ADVERTISEMENT

‘ರೈತರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ‘ವಿಧಾನಸಭೆ ಕಲಾಪದಲ್ಲಿ ರೈತರ ಆತ್ಮಹತ್ಯೆ, ಬರಗಾಲ ವಿಷಯದ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷಗಳು  ಚರ್ಚಿಸದೇ ಸುಮ್ಮನೆ ಸಮಯ ವ್ಯರ್ಥ ಮಾಡಿದ್ದಾರೆ’ ಎಂದು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ, ಎಂ.ಕೆ. ಗಣಪತಿ, ಡಿ.ಕೆ.ರವಿ ಪ್ರಕರಣವನ್ನು ಇಟ್ಟುಕೊಂಡು ಕಲಾಪದ ಸಮಯವನ್ನು ಕಳೆದಿದ್ದಾರೆ. ರೈತರ ನಿಜವಾದ ಸಮಸ್ಯೆಗಳ ಬಗ್ಗೆ ಯಾವ ಶಾಸಕರೂ ಧ್ವನಿ ಎತ್ತಲಿಲ್ಲ’ ಎಂದು  ಬೇಸರ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದ ಜನರು ಕುಡಿಯುವ ನೀರಿನ ಸಮಸ್ಯೆ, ರೈತರು ಗುಳೆ ಹೋಗುವುದು, ಬರಗಾಲ ಹೀಗೆ ಅನೇಕ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಬರೀ ಆತ್ಮಹತ್ಯೆ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ಚರ್ಚೆ ನಡೆಸಿ ಕಲಾಪ ನಡೆಯದಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಕೃಷಿ ಆಯೋಗ ರಚನೆಯಾಗಿ ಮೂರು ವರ್ಷ ಕಳೆದರೂ ಇನ್ನೂ ಅದರ ಪ್ರಯೋಜನ ರೈತರಿಗೆ ಆಗಿಲ್ಲ. ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಲಾಗುತ್ತಿದೆ. ಮೇಕೆದಾಟು ವಿಚಾರ, ಕಳಸಾ ಬಂಡೂರಿ ಕುಡಿಯುವ ನೀರು ಯೋಜನೆ ಬಗ್ಗೆ ಒಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಇವುಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಸದರು ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ತೆಂಗು ಬೆಳೆಗೆ ಸರಿಯಾದ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ನೀರಾ ನೀತಿ ಅನುಷ್ಠಾನಕ್ಕೆ ತರಬೇಕು. ಬಾಳೆ ಬೆಳೆದ ರೈತರು ಬೆಲೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಶಾಲೆಗಳಲ್ಲಿ ಹಾಲಿನ ಜೊತೆ ಬಾಳೆಹಣ್ಣನ್ನು ಸರ್ಕಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.