ADVERTISEMENT

‘ರಾಜ್ಯದಲ್ಲಿ ಸರ್ಕಾರ ಇದೆಯೇ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 20:08 IST
Last Updated 11 ಫೆಬ್ರುವರಿ 2016, 20:08 IST
ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್‌, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಪಕ್ಷದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸಂಜಯನಗರ ವಾರ್ಡ್‌ನ ಗೆದ್ದಲಹಳ್ಳಿಯಲ್ಲಿ ಗುರುವಾರ ರೋಡ್‌ ಶೋ ಮೂಲಕ ಮತಯಾಚಿಸಿದರು
ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್‌, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಪಕ್ಷದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸಂಜಯನಗರ ವಾರ್ಡ್‌ನ ಗೆದ್ದಲಹಳ್ಳಿಯಲ್ಲಿ ಗುರುವಾರ ರೋಡ್‌ ಶೋ ಮೂಲಕ ಮತಯಾಚಿಸಿದರು   

ಬೆಂಗಳೂರು: ‘ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ. ಕಾಂಗ್ರೆಸ್ ನಾಯಕರು ಜಗಳದಲ್ಲಿ ಮುಳುಗಿದ್ದಾರೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಟೀಕಿಸಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ  ಸಂಜಯನಗರದಲ್ಲಿ ಗುರುವಾರ ಆಯೋಜಿಸಿದ್ದ  ಬೈಕ್ ರ್‌್ಯಾಲಿ ಉದ್ಘಾಟಿಸಿ  ಅವರು ಮಾತನಾಡಿದರು.

‘ಇಲ್ಲಿನ ಫಲಿತಾಂಶದಿಂದ ಸರ್ಕಾರ ಬದಲಾವಣೆಯಾಗದಿರಬಹುದು, ಆದರೆ, ಸರ್ಕಾರದ ಆಡಳಿತ  ವೈಖರಿ ಖಂಡಿತಾ ಬದಲಾಗಲಿದೆ. ಇಲ್ಲಿನ ಫಲಿತಾಂಶದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ’ ಎಂದರು.

‘ಎಲ್ಲರಿಗೂ ಸೂರು ಒದಗಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಲಾಭವನ್ನು ಅನೇಕ ರಾಜ್ಯಗಳು ಪಡೆಯುತ್ತಿವೆ. ಆದರೆ, ಈ ಕುರಿತು ಕರ್ನಾಟಕದಿಂದ ಪ್ರಸ್ತಾವನೆಯೇ ಬಂದಿಲ್ಲ. ಈ ಯೋಜನೆ ಅನುಷ್ಠಾನವಾದರೆ, ಬೆಂಗಳೂರಿನಲ್ಲಿ ಎಲ್ಲರಿಗೂ ಮನೆ ಸಿಗಲಿದೆ’ ಎಂದರು.

‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಕೇಂದ್ರ ಸರ್ಕಾರ ಎಂದೂ ಮಾಡುವುದಿಲ್ಲ. ಬರ ಪರಿಹಾರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಅಗತ್ಯ ನೆರವು ಒದಗಿಸಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೇಂದ್ರ ಸಚಿವರು ಭಾಗವಹಿಸಿ, ರಾಜ್ಯದಲ್ಲಿ   ಹೂಡಿಕೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಇಷ್ಟೆಲ್ಲಾ ಸಹಕಾರ ನೀಡಿದರೂ  ರಾಜ್ಯ ಸರ್ಕಾರ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ’ ಎಂದು ದೂರಿದರು.

‘ನರೇಂದ್ರ ಮೋದಿಯವರು ದೇಶ-ವಿದೇಶ ಸುತ್ತಿ, ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಆದರೆ ಕರ್ನಾಟಕ ಮಾತ್ರ ಹಿಂದಕ್ಕೆ ಸಾಗುತ್ತಿದೆ’ ಎಂದು ಹೇಳಿದರು.

ಸಂಸದ ಪಿ.ಸಿ.ಮೋಹನ್, ಶಾಸಕರಾದ ಆರ್.ಅಶೋಕ್,  ವಿಜಯ ಕುಮಾರ್, ಪಕ್ಷದ ಮುಖಂಡರಾದ ಕಟ್ಟಾ ಸುಬ್ರಮಣ್ಯ ನಾಯ್ಡು,  ಸುಬ್ಬ ನರಸಿಂಹ ರ್‌್್ಯಾಲಿಯಲ್ಲಿ ಭಾಗವಹಿಸಿದ್ದರು.

ಯೋಧನಿಗೆ ಶ್ರದ್ಧಾಂಜಲಿ:  ಗಂಗಾನಗರ ಬಸ್‌ನಿಲ್ದಾಣದಲ್ಲಿ ಕಾರ್ಯಕರ್ತರು ಮೌನ ಆಚರಿಸುವ ಮೂಲಕ ಮೃತ ಯೋಧ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.