ADVERTISEMENT

ಕಣ್ಣೀರಿಟ್ಟ ಪ್ರಕಾಶ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:53 IST
Last Updated 18 ಏಪ್ರಿಲ್ 2018, 5:53 IST

ಭಾಲ್ಕಿ: ಬಿಜೆಪಿ ಟಿಕೆಟ್‌ ದೊರೆಯದ ಕಾರಣ ಪಟ್ಟಣದಲ್ಲಿ ಮಂಗಳವಾರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಭಾವುಕರಾಗಿ ಕಣ್ಣೀರಿಟ್ಟರು.

ಪ್ರಕಾಶ ಅವರ ಮನೆ ಮುಂದೆ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಮೆರವಣಿಗೆಯಲ್ಲಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದನ್ನು ಕಂಡು ಪ್ರಕಾಶ ಭಾವೋದ್ವೇಗಕ್ಕೆ ಒಳಗಾದ ಅವರು ಬಿಕ್ಕಿ ಬಿಕ್ಕಿ ಅತ್ತರು.

ಬೆಂಬಲಿಗರು ಪ್ರತಿಭಟನೆಯ ಉದ್ದಕ್ಕೂ ‘ಪ್ರಕಾಶ ಖಂಡ್ರೆ ತುಮ್‌ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ’ ಎನ್ನುವ ಘೋಷಣೆ ಕೂಗಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬೆಂಬಲಿಗರು ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಪ್ರಕಾಶ ಖಂಡ್ರೆ ಮಾತನಾಡಿ, ‘ಎರಡು ದಶಕಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸಿದ್ದೇನೆ. ಕೊನೆಯ ಕ್ಷಣದಲ್ಲಿ ಟಿಕೆಟ್‌ ನೀಡದೇ ಇರುವುದರಿಂದ ತುಂಬ ಬೇಸರವಾಗಿದೆ. ನನಗೆ ಟಿಕೆಟ್ ಕೈ ತಪ್ಪಿರುವುದರ ಹಿಂದೆ ದೊಡ್ಡ ಪಿತೂರಿ ಇದೆ. ಬಿಜೆಪಿಯ ಹಿರಿಯ ನಾಯಕರು ಎರಡು ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾವ್‌ ಬಿರಾದಾರ ಮಾತನಾಡಿ, ‘ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಟಿಕೆಟ್ ನೀಡಲೇಬೇಕು. ಇಲ್ಲದಿದ್ದರೆ ಬಿಜೆಪಿ ತಾಲ್ಲೂಕು ಘಟಕದ ಎಲ್ಲ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟರಾವ್‌ ಬಿರಾದಾರ, ಪ್ರಮುಖರಾದ ರಾಚಪ್ಪ ಪಾಟೀಲ, ಯಾದವರಾವ್‌ ಕನಸೆ, ಕಿರಣ ಖಂಡ್ರೆ, ಓಂಪ್ರಕಾಶ ರೊಟ್ಟೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.