಅಲಂಕಾರ ಪ್ರಧಾನವಲ್ಲ, ದರ್ಶನ ಮುಖ್ಯ­ವಾಗು­ತ್ತದೆ. ಅನೇಕ ಅಲಂಕಾರ ಪದಗಳನ್ನು ಬಳಸಿ ಒಂದು ಕಾವ್ಯ ರಚಿಸಬಹುದು. ಆದರೆ, ಕಾವ್ಯವು ಏನನ್ನು ಧ್ವನಿಸುತ್ತದೆ ಎಂಬುದು ಮುಖ್ಯ. ಹೀಗಾಗಿ, ಸ್ತುತಿಗಿಂತ, ವಾಸ್ತವದ ನೆಲೆ­ಗಟ್ಟಿನಲ್ಲಿ ಬರೆದ ಬರವಣಿಗೆ ಹೆಚ್ಚು ಬಾಳು­ತ್ತದೆ’ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.­ನಾಗಾಂಬಿಕಾದೇವಿ, ‘ಇಂದು ತಂತ್ರಜ್ಞಾನ ಬದ­ಲಾಗು­ತ್ತಿದೆ. ಹೀಗಾಗಿ, ಇಲ್ಲಿ ಬಿಡು­ಗಡೆ­ಯಾದ ಪುಸ್ತಕಗಳನ್ನು ‘ಇ–ಪುಸ್ತಕಗಳ ಲೈಬ್ರರಿ’ ಕಿಂಡಲ್‌ನಲ್ಲಿ ಹಾಕಿದರೆ, ಇನ್ನೂ ಅನೇಕ ಯುವಜನರು ಓದಿ ಸ್ಫೂರ್ತಿ ಪಡೆಯಬಹುದು ಎಂದರು.

ಸಾಹಿತಿ ಎಸ್‌.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಬಹು­ಮಾನದ ಹಣ ಮುಖ್ಯವಾಗುವುದಿಲ್ಲ. ಬದಲಿಗೆ ಇಂತಹ ಸಂಸ್ಥೆಯಿಂದ ಬಹುಮಾನ ಪಡೆದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಇಲ್ಲಿ ಕಾವ್ಯ ಕೃತಿಗಳೇ ಹೆಚ್ಚು ಬಿಡುಗಡೆ­ಯಾಗಿವೆ. ಕಾವ್ಯವು ನಿರಂತರ ಪ್ರಯೋಗದಿಂದ ಮಾತ್ರ ಉಳಿಯುತ್ತದೆ’ ಎಂದರು. 37 ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.