ADVERTISEMENT

ಬ್ರಿಟನ್‌ಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮೊಹಮ್ಮದ್‌ ನಲಪಾಡ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 8:44 IST
Last Updated 23 ಆಗಸ್ಟ್ 2018, 8:44 IST
   

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಬ್ರಿಟನ್‌ಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

‘ಈ ಕುರಿತಂತೆ ನನ್ನ ಜಾಮೀನು ಷರತ್ತುಗಳನ್ನು ಸಡಿಲಿಸಿ’ ಎಂದು ಮೊಹಮದ್ ನಲಪಾಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲ ಎಂ.ಎಸ್. ಶ್ಯಾಮಸುಂದರ್ ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

ADVERTISEMENT

ಏನು ಮನವಿ ?: ‘ನನ್ನ ತಮ್ಮ ಲಂಡನ್‌ನಲ್ಲಿ ಇದ್ದಾನೆ‌. ಅವನನ್ನು ಭೇಟಿ ಮಾಡಲು ಇದೇ 25ರಿಂದ 15 ದಿನಗಳ ಕಾಲ ತೆರಳಲು ಉದ್ದೇಶಿಸಿದ್ದೇನೆ. ಆದ್ದರಿಂದ ಅವಕಾಶ ಕಲ್ಪಿಸಬೇಕು’ ಎಂದು ನಲಪಾಡ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್‌ ನಲಪಾಡ್ ಜೈಲಿನಿಂದ ಹೊರಬರಲು ಸಾಕಷ್ಟು ಕಾನೂನು ಹೋರಾಟದ ಮೂಲಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದಾರೆ. ಇದೇ ಕುನ್ಹ ಅವರಿದ್ದ ನ್ಯಾಯಪೀಠ ಅವರಿಗೆ ಷರತ್ತಬದ್ಧ ಜಾಮೀನು ನೀಡಿತ್ತು. ಈ ಷರತ್ತುಗಳಲ್ಲಿ ಆರೋಪಿ ನಗರ ಬಿಟ್ಟು ತೆರಳದಂತೆ ಷರತ್ತು‌ ವಿಧಿಸಲಾಗಿತ್ತು.

ಇದೀಗ ಈ ಷರತ್ತು ಸಡಿಸುವಂತೆ ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.