ADVERTISEMENT

ರೌಡಿಗಳ ಭೂಮಾಫಿಯಾಕ್ಕೆ ಸಿಸಿಬಿ ಶಾಕ್!

35 ರೌಡಿಗಳ ಮನೆಗಳ ಮೇಲೆ ಮುಂಜಾನೆ ಏಕಕಾಲದಲ್ಲಿ ದಾಳಿ l 120 ಜಮೀನುಗಳ ದಾಖಲೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 19:34 IST
Last Updated 27 ಸೆಪ್ಟೆಂಬರ್ 2018, 19:34 IST
ಕೊಮ್ಮಘಟ್ಟ ಮಂಜ ಕೊಟ್ಟ ನಿಂಬೆಹಣ್ಣನ್ನು ನೋಡುತ್ತಿರುವ ಅಲೋಕ್‌ಕುಮಾರ್
ಕೊಮ್ಮಘಟ್ಟ ಮಂಜ ಕೊಟ್ಟ ನಿಂಬೆಹಣ್ಣನ್ನು ನೋಡುತ್ತಿರುವ ಅಲೋಕ್‌ಕುಮಾರ್   

ಬೆಂಗಳೂರು: ಭೂಮಾಫಿಯಾದಲ್ಲಿ ತೊಡಗಿರುವ ನಗರದ ಕುಖ್ಯಾತ ರೌಡಿಗಳಿಗೆ ಗುರುವಾರ ನಸುಕಿನ ವೇಳೆಯೇ ಬಿಸಿ ಮುಟ್ಟಿಸಿದ ಸಿಸಿಬಿ ಪೊಲೀಸರು, ಅವರ ಮನೆಗಳನ್ನು ಜಾಲಾಡಿ ಕೋಟ್ಯಂತರ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದರು.

ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಗೆ ಕಾರ್ಯಾಚರಣೆಗೆ ಇಳಿದ 92 ಪೊಲೀಸರು, ಏಕಕಾಲದಲ್ಲೇ 35 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದರು.

‘ರೌಡಿಗಳ ಬಳಿ ಪತ್ತೆಯಾಗಿರುವ ದಾಖಲೆಗಳನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಈ ಅಕ್ರಮ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳಿಗೆ ವರದಿ ಸಲ್ಲಿಸುತ್ತೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

ADVERTISEMENT

‘ಯಾವುದೇ ಹಂತದಲ್ಲೂ ರೌಡಿಗಳಿಗೆ ಮಾಹಿತಿ ಸೋರಿಕೆ ಆಗದಂತೆ ನಿಗಾ ವಹಿಸಿ ಗೋಪ್ಯವಾಗಿ ಕಾರ್ಯಾಚರಣೆ ನಡೆಸಿದ್ದೇವೆ. ದಾಳಿ ವೇಳೆ 25 ರೌಡಿಗಳನ್ನು ವಶಕ್ಕೆ ಪಡೆದು ಹೇಳಿಕೆ ಪಡೆಯಲಾಗಿದೆ. ರೌಡಿ ಜೆಸಿಬಿ ನಾರಾಯಣ ಸದ್ಯ ಜೈಲಿನಲ್ಲಿದ್ದಾನೆ. ಆತನ ಮನೆಯಲ್ಲೂ ಕೆಲ ಪ್ರಮುಖ ದಾಖಲೆಗಳು ಸಿಕ್ಕಿವೆ. ಪ‍್ರತಿಯೊಬ್ಬರಿಗೂ ತಮ್ಮ ಆದಾಯದ ಮೂಲ ತೋರಿಸುವಂತೆ ಸೂಚಿಸಿದ್ದೇವೆ’ ಎಂದು ಹೇಳಿದರು.

