ADVERTISEMENT

25 ಕ್ಯಾಂಟೀನ್‌ಗಳಿಗೆ ಇನ್ನೂ ತಲುಪಿಲ್ಲ ಆಹಾರ!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
25 ಕ್ಯಾಂಟೀನ್‌ಗಳಿಗೆ ಇನ್ನೂ ತಲುಪಿಲ್ಲ ಆಹಾರ!
25 ಕ್ಯಾಂಟೀನ್‌ಗಳಿಗೆ ಇನ್ನೂ ತಲುಪಿಲ್ಲ ಆಹಾರ!   

ಬೆಂಗಳೂರು: ನಗರದಲ್ಲಿ ಮೊದಲ ಹಂತದಲ್ಲಿ ಆರಂಭವಾಗಿರುವ 101 ಇಂದಿರಾ ಕ್ಯಾಂಟೀನ್‌ಗಳ ಪೈಕಿ 25 ಕ್ಯಾಂಟೀನ್‌ಗಳಲ್ಲಿ ವಾರ ಕಳೆದರೂ ಆಹಾರ ಪೂರೈಕೆ ಆಗುತ್ತಿಲ್ಲ.

‘70ರಿಂದ 75 ಕ್ಯಾಂಟೀನ್‌ಗಳಲ್ಲಿ ಮಾತ್ರ ಊಟ, ತಿಂಡಿ ಕೊಡಲಾಗುತ್ತಿದೆ. ದಿನಕ್ಕೆ 25,000ದಿಂದ 28,000 ಜನರಿಗೆ ಊಟ ಪೂರೈಸಲು ಸಾಧ್ಯವಾಗುತ್ತಿದೆ’ ಎಂದು ಮೇಯರ್ ಜಿ.ಪದ್ಮಾವತಿ ಒಪ್ಪಿಕೊಂಡರು. ‘ಮುಖ್ಯಮಂತ್ರಿಗಳು ಗುರಿ ನಿಗದಿಪಡಿಸಿದಾಗ, ಅಧಿಕಾರಿಗಳು ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ಅಡುಗೆ ಮನೆಗಳನ್ನು ಪೂರ್ಣಗೊಳಿಸಲು ನೀಡಲಿಲ್ಲ. ಇದರಿಂದಾಗಿ ಎಲ್ಲ ಕ್ಯಾಂಟೀನ್‌ಗಳನ್ನು ಏಕಕಾಲದಲ್ಲಿ ಆರಂಭಿಸುವುದು ಸಾಧ್ಯವಾಗಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಮರ್ಫಿಟೌನ್‌ ಮತ್ತು ಬೈಯಪ್ಪನಹಳ್ಳಿಯ ಕ್ಯಾಂಟೀನ್‌ಗಳಲ್ಲಿ ಭಾನುವಾರದಿಂದ ಆಹಾರ ಪೂರೈಕೆ ಆರಂಭವಾಗಿದೆ’ ಎಂದರು.

ADVERTISEMENT

ಕೇಟರಿಂಗ್ ಸೇವೆಯ ಗುತ್ತಿಗೆ ಪಡೆದಿರುವ ರಿವಾರ್ಡ್ ಸಂಸ್ಥೆ ಅರಮನೆ ಮೈದಾನದ ವೈಟ್ ಪೆಟಲ್ ಅಡುಗೆ ಮನೆಯಲ್ಲಿ ಊಟ ತಯಾರಿಸಲು ಮಧು ಗೌಡ ಎಂಬುವರಿಗೆ ಉಪ ಗುತ್ತಿಗೆ ನೀಡಿದೆ. ನಿತ್ಯ 8,000ದಿಂದ 10,000 ಜನರಿಗೆ ಪೂರೈಸುವಷ್ಟು ಅನ್ನ, ಸಾಂಬಾರು, ಬೆಳಿಗ್ಗೆಯ ಪಲಾವ್, ಖಾರಾಬಾತ್ ಇಲ್ಲಿ  ತಯಾರಾಗುತ್ತಿದೆ.

‘ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್‌ ಸಮೀಪದ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆ ಮಾತ್ರ ಉದ್ಘಾಟನೆಯ ದಿನ ಕಾರ್ಯಾರಂಭಿಸಿತ್ತು. ಸರ್ವಜ್ಞ ನಗರದಲ್ಲಿ ನಿರ್ಮಿಸಿರುವ ಅಡುಗೆ ಮನೆ ಎರಡು ದಿನಗಳ ಹಿಂದಷ್ಟೇ ಪೂರ್ಣಗೊಂಡಿದ್ದು, ಅಲ್ಲೀಗ ಅಡುಗೆ ತಯಾರಿಸಲಾಗುತ್ತಿದೆ. ಉಳಿದ 5 ಅಡುಗೆ ಮನೆಗಳು ಆರಂಭವಾಗಲು ಇನ್ನಷ್ಟು ಸಮಯ ಬೇಕಿದೆ. ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ’ ಎನ್ನುತ್ತವೆ ಪಾಲಿಕೆ ಮೂಲಗಳು.

