ADVERTISEMENT

4 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:20 IST
Last Updated 26 ಜುಲೈ 2017, 20:20 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.

ನಿರುದ್ಯೋಗಿಗಳಿಗೆ ಪಾಲಿಕೆಯ ಆರ್ಥಿಕ ಸ್ವಾವಲಂಬನೆ ಯೋಜನೆಯಡಿ 892 ಫಲಾನುಭವಿಗಳಿಗೆ ಕಾರುಗಳು, ಸಾರಥಿ ಯೋಜನೆಯಡಿ 665 ಫಲಾನುಭವಿಗಳಿಗೆ ಆಟೊರಿಕ್ಷಾ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಡಿ 285 ಫಲಾನುಭವಿಗಳಿಗೆ ಹೆಚ್ಚುವರಿ ಚಕ್ರ ಅಳವಡಿಸಿರುವ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು. 23 ಮಾನಸಿಕ ಅಸ್ವಸ್ಥರಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್‌ ನಂತರದ 584 ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಯಿತು.

ADVERTISEMENT

₹6.5 ಲಕ್ಷ ನೆರವು: ಗ್ಯಾಂಗ್‌ಮನ್‌ ಮಗಳಾದ ಶಿಲ್ಪಾ ಅವರು ಫಿಲಿಪೈನ್ಸ್‌ನಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಅವರಿಗೆ ಬಿಬಿಎಂಪಿ ವತಿಯಿಂದ ₹6.5 ಲಕ್ಷ ಸಹಾಯಧನ ನೀಡಲಾಯಿತು. ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾತನಾಡಿ, ‘2015–16ನೇ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ₹14.89 ಕೋಟಿ ಮೀಸಲಿಟ್ಟಿದ್ದು, ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿದ್ದೇವೆ.  ನಿರುದ್ಯೋಗಿಗಳಿಗೆ ಕಾರು ಕೊಳ್ಳಲು ₹1 ಲಕ್ಷ ಸಬ್ಸಿಡಿ, ಆಟೊರಿಕ್ಷಾಗೆ ₹38 ಸಾವಿರ ಹಾಗೂ ಅಂಗವಿಕಲರು ತ್ರಿಚಕ್ರ ವಾಹನ ಖರೀದಿಸಲು ₹86 ಸಾವಿರ ಸಬ್ಸಿಡಿ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.