ಯಾರ‍್ಯಾರ ಮನೆ ಮೇಲೆ ದಾಳಿ: ಮದ್ದೂರು ತಾಲ್ಲೂಕಿನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಲಕ್ಷ್ಮಣ, ಲೋಕೇಶ್ ಅಲಿಯಾಸ್ ಮುಲಾಮ, ನಾರಾಯಣ ಅಲಿಯಾಸ್ ಜೆಸಿಬಿ, ತನ್ವೀರ್, ಕೊಮ್ಮಘಟ್ಟ ಮಂಜ, ಬೆತ್ತನಗೆರೆ ಶಂಕರ, ಮಾಹಿಮ್, ಜಾಂಟಿ, ಲಕ್ಕಸಂದ್ರದ ವಿಜಿ, ಗಿರೀಶ ಅಲಿಯಾಸ್ ರಾಬರಿ ಗಿರಿ, ಮಂಜುನಾಥ ಅಲಿಯಾಸ್ ತೊದಲ, ಮೈಕಲ್ ಡಿಸೋಜಾ, ಜೆ.ಸಿ.ರೋಡ್ ಶಂಕರ, ಕೊಡಿಗೆಹಳ್ಳಿ ಅಪ್ಪು, ರವಿ ಅಲಿಯಾಸ್ ಗಾಳಿ, ಮಹೇಶ ಅಲಿಯಾಸ್ ದಡಿಯಾ, ರವಿ ಅಲಿಯಾಸ್ ದೂದ್, ಜಗದೀಶ್ ಅಲಿಯಾಸ್ ಮಾರೇನಹಳ್ಳಿ ಜಗ್ಗ, ವೇಡಿಯಪ್ಪನ್, ಅತೂಷ್, ರಾಜಾಕುಟ್ಟಿ, ತಿರುಮಾರನ್ ಅಲಿಯಾಸ್ ಕುಟ್ಟಿ, ಪಪ್ಪು ಅಲಿಯಾಸ್ ಅಮಿರ್ ಖಾನ್ ಮನೆಗಳ ಮೇಲೆ ದಾಳಿ ನಡೆದಿದೆ.

ಸದ್ಯದಲ್ಲೇ ಸಹಾಯವಾಣಿ: ರಿಯಲ್ ಎಸ್ಟೇಟ್ ದಂಧೆ, ಹಫ್ತಾ ವಸೂಲಿ, ರೌಡಿ ಚಟುವಟಿಕೆಗಳ ವಿರುದ್ಧ ಸಾರ್ವಜನಿಕರಿಂದ ನೇರವಾಗಿ ಮಾಹಿತಿ ಸಂಗ್ರಹಿಸಲು ನಿರ್ಧರಿಸಿರುವ ಪೊಲೀಸರು, ಅದಕ್ಕಾಗಿ ಸಹಾಯವಾಣಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ.

‌‘ತಮಗೆ ರೌಡಿಗಳು ತೊಂದರೆ ಕೊಟ್ಟರೆ ಸಾರ್ವಜನಿಕರು ‘948080 1555’ ಸಂಖ್ಯೆಗೆ ಕರೆ ಮಾಡಬಹುದು. ಸಿಸಿಬಿ ಪೊಲೀಸರು ಆ ದೂರುಗಳನ್ನು ಆಧರಿಸಿ ತನಿಖೆ ನಡೆಸುತ್ತಾರೆ. ಸದ್ಯದಲ್ಲೇ ನಾಲ್ಕು ಅಂಕಿಗಳ ಸಹಾಯವಾಣಿ ಆರಂಭಿಸುತ್ತೇವೆ’ ಎಂದು ಕಮಿಷನರ್ ಹೇಳಿದರು.

ಅಲೋಕ್‌ ಕೈಗೆ ನಿಂಬೆಹಣ್ಣು ಕೊಟ್ಟ!

ರೌಡಿ ಕೊಮ್ಮಘಟ್ಟ ಮಂಜನನ್ನು ನೋಡಿದ ಅಲೋಕ್‌ಕುಮಾರ್, ‘ಏನೋ, ಇನ್ನೂ ನಿನ್ನ ಚಾಳಿ ಬಿಟ್ಟಿಲ್ವಾ? ಜೇಬಿನಲ್ಲಿ ಏನೇನು ಇಟ್ಟಿದ್ದಿಯಾ ತೆಗಿ’ ಎಂದರು. ಆ ಕೂಡಲೇ ಆತ ಮೊಬೈಲ್, ಪಾಕೆಟ್ ಡೈರಿ ಹಾಗೂ ಒಂದು ನಿಂಬೆಹಣ್ಣನ್ನು ತೆಗೆದು ಅಲೋಕ್‌ ಅವರ ಕೈಗಿಟ್ಟ!

ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕಮಿಷನರ್ ಕಚೇರಿಗೆ ಕರೆತಂದಿದ್ದ ರೌಡಿಗಳನ್ನು ಅಲೋಕ್ ಖುದ್ದು ವಿಚಾರಣೆ ನಡೆಸುವಾಗ ಈ ಪ್ರಸಂಗ ನಡೆಯಿತು.

ಮಂಜ ನಿಂಬೆಹಣ್ಣು ತೋರಿಸುತ್ತಿದ್ದಂತೆಯೇ, ‘ಇದನ್ಯಾಕೋ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದೀಯಾ. ಮಾಟ–ಗೀಟ ಮಾಡಿಸಿಕೊಂಡು ಬಂದಿಲ್ಲ ತಾನೆ’ ಎಂದು ನಕ್ಕರು. ಅದಕ್ಕೆ ಆತ, ‘ಇಲ್ಲ ಸರ್. ಹೊಸದಾಗಿ ಮನೆ ಕಟ್ಟಿಸುತ್ತಿದ್ದೇನೆ. ಯಾವುದೇ ವಿಘ್ನಗಳು ಬರಬಾರದೆಂದು ಪೂಜೆ ಮಾಡಿಸಿ ನಿಂಬೆಹಣ್ಣನ್ನು ಇಟ್ಟುಕೊಂಡಿದ್ದೆ ಅಷ್ಟೆ’ ಎಂದು ಪ್ರತಿಕ್ರಿಯಿಸಿದ.

ರೌಡಿಗಳ ಮನೆಗಳಲ್ಲಿ ಸಿಕ್ಕಿದ್ದೇನು?

120 ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು

15 ಚೆಕ್‌ ಬುಕ್‌ಗಳು

14 ಮೊಬೈಲ್‌ಗಳು

300 ಗ್ರಾಂ ಚಿನ್ನ

3 ಕಾರುಗಳು

2 ನೋಟು ಎಣಿಕೆ ಸಾಧನ

ನಕಲಿ ಪಿಸ್ತೂಲ್

ಎರಡು ತಲ್ವಾರ್

₹ 500ರ ಹಳೇ ನೋಟುಗಳು (₹ 2.2 ಲಕ್ಷ ಮೌಲ್ಯ)

***

‘ಹೆಂಡ್ತಿ ನನ್ನ ಮಾತು ಕೇಳಲ್ಲ ಸರ್'

‘ಸರ್, ಹೆಂಡತಿ ನನ್ನ ಮಾತನ್ನು ಕೇಳೋದಿಲ್ಲ. ಆಕೆಯನ್ನು ನೀವೇ ಕಂಟ್ರೋಲ್ ಮಾಡ್ಬೇಕು....’

ಶ್ರೀರಾಮಸೇನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಯಶಸ್ವಿನಿಗೌಡ ಕುರಿತು ಅವರ ಪತಿ ಮಹೇಶ್ ಅಲಿಯಾಸ್ ದಡಿಯಾ ಪೊಲೀಸರ ಬಳಿ ಮನವಿ ಮಾಡಿದ ಪರಿ ಇದು.

ಮಹೇಶ್‌ನನ್ನು ವಿಚಾರಣೆ ನಡೆಸಿದ ಡಿಸಿಪಿ ಗಿರೀಶ್, ‘ನಿನ್ನ ಹಾಗೆ ನಿನ್ನ ಪತ್ನಿ ಕೂಡ ರೌಡಿಶೀಟರ್. ಆಕೆಯನ್ನು ನಿಯಂತ್ರಣದಲ್ಲಿಡು. ಇಲ್ಲದಿದ್ದರೆ, ಇಬ್ಬರನ್ನೂ ಒಳಗೆ ಕಳಿಸ್ತೀನಿ’ ಎಂದರು. ಆಗ ತನ್ನ ಅಸಹಾಯಕತೆ ಹೊರಹಾಕಿದ ಮಹೇಶ್, ‘ಆಕೆಗೆ ನಿಮ್ಮಂಥವರೇ ಬುದ್ಧಿ ಹೇಳ್ಬೇಕು ಸರ್’ ಎಂದ.

****

ಇನ್ನು ಮುಂದೆ ಕಾರ್ಯಾಚರಣೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ದಾಳಿಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ₹ 2 ಲಕ್ಷ ನಗದು ಬಹುಮಾನ ನೀಡಲಾಗುವುದು

-ಟಿ.ಸುನೀಲ್ ಕುಮಾರ್ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.