ADVERTISEMENT

‘2010ರಿಂದಲೇ ಬೆಂಗಳೂರಿನ ಮತದಾರ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:00 IST
Last Updated 4 ಸೆಪ್ಟೆಂಬರ್ 2015, 20:00 IST

ಬೆಂಗಳೂರು: ‘2010ರಿಂದಲೂ ನಾನು  ಬೆಂಗಳೂರಿನ ಮತದಾರ’ ಎಂದು ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್ಸಿನ ವಿ.ಎಸ್‌.ಉಗ್ರಪ್ಪ ಸ್ಪಷ್ಟಪಡಿಸಿದರು.

‘ಉಗ್ರಪ್ಪ ಪಾವಗಡiವಿಧಾನಸಭಾ ಕ್ಷೇತ್ರದ ಮತದಾರ’ ಎಂದು ಬಿಜೆಪಿ ಮುಖಂಡರು ಮಾಡಿರುವ ಆರೋಪಕ್ಕೆ ಶುಕ್ರವಾರ ಸ್ಪಷ್ಟನೆ ನೀಡಿದ ಅವರು, ‘ಬೆಂಗಳೂರಿನಲ್ಲಿ ವಾಸವಿದ್ದಾಗ ಊರಿಗೆ ಹೋಗಿ ಮತ ಚಲಾಯಿಸುತ್ತಿದ್ದೆ. 2010ರಲ್ಲಿ ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ಸ್ವಂತ ಮನೆ ಹೊಂದಿದ ಬಳಿಕ ಬೊಮ್ಮನಹಳ್ಳಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದೆ. 2013ರ ವಿಧಾನಸಭಾ ಚುನಾವಣೆಯಲ್ಲೂ ಇಲ್ಲೇ ಮತದಾನ ಮಾಡಿದ್ದೇನೆ. ಬಿಬಿಎಂಪಿ ಚುನಾವಣೆಯಲ್ಲೂ ಮತದಾನ ಮಾಡಿದ್ದೇನೆ’ ಎಂದರು.

‘ಪಾವಗಡದ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಂತೆ 2010 ರಲ್ಲೇ ಅರ್ಜಿ ಸಲ್ಲಿಸಿದ್ದೆ. ಆದರೆ ಅಲ್ಲಿನ ಅಧಿಕಾರಿಗಳು ಪಟ್ಟಿಯಿಂದ ಹೆಸರು  ತೆಗೆದಿರಲಿಲ್ಲ. ಈ ವಿಚಾರ ಗಮನಕ್ಕೆ ಬಂದ ಬಳಿಕ ಹೆಸರು ಕೈಬಿಡುವಂತೆ ಆಗಸ್ಟ್‌ 4ರಂದು  ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದೇನೆ’ ಎಂದರು.

‘ಪಾವಗಡದ ಮತದಾರರ ಪಟ್ಟಿಯಿಂದ ನಿನ್ನೆ (ಗುರುವಾರ) ತಾನೆ  ಹೆಸರು ತೆಗೆಸಿದ್ದೇನೆ ಎಂದು ತಿರುಚಿದ ದಾಖಲೆಗಳನ್ನು ಬಿಜೆಪಿ ಮುಖಂಡರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದರು. 

‘ಬಿಬಿಎಂಪಿಯಲ್ಲಿ ಶಾಸಕರು, ಸಂಸದರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಬಿಜೆಪಿ ವಾದಿಸುತ್ತಿದೆ. ಆ ಪಕ್ಷದ ಮುಖಂಡರಾದ ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್‌ ಹಾಗೂ ಸುರೇಶ್‌ ಕುಮಾರ್‌ ವಕೀಲರು. ವಾಸ್ತವ ಏನೆಂಬುದು ಅವರಿಗೆ ತಿಳಿದಿದೆ. ಅವರದೇ ಸರ್ಕಾರ ಇದ್ದಾಗ ನಗರಾಡಳಿತ ಸಂಸ್ಥೆಗಳಲ್ಲಿ ಶಾಸಕರಿಗೆ ಹಾಗೂ ಸಂಸದರಿಗೆ ಇದ್ದ ಮತದಾನದ ಹಕ್ಕನ್ನು ಏಕೆ ರದ್ದುಪಡಿಸಲಿಲ್ಲ? ಚಿಕ್ಕಮಗಳೂರು ನಗರಸಭೆಯಲ್ಲಿ 2008ರಲ್ಲಿ ಬಿಜೆಪಿಗೆ ಅಧಿಕಾರ ಪಡೆಯಲು ಬೇಕಾಗುವಷ್ಟು ಸಂಖ್ಯಾಬಲ ಇರಲಿಲ್ಲ. ಅನಾರೋಗ್ಯಪೀಡಿತರಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಗಿನ ಸಂಸದ ಶ್ರೀಕಂಠಪ್ಪ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗಿ ಅವರಿಂದ ಮತಹಾಕಿಸಿದ್ದನ್ನು ಬಿಜೆಪಿಯವರು ಮರೆತುಬಿಟ್ಟರೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.