ADVERTISEMENT

ವ್ಹೀಲಿಂಗ್‌ಗಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ: 161 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2018, 19:47 IST
Last Updated 18 ಆಗಸ್ಟ್ 2018, 19:47 IST

ಬೆಂಗಳೂರು: ‘ಅಮ್ಮ ಹೇಳಿದ್ದಾರೆ, ಬೈಕ್‌ ವ್ಹೀಲಿಂಗ್‌ ಮಾಡುವುದು ತಪ್ಪು’ ಎಂಬ ಬರಹವನ್ನು ತನ್ನ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಬರೆಸಿಕೊಂಡಿದ್ದ ಯುವಕನೊಬ್ಬ, ವ್ಹೀಲಿಂಗ್ ಮಾಡಿಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕೆ.ಜಿ.ಹಳ್ಳಿಯ ನಿವಾಸಿ ಅಬ್ರಾಜ್ ಖಾನ್‌ ಬಂಧಿತ. ಪೋಷಕರೇ ಆತನಿಗೆ ದ್ವಿಚಕ್ರ ವಾಹನ ಕೊಡಿಸಿದ್ದರು. ವ್ಹೀಲಿಂಗ್‌ ಮಾಡಬಾರದೆಂದು ಷರತ್ತು ಸಹ ವಿಧಿಸಿದ್ದರು. ಅಷ್ಟಾದರೂ ಆರೋಪಿ, ವ್ಹೀಲಿಂಗ್‌ ಮಾಡುತ್ತಿದ್ದ. ಸದ್ಯ ಆತನ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದ್ದು, ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ನಗರದ ಹಲವು ಯುವಕರು, ಬೈಕ್ ವ್ಹೀಲಿಂಗ್ ಮಾಡುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿರುವ ಅವರೆಲ್ಲ, ಅದರ ಮೂಲಕವೇ ದಿನಾಂಕ ಹಾಗೂ ಸ್ಥಳಗಳನ್ನು ನಿಗದಿ ಮಾಡಿ ವ್ಹೀಲಿಂಗ್ ಮಾಡಲು ಹೋಗುತ್ತಿದ್ದಾರೆ’ ಎಂದುಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್‌.ಹಿತೇಂದ್ರ ತಿಳಿಸಿದರು.

ADVERTISEMENT

‘ಟೀಮ್–46, ಟೀಮ್–96, ಬ್ಯಾಡ್‌ ಬಾಯ್ಸ್‌, ಬ್ಯಾಡ್‌ ರೈಡರ್ಸ್‌, ಲಯನ್ಸ್‌... ಹೀಗೆ ಹಲವುಗ್ರೂಪ್‌ಗಳಿರುವುದು ತನಿಖೆಯಿಂದ ಗೊತ್ತಾಗಿದೆ. ವ್ಹೀಲಿಂಗ್‌ಗಾಗಿ ವಿನ್ಯಾಸಗೊಳಿಸಲಾದ ವಾಹನಗಳ ಮಾರಾಟವೂ ಈ ಗ್ರೂಪ್‌ಗಳ ಮೂಲಕ ನಡೆಯುತ್ತಿದೆ. ಇದೇ ಜನವರಿಯಿಂದ ಆಗಸ್ಟ್‌ 18ರವರೆಗೆ ವ್ಹೀಲಿಂಗ್‌ ಪ್ರಕರಣ ಸಂಬಂಧ 161 ಮಂದಿಯನ್ನು ಬಂಧಿಸಲಾಗಿದೆ’ ಎಂದು ಹೀತೇಂದ್ರ ಹೇಳಿದರು.

‘ಶಾಲಾ– ಕಾಲೇಜುಗಳಿಗೆ ಭೇಟಿ ನೀಡಿ, ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಅವರ ಕುಟುಂಬ ಸದಸ್ಯರಿಗೂ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.