ADVERTISEMENT

ಕಾನೂನು ಜೀವನದ ಅವಿಭಾಜ್ಯ ಅಂಗ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:51 IST
Last Updated 13 ನವೆಂಬರ್ 2017, 5:51 IST

ಚಿಟಗುಪ್ಪ: ‘ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕಾಗಿರುವುದರಿಂದ ಕಾನೂನು ಜೀವನದ ಅವಿಭಾಜ್ಯ ಅಂಗ’ಎಂದು ಹುಮನಾಬಾದ್ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ.ಎಂ.ಕಮತೆ ನುಡಿದರು. ಇಲ್ಲಿಯ ಪುರಸಭೆ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹುಮನಾಬಾದ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದವರು, ಮಾನಸಿಕ ಹಾಗೂ ಯಾವುದೇ ನ್ಯೂನತೆಗೆ ಒಳಪಟ್ಟವರು, ಮಹಿಳೆ ಮತ್ತು ಮಕ್ಕಳು ಹಾಗೂ ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂ ಕಂಪನ, ಕೈಗಾರಿಕ ವಿನಾಶ, ದೈಹಿಕ ವ್ಯಾಪಾರ ಅಥವಾ ಜೀತಕ್ಕೆ ಒಳಗಾದವರು, ಮನೋರೋಗಿಗಳು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು ಹಾಗೂ ₹ 1.25 ಲಕ್ಷ ಕ್ಕಿಂತ ಕಡಿಮೆ ವಾರ್ಷಿಕ ವರಮಾನ ಇರುವವರು ಉಚಿತ ಕಾನೂನು ನೆರವು ಪಡೆಯಲು ಅರ್ಹರು’ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಆಶಪ್ಪಾ ಬಿ. ಸಣ್ಣಮನಿ, ಜನನ ಮತ್ತು ಮರಣ ಪತ್ರದ ಮಹತ್ವದ ಬಗ್ಗೆ ಮಾತನಾಡಿದರು. ವಕೀಲರಾದ ಎಸ್.ಬಿ.ಮುನಸಿ, ಮಹ್ಮದ್ ಇತ್ಯಾಶಾಮ್ ನೋಂದಾಯಿತ ವಿವಾಹ ಮತ್ತು ವಿವಾಹ ನೋಂದಣಿ ಮತ್ತು ವರದಕ್ಷಿಣೆ ನಿಷೇಧ ಅಧಿನಿಯಮ 1961 ಕಾಯ್ದೆ ಕುರಿತು ಮಾಹಿತಿನೀಡಿದರು.

ADVERTISEMENT

ಪುರಸಭೆ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಮಹ್ಮದ್ ಲೈಕ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಸುಭಾಷ ಕುಂಬಾರ್, ಕರಬಸಪ್ಪ ಗಡಮಿ, ಮುಖ್ಯಾಧಿಕಾರಿ ಹುಸಾಮೋದ್ದೀನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಅಲಿ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ್ ಕುದರಿ, ವಕೀಲ ಭೀಮರಾವ್ ಜಿ.ಓತಗಿಕರ್, ಕೆ.ಶ್ರೀಮಂತ್, ಅಶೋಕ ಸಜ್ಜನ್, ದತ್ತಾರೆಡ್ಡಿ, ಸಂತೋಷ ಸ್ವಾಮಿ, ಕಲ್ಯಾಣರಾವ್ ಪರಶೆಟ್ಟಿ ಇದ್ದರು. ಅಶೋಕ ಚನ್ನಕೋಟೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.