ADVERTISEMENT

‘ಸಂಸ್ಕೃತದಿಂದ ಪರಂಪರೆ ಪುನರುತ್ಥಾನ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2013, 19:30 IST
Last Updated 19 ಅಕ್ಟೋಬರ್ 2013, 19:30 IST

ಬೆಂಗಳೂರು: ‘ದೇಶದ ಪರಂಪರೆ ಪುನರುತ್ಥಾನಕ್ಕೆ ದೇಶದೆಲ್ಲೆಡೆ ಸಂಸ್ಕೃತ ಅಭಿಯಾನವನ್ನು ನಡೆಸಬೇಕು’ ಎಂದು ಆರ್ಥಿಕ ತಜ್ಞ ಡಾ.ಸುಬ್ರಹ್ಮಣಿಯನ್‌ ಸ್ವಾಮಿ ಹೇಳಿದರು.

ಸಂಸ್ಕೃತ ಭಾರತಿಯು ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಆಯೋಜಿಸಿರುವ ಅಖಿಲ ಭಾರತ ಸಂಸ್ಕೃತ ಅಧಿವೇಶನದಲ್ಲಿ  ಶನಿವಾರ ‘ಆಧುನಿಕ ಸವಾಲುಗಳು –ಪ್ರಾಚೀನ ಪರಿಹಾರಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ಸನಾತನ ಪರಂಪರೆ, ಸಂಸ್ಕೃತಿಯನ್ನು  ನಮ್ಮ ದೇಶದಲ್ಲಿ ಮರಳಿ ತರಬೇಕು.

ಆಗ ಆಧುನಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಂದಿನ ಅನೇಕ ಆಧುನಿಕ ಸಮಸ್ಯೆಗಳಿಗೆ ನಮ್ಮ
ಪ್ರಾಚೀನ ಗ್ರಂಥಗಳಲ್ಲಿ ಪರಿಹಾರಗಳಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.

‘ಸುಮಾರು 1,000 ವರ್ಷಗಳ ಹಿಂದೆ ಭಾರತ ಸಮೃದ್ಧವಾಗಿತ್ತು. ಆದರೆ, ದೇಶದ ಮೇಲೆ ಮುಸ್ಲಿಂ, ಬ್ರಿಟಿಷರು, ಪೋರ್ಚುಗೀಸರು ಮುಂತಾ­ದ ವಿದೇಶಿಯರು ಆಕ್ರಮಣ ಮಾಡಿದರು. ಅವರಿಗೂ ದೇಶದ ನೆಲ, ಜಲ, ಸಂಪತ್ತನ್ನು ನೀಡಿ, ಅವರ ಧರ್ಮಗಳಿಗೆ ಆಶ್ರಯ ನೀಡಿದೆವು. ಆದರೆ, ನಮ್ಮ ಈ ಉದಾರ ಗುಣವೇ ನಮಗೆ ಮುಳುವಾಗಿದೆ’ ಎಂದರು.

‘ಸಂಸ್ಕೃತ ಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸಬೇಕು. ಬೇರೆ ದೇಶಗಳಲ್ಲಿ ಮಕ್ಕಳಿಗೆ ಸಂಸ್ಕೃತ ಭಾಷೆಯನ್ನು ಕಲಿಸಲು ಆಸಕ್ತಿ ತೋರುತ್ತಿದ್ದಾರೆ. ಸಂಸ್ಕೃತ ಭಾಷೆಯ ಉಚ್ಚಾರಣೆಯಿಂದ ಮಕ್ಕಳ ಬೌದ್ಧಿಕ ಮಟ್ಟ ಬೆಳೆಯುತ್ತದೆ. ಅಲ್ಲದೇ, ಅವರ ವ್ಯಕ್ತಿತ್ವ ವಿಕಸನ ಹೊಂದುತ್ತದೆ’ ಎಂದರು.

ಸಾಹಿತಿ ಎಸ್‌.ಎಲ್‌.ಭೈರಪ್ಪ ಮಾತನಾಡಿ, ‘ಸಂಸ್ಕೃತ ಭಾಷೆಯಲ್ಲಿನ ವ್ಯಾಕರಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೆ, ಆಡು ಮಾತಿನಂತೆ ಸಂಸ್ಕೃತವನ್ನು ಮಾತಾಡಲು ಶುರು ಮಾಡಬೇಕು. ಆಗ ಮಾತ್ರ ಸಂಸ್ಕೃತ ಭಾಷೆಯು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಶೇ 80ರಷ್ಟು ಹಾಗೂ ಹಿಂದಿ ಭಾಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಭಾಗ ಸಂಸ್ಕೃತವಿದೆ. ಕನ್ನಡ ವ್ಯಾಕರಣದಲ್ಲಿ ಶೇ 80ರಷ್ಟು ಸಂಸ್ಕೃತವಿದೆ. ಆದ್ದರಿಂದ, ಪ್ರಾದೇಶಿಕ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಹೆಚ್ಚಾಗಿದೆ’ ಎಂದರು.
‘ಕನ್ನಡ ಅಧ್ಯಾಪಕರಿಗೆ ಕನ್ನಡ ಭಾಷೆಯ ಬಗ್ಗೆ ಅರಿವಿಲ್ಲ. ಅವರು ಸಂಸ್ಕೃತ ಭಾಷೆಯನ್ನು ಕಲಿಯದೆ ಇದ್ದುದರಿಂದ ಈ ಪರಿಸ್ಥಿತಿ
ಉಂಟಾಗಿದೆ. ಇದಕ್ಕೆ ನಮ್ಮ ದೇಶದ ಶಿಕ್ಷಣ ನೀತಿಯೇ ಕಾರಣವಾಗಿದೆ’ ಎಂದು ಹೇಳಿದರು.

ಸಂಸ್ಕೃತ ಪ್ರಮೋಷನ್‌ ಫೌಂಡೇಶನ್‌ನ ಕಾರ್ಯದರ್ಶಿ ಚಾಮು ಕೃಷ್ಣಶಾಸ್ತ್ರಿ, ಸಂಸ್ಕತ ಭಾರತಿ ಸಂಘಟಕ ನಂದಕುಮಾರ್‌, ವಕೀಲ ಎಸ್‌.ಎಸ್‌.ನಾಗಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.