ADVERTISEMENT

ಜಾಹೀರಾತಿಗೆ ಸರ್ಕಾರಿ ಹಣ ಬಳಕೆ: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 20:39 IST
Last Updated 23 ಜನವರಿ 2018, 20:39 IST

ಬೆಂಗಳೂರು: ಕೆಲಸವನ್ನೇ ಮಾಡದೆ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಿಕೊಂಡು ಪ್ರಚಾರ ಪಡೆಯುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಎಫ್‌ಕೆಸಿಸಿಐನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಬೆಂಗಳೂರು ಮೆಟ್ರೊ ಸೇರಿದಂತೆ ಅನೇಕ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದ್ದೆ. ಆದರೆ, ನನ್ನ ಫೋಟೋವನ್ನು ದೊಡ್ಡದಾಗಿ ಹಾಕಿಸಿಕೊಂಡು ಪ್ರಚಾರ ಪಡೆಯಲಿಲ್ಲ. ಸರ್ಕಾರಿ ಹಣವನ್ನು ಜಾಹೀರಾತಿಗೆ ನಾನು ಖರ್ಚು ಮಾಡಿಲ್ಲ. ಅದೇ ದುಡ್ಡನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಿದ್ದೆ. ಈಗಿನ ಸರ್ಕಾರ ಜಾಹೀರಾತಿಗೆ ಬೊಕ್ಕಸದ ಹಣ ಬಳಸುತ್ತಿದೆ’ ಎಂದು ಹೇಳಿದರು.

‘ಬೆಂಗಳೂರಿನ ಕಸ ಹಾಗೂ ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಒಂದು ಬಾರಿ ಜೆಡಿಎಸ್‌ಗೆ ಅವಕಾಶ ಕೊಟ್ಟು ನೋಡಿ. ಎಲ್ಲವನ್ನೂ ಒಂದೇ ತಿಂಗಳಿನಲ್ಲಿ ಸರಿಮಾಡುತ್ತೇನೆ’ ಎಂದರು.

ADVERTISEMENT

‘ನನಗೆ ದುಡ್ಡು ಮಾಡುವ ಅವಶ್ಯವಿಲ್ಲ. ಏಕೆಂದರೆ ದುಡ್ಡು ಕಳುಹಿಸಲು ನನಗೆ ಹೈಕಮಾಂಡ್‌ ಇಲ್ಲ. ನನ್ನ ಸರ್ಕಾರದ ಅವಧಿಯಲ್ಲಿ ಹೆಚ್ಚು ಸಾಲ ಮಾಡಿರಲಿಲ್ಲ. ಈಗಿನ ಸರ್ಕಾರ ಮತಕ್ಕಾಗಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.