ADVERTISEMENT

₹  6 ಲಕ್ಷ ಮೌಲ್ಯದ ಆಭರಣ ದೋಚಿದ ಡಕಾಯಿತರು

​ಪ್ರಜಾವಾಣಿ ವಾರ್ತೆ
Published 23 ಮೇ 2015, 20:15 IST
Last Updated 23 ಮೇ 2015, 20:15 IST

ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಐಡಿಯಲ್ ಹೋಮ್ಸ್‌ನ ಮನೆಯೊಂದಕ್ಕೆ ನುಗ್ಗಿದ ಡಕಾಯಿತರ ತಂಡ, ಮನೆ ವಾಸಿಗಳನ್ನು ಚಾಕುವಿನಿಂದ ಬೆದರಿಸಿ ₹ 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಶನಿವಾರ ನಸುಕಿನಲ್ಲಿ ನಡೆದಿದೆ.

ಈ ಸಂಬಂಧ ಮನೆ ಮಾಲೀಕ ಶ್ರೀರಾಮ್ ಅವರು ರಾಜರಾಜೇಶ್ವರಿನಗರ ಠಾಣೆಗೆ ದೂರು ಕೊಟ್ಟಿದ್ದಾರೆ.  ಶ್ರೀರಾಮ್ ಅವರು  ತಮ್ಮ ಮಾವ ಹಾಗೂ ಮಕ್ಕಳ ಜತೆ ಒಂದು ಕೋಣೆಯಲ್ಲಿ ಮಲಗಿದ್ದರು. ಮತ್ತೊಂದು ಕೋಣೆಯಲ್ಲಿ ಅವರ ಪತ್ನಿ ಹಾಗೂ ಅತ್ತೆ ಮಲಗಿದ್ದರು.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಹಿಂಬಾಗಿಲು ಮೀಟಿ ಮನೆಗೆ ನುಗ್ಗಿದ ಎಂಟು ಮಂದಿ ಡಕಾಯಿತರು, ಶ್ರೀರಾಮ್ ಮಲಗಿದ್ದ ಕೋಣೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದಾರೆ. ನಂತರ ಮತ್ತೊಂದು ಕೋಣೆಗೆ ನುಗ್ಗಿ ಆಭರಣ ದೋಚಲು ಮುಂದಾಗಿದ್ದಾರೆ.
ಅಲ್ಮೆರಾ ಬಾಗಿಲು ತೆರೆಯವಾಗ ಉಂಟಾದ ಸದ್ದಿನಿಂದ ದೂರುದಾರರ ಪತ್ನಿ ಹಾಗೂ ತಾಯಿ ಎಚ್ಚರಗೊಂಡಿದ್ದಾರೆ. ಕೂಗಿದರೆ ಕೊಲೆ ಮಾಡುವುದಾಗಿ ಚಾಕುವಿನಿಂದ ಬೆದರಿಸಿದ ಆರೋಪಿಗಳು, ₹ 6 ಸಾವಿರ ನಗದು ಹಾಗೂ 304 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

‘ಕಳವು ಮಾಡಲು ಬಂದಿದ್ದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಹಿಂದಿ ಭಾಷೆ ಮಾತನಾಡುತ್ತಿದ್ದರು’ ಎಂದು ಶ್ರೀರಾಮ್ ಅವರ ಪತ್ನಿ ಹೇಳಿಕೆ ಕೊಟ್ಟಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಡಕಾಯಿತರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಂದು ಪ್ರಕರಣ: ಹುಳಿಮಾವು ಸಮೀಪದ ಅಕ್ಷಯ ಗಾರ್ಡನ್‌ ಲೇಔಟ್‌ನ ಮನೆಯೊಂದಕ್ಕೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಸಾಫ್ಟ್‌ವೇರ್ ಉದ್ಯೋಗಿ ಪಲ್ಲವಿ ಎಂಬುವರನ್ನು ಚಾಕುವಿನಿಂದ ಬೆದರಿಸಿ ಚಿನ್ನದ ಬಳೆ, ಮಾಂಗಲ್ಯ ಸರ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಮೂಲತಃ ಬೆಳಗಾವಿಯ ಪಲ್ಲವಿ, ಅಮೃತಸರ ಮೂಲದ ಹಿಮಾಂಶು ಮೆಹ್ತಾ ಎಂಬುವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಸಾಫ್ಟ್‌ವೇರ್‌ ಉದ್ಯೋಗಿಗಳಾಗಿದ್ದು, ಅವರಿಗೆ ಎರಡು ವರ್ಷದ ಮಗುವಿದೆ. ರಾತ್ರಿ 8 ಗಂಟೆ ಸುಮಾರಿಗೆ ಪಲ್ಲವಿ ಹಾಗೂ ಮಗು ಮಾತ್ರ ಮನೆಯಲ್ಲಿದ್ದರು. ಆಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT