ADVERTISEMENT

20 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ * ಭಾರಿ ಪೈಪೋಟಿ * ಕೊನೆ ಕ್ಷಣದವರೆಗೂ ಮತಬೇಟೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:48 IST
Last Updated 12 ಫೆಬ್ರುವರಿ 2016, 19:48 IST
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕಾಗಿ ಸಂಜಯನಗರ ವಾರ್ಡ್‌ನ ಗೆದ್ದಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರವನ್ನು ಸಜ್ಜುಗೊಳಿಸಿದರು   –ಪ್ರಜಾವಾಣಿ ಚಿತ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕಾಗಿ ಸಂಜಯನಗರ ವಾರ್ಡ್‌ನ ಗೆದ್ದಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರವನ್ನು ಸಜ್ಜುಗೊಳಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತದಾನ ಶನಿವಾರ  ನಡೆಯಲಿದ್ದು,  ಕಣದಲ್ಲಿರುವ 20 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ವಾಗಲಿದೆ.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು  ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಯ ಒಳಗೆ ಕ್ಯಾಮೆರಾ ಅಥವಾ ಮೊಬೈಲ್‌ ಬಳಸಿ ಫೋಟೊ ತೆಗೆಯುವುದನ್ನು ನಿಷೇಧಿಸಲಾಗಿದೆ. 

ಕೊನೆ ಕ್ಷಣದವರೆಗೂ ಮತಬೇಟೆ:  ಪ್ರಮುಖ ಪಕ್ಷಗಳ ಕಾರ್ಯಕರ್ತರು  ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ತಲುಪಲು ಕೊನೆ ಕ್ಷಣದವರೆಗೂ ಪ್ರಯತ್ನ ಮುಂದುವರಿಸಿದರು.  ಕಾಂಗ್ರೆಸ್‌ ಅಭ್ಯರ್ಥಿ ಸಿ.ಕೆ.ಅಬ್ದುಲ್ ರೆಹಮಾನ್‌ ಷರೀಫ್‌ ಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳ ಮುಖಂಡರನ್ನು, ಹಾಗೂ ಪಕ್ಷದ  ಸ್ಥಳೀಯ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದರು.

ಜೆ.ಸಿ. ನಗರದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರು ಗಂಗಾನಗರ, ಹೆಬ್ಬಾಳ, ಗಂಗೇನಹಳ್ಳಿ, ಸಂಜಯನಗರದಲ್ಲಿ ಮತದಾರರ ಮನೆಮನೆಗೆ ತೆರಳಿ ಮತಯಾಚಿಸಿದರು. ಜೆಡಿಎಸ್‌ ಅಭ್ಯರ್ಥಿ ಇಸ್ಮಾಯಿಲ್‌ ಷರೀಫ್‌ ನಾನಾ ಅವರು  ಜೆ.ಸಿ.ನಗರ, ಮನೋರಾಯನಪಾಳ್ಯ, ಚಾಮುಂಡಿನಗರ, ಗಂಗಾನಗರಗಳಲ್ಲಿ ಮತ ಯಾಚಿಸಿದರು. ಸುಲ್ತಾನ್‌ಪಾಳ್ಯದ ಅಕ್ಬರ್‌ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

‘ಕ್ಷೇತ್ರದ ಹೊರಗಿನ ರಾಜಕೀಯ ಮುಖಂಡರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಆರೋಪಗಳಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಅಕ್ರಮ ಮದ್ಯ ವಿತರಣೆ ಸಂಬಂಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ’ ಎಂದು ಚುನಾವಣಾಧಿಕಾರಿ ಎಂ.ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕ–ಅಂಶ
522 ವಿದ್ಯುನ್ಮಾನ ಮತಯಂತ್ರ ಬಳಕೆ
237 ಮತಗಟ್ಟೆಗಳು
70 ಅತಿಸೂಕ್ಷ್ಮ  ಮತಗಟ್ಟೆಗಳು
69 ಸೂಕ್ಷ್ಮ  ಮತಗಟ್ಟೆಗಳು

ಮತದಾನದ ಸಮಯ:
ಬೆಳಿಗ್ಗೆ 7ರಿಂದ ಸಂಜೆ 5

ಬಿಬಿಎಂಪಿ ಸಹಾಯವಾಣಿ:
080– 22374740

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT