ADVERTISEMENT

‘ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿಸಿ’

ಏ.17ರಿಂದ ಮೇ 9ರವರೆಗೆ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:36 IST
Last Updated 18 ಏಪ್ರಿಲ್ 2017, 4:36 IST
ಹುಮನಾಬಾದ್: ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಮಾರಣಾಂತಿಕ ಕಾಲುಬಾಯಿ ರೋಗ ನಿಯಂತ್ರಿಸಲು ಪಶು ಪಾಲಕರು ಸಹಕರಿಸಬೇಕು ಎಂದು  ಕಲಬುರ್ಗಿ ಕೆಎಂಎಫ್‌  ಅಧ್ಯಕ್ಷ ರೇವಣಸಿದ್ದಪ್ಪ ವಿ.ಪಾಟೀಲ ಸಲಹೆ ನೀಡಿದರು. 
 
ತಾಲ್ಲೂಕಿನ ಮಾಣಿಕನಗರ ಗ್ರಾಮ ಪಂಚಾಯಿತಿ ಕಚೇರಿ ಪ್ರಾಂಗಣದಲ್ಲಿ ಪಶುವೈದ್ಯಕೀಯ ಹಾಗೂ ಕೆಎಂಎಫ್‌ ಸೋಮವಾರ ಆಯೋಜಿಸಿದ್ದ ಕಾಲುಬಾಯಿ ರೋಗ ನಿಯಂತ್ರಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
 
ಎರಡು ವರ್ಷಗಳ ಹಿಂದೆ ಪಶುಪಾಲಕರ ನಿರ್ಲಕ್ಷ್ಯದಿಂದ ರೋಗಕ್ಕೆ ಬಲಿಯಾಗಿ ರಾಜ್ಯದಲ್ಲಿ 15ಸಾವಿರಕ್ಕೂ ಅಧಿಕ ಜಾನುವಾರು ಮೃತಪಟ್ಟಿದ್ದವು. ಕಳೆದ ವರ್ಷ ಎರಡೂ ಇಲಾಖೆಗಳ ಜಂಟಿ ಅಭಿಯಾನದ ಪರಿಣಾಮ ರೋಗ ಕೊಂಚ ಹತೋಟಿಗೆ ಬಂದಿದೆ.

ಅತಿಯಾದ ಜ್ವರ, ಬಾಯಿಯಲ್ಲಿ ನೀರ್ಗುಳ್ಳೆ, ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು ರೋಗ ಲಕ್ಷಣಗಳು. ಕಾಲುಬಾಯಿ ರೋಗಗ್ರಸ್ಥ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು ಸೇವಿಸುವದರಿಂದ ಮತ್ತು ಗಾಳಿ ಮುಖಾಂತರ ದನಗಳ ಸಂತೆ ಮತ್ತು ಜಾತ್ರೆಗಳಲ್ಲಿ ಈ ರೋಗ ತಗಲುವ ಸಾಧ್ಯತೆಗಳು ಹೆಚ್ಚಿಗೆ ಇರುತ್ತದೆ ಎಂದರು. 
 
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗೋವಿಂದ ಮಾತನಾಡಿ, ರೋಗದಿಂದ ನರಳುವ ಜಾನುವಾರುಗಳಿಗೆ ಕಾಲು ಮತ್ತು ಬಾಯಿಯಲ್ಲಿನ ಹುಣ್ಣನ್ನು ಶೇ 0.5ರಷ್ಟು ಅಡುಗೆ ಸೋಡ ದ್ರಾವಣದಿಂದ ಶುದ್ಧಗೊಳಿಸಬೇಕು. ಮೃದು ಅಹಾರ ಗಂಜಿ, ಬಾಳೆ ಹಣ್ಣು, ರಾಗಿ ಅಂಬಲಿ ತಿನಿಸಬೇಕು. ಆಂಟಿಬಯೋಟಿಕ್‌ ಮತ್ತು ವಿಟಮಿನ್‌ ಚುಚ್ಚುಮದ್ದು ಕಡ್ಡಾಯವಾಗಿ ಕೊಡಿಸಬೇಕು.
 
ಹಾಗೂ ರೋಗ ಲಕ್ಷಣ ಕಂಡ ತಕ್ಷಣ ರೋಗಗ್ರಸ್ಥ ಪ್ರಾಣಿಗಳನ್ನು ತಕ್ಷಣ ಬೇರ್ಪಡಿಸಬೇಕು. ಕೊಟ್ಟಿಗೆ ಸ್ವಚ್ಛಗೊಳಿಸಿ, ಕ್ರಿಮಿನಾಶಕ ಸಿಂಪಡಿಸಬೇಕು ಹಾಗೂ ರೋಗಗ್ರಸ್ಥ ಪ್ರಾಣಿಗಳ ಮಾರಾಟ ನಿಲ್ಲಿಸುವ ಮೂಲಕ ರೋಗ ಹರುಡುವಿಕೆ ನಿಯಂತ್ರಿಸಲು ಸಾಧ್ಯ. ವರ್ಷಕ್ಕೆ ಎರಡುಬಾರಿ  ಕಡ್ಡಾಯ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು. 
 
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ,  ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಡಾ.ಸೋಮಶೇಖರ, ಡಾ.ಶಾಂತಕುಮಾರ, ಡಾ.ಪ್ರಥ್ವಿರಾಜ, ಖಾಲೀದ್‌ ಅಪ್ಸರ್, ಶರಣಪ್ಪ ಕಾಡಾದಿ, ಉಮೇಶ ಸೋನಾತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.