ADVERTISEMENT

ಮೂರು ಫ್ಲೈ ಓವರ್‌ ನಿರ್ಮಾಣಕ್ಕೆ ಬಿಬಿಎಂಪಿ ಚಿಂತನೆ

ಆಡುಗೋಡಿ–ಸರ್ಜಾಪುರ, ಕಮ್ಮನಹಳ್ಳಿ–ನೆಹರು ರಸ್ತೆ ಜಂಕ್ಷನ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 20:27 IST
Last Updated 6 ಜುಲೈ 2018, 20:27 IST
   

ಬೆಂಗಳೂರು: ಸುಗಮ ಸಂಚಾರ ವ್ಯವಸ್ಥೆಗೆ ಬಿಬಿಎಂಪಿ ಮೂರು ಫ್ಲೈ ಓವರ್‌ ನಿರ್ಮಿಸಲು ಮುಂದಾಗಿದೆ. 2017ರಲ್ಲಿ ಮಾಡಲಾದ ಪ್ರಸ್ತಾವಕ್ಕೆ ಈಗ ಮರುಜೀವ ನೀಡಲಾಗುತ್ತಿದೆ. ಇದಕ್ಕೆ ವಿವರವಾದ ಯೋಜನಾ ವರದಿ ತಯಾರಿಸಲು ಸಲಹಾ ಸಂಸ್ಥೆಗೆ ಟೆಂಡರು ನೀಡಿದೆ.

ಎಲ್ಲೆಲ್ಲಿ ಫ್ಲೈ ಓವರ್‌? : ಆಡುಗೋಡಿ ಜಂಕ್ಷನ್‌ನಿಂದ ಹೊಸೂರು ರಸ್ತೆಯನ್ನು ಹಾದು ಸರ್ಜಾಪುರ ರಸ್ತೆ ಜಂಕ್ಷನ್‌ವರೆಗೆ, ಸುರಂಜನ್‌ದಾಸ್‌ ರಸ್ತೆಯಿಂದ ಹಳೆ ಮದ್ರಾಸ್‌ ರಸ್ತೆವರೆಗೆ (ಹೆಚ್ಚುವರಿ ಸಂಪರ್ಕ ಮಾರ್ಗ), ಕಮ್ಮನಹಳ್ಳಿ ಮುಖ್ಯ ರಸ್ತೆಯಿಂದ ನೆಹರು ರೋಡ್‌ ಜಂಕ್ಷನ್‌ವರೆಗೆ ಫ್ಲೈ ಓವರ್‌ ನಿರ್ಮಿಸಲು ಚಿಂತನೆ ನಡೆದಿದೆ.

ರಾಜ್ಯ ಸರ್ಕಾರದಿಂದ ಕ್ರಿಯಾ ಯೋಜನೆಗೆ ಅಂಗೀಕಾರ ದೊರೆತಿದೆ. ₹ 200 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ADVERTISEMENT

ಬಿಬಿಎಂಪಿ ಅಧಿಕಾರಿಗಳು ಈ ಮೂರು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸಿದ ಬಳಿಕ ಈ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಫ್ಲೈಓವರ್‌ಗಳು ಮತ್ತು ಗ್ರೇಡ್‌ ಸಪರೇಟರ್‌ಗಳನ್ನು ನಿರ್ಮಿಸುವ ಚಿಂತನೆಯೂ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಟೆಂಡರು ದಾಖಲೆಗಳ ಪ್ರಕಾರ, ಸಲಹಾ ಏಜೆನ್ಸಿಯು ಇಲ್ಲಿ ಫ್ಲೈಓವರ್‌ ನಿರ್ಮಿಸುವ ಸಾಧ್ಯತೆಯ ಜತೆಗೆ ಪರ್ಯಾಯ ಮಾರ್ಗಗಳ ಪರಿಕಲ್ಪನೆಯ ಕುರಿತೂ ಅಧ್ಯಯನ ನಡೆಸಿ ವಿವರವಾದ ಯೋಜನಾ ವರದಿ ಸಲ್ಲಿಸಲಿದೆ.

‘ಸಂಚಾರ ದಟ್ಟಣೆಯಿಂದ ಬೇಸತ್ತ ಪ್ರಯಾಣಿಕರ ಬಹುಕಾಲದ ಬೇಡಿಕೆಯ ಯೋಜನೆಗೆ ಮರುಜೀವ ನೀಡಲಾಗಿದೆ. ಇದು ಪೂರ್ಣಗೊಂಡ ಬಳಿಕ ಸಂಚಾರ ದಟ್ಟಣೆ ಬಹುಪಾಲು ಕಡಿಮೆಯಾಗುವ ನಿರೀಕ್ಷೆ ಹೊಂದಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.