‘ಯೋಜನೆ ಅನುಷ್ಠಾನದ ಉಸ್ತುವಾರಿ ಹೊತ್ತ ಅಧಿಕಾರಿಗಳು ಮುಖ್ಯಮಂತ್ರಿಯನ್ನು ಮೆಚ್ಚಿಸಲು ಸುಳ್ಳು ಮಾಹಿತಿ ನೀಡಿದರು. ವೈಟ್ ಪೆಟಲ್‌ನಲ್ಲಿ ಅಡುಗೆ ತಯಾರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

4 ಆಸ್ಪತ್ರೆಗಳಲ್ಲೂ ಇಂದಿರಾ ಕ್ಯಾಂಟೀನ್‌

‘ರೋಗಿಗಳಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲು ಕಿದ್ವಾಯಿ, ಜಯದೇವ, ವಿಕ್ಟೋರಿಯಾ, ಬೌರಿಂಗ್‌ ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿಗೆ ಸೋಮವಾರ ಸಲ್ಲಿಸಿದ್ದೇವೆ. ಇದಕ್ಕೆ ಒಪ್ಪಿಗೆ ನೀಡಿದ್ದಾರೆ’ ಎಂದು ಮೇಯರ್‌ ತಿಳಿಸಿದರು.

ಉದ್ಯೋಗ: ಅನ್ಯ ರಾಜ್ಯದವರಿಗೆ ಮಣೆ

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸಲು ಗುತ್ತಿಗೆ ಪಡೆದಿರುವ ರಿವಾರ್ಡ್‌ ಸಂಸ್ಥೆ ಪಂಜಾಬ್‌ನ ವ್ಯಕ್ತಿಗೆ ಸೇರಿದ್ದು. ಈ ಸಂಸ್ಥೆ ಸುಮಾರು 300 ಮಂದಿ ಉತ್ತರ ಭಾರತೀಯರನ್ನು ನೇಮಿಸಿಕೊಂಡಿದೆ. ಗುತ್ತಿಗೆ ಪಡೆದ ಇನ್ನೊಂದು ಸಂಸ್ಥೆಯಾದ ಚೆಫ್‌ಟಾಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೋವಿಂದ ಪೂಜಾರಿ ಅವರು ಕನ್ನಡಿಗರು. ಆದರೂ ಅವರು ತೆಲುಗು ಭಾಷಿಗರನ್ನು ನೇಮಿಸಿಕೊಂಡಿದ್ದಾರೆ ಎಂದು ಕನ್ನಡ ಸಂಘಟನೆಗಳು  ಅಸಮಾಧಾನ ವ್ಯಕ್ತಪಡಿಸಿವೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಮೇಯರ್‌ ಮತ್ತು ಬಿಬಿಎಂಪಿ ಆಯುಕ್ತರು. ಕನ್ನಡಿಗರನ್ನೇ ನೇಮಿಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

1,000ಕ್ಕೆ ಹೆಚ್ಚಿಸಲು ಶಾಸಕ ಮನವಿ

‘ಇಂದಿರಾ ಕ್ಯಾಂಟೀನ್‌ಗಳಲ್ಲಿ ಒಂದು ಹೊತ್ತಿಗೆ 300ರಿಂದ 400 ಮಂದಿಗಷ್ಟೇ ಊಟ ಮತ್ತು ತಿಂಡಿ ನೀಡಲಾಗುತ್ತಿದೆ. ಇದನ್ನು 1,000ಕ್ಕೆ ಹೆಚ್ಚಿಸಬೇಕು’ ಎಂದು ಕಾಂಗ್ರೆಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಶಾಸಕ ಎಸ್‌.ಟಿ.ಸೋಮಶೇಖರ್‌ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಕ್ಯಾಂಟೀನ್‌ನ ಚಟುವಟಿಕೆ ಮೇಲೆ ನಿಗಾ ವಹಿಸಲು ಹಾಗೂ ಆರಂಭಿಕ ಹಂತದಲ್ಲಿ ಉಂಟಾಗಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿದೂಗಿಸಲು ವಾರ್ಡ್‌ ಮಟ್ಟದಲ್ಲಿ ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಎನ್‌ಜಿಒಗಳನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.