ADVERTISEMENT

‘ಕೃತಿ ರೂಪದಲ್ಲಿ ಕನ್ನಡ ಪ್ರೀತಿ ತೋರಿಸಿ’

ಬೀದರ್ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಸಾಧನಾ ರಂಜೋಳಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 6:06 IST
Last Updated 7 ಮಾರ್ಚ್ 2017, 6:06 IST
ಜನವಾಡ: ಕನ್ನಡ ಭಾಷೆ ಪ್ರೀತಿ ಬಾಯಿಮಾತಿಗೆ ಸೀಮಿತ ಆಗಬಾರದು. ಅದನ್ನು ಕೃತಿ ರೂಪದಲ್ಲಿ ತೋರಿಸಬೇಕು ಎಂದು ಬೀದರ್ ತಾಲ್ಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸಾಧನಾ ರಂಜೋಳಕರ್ ಹೇಳಿದರು.
 
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಬೀದರ್ ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಒಲವು ತೋರುತ್ತಿರುವುದಕ್ಕೆ ಸರ್ಕಾರಿ ಶಾಲೆಗಳ ದುಃಸ್ಥಿತಿ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು. 
 
ಶಿಥಿಲ ಕಟ್ಟಡ, ಸ್ವಚ್ಛತೆ ಕಾಣದ ಕೋಣೆಗಳು, ಅಶಿಸ್ತು, ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳು ಕಳೆಗುಂದಿವೆ. ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಣೆ ಆಗುವವರೆಗೂ ಕನ್ನಡ ಅರಳುವುದು ಕಷ್ಟಸಾಧ್ಯ ಎಂದು ನುಡಿದರು.
 
ಕನ್ನಡಿಗರಾದ ನಾವೇ ಕನ್ನಡವನ್ನು ಅಲಕ್ಷ್ಯ ಮಾಡಿದರೆ ಬೇರೆಯವರು ಅದನ್ನು ಅನುಕರಿಸುತ್ತಾರೆ. ಕನ್ನಡದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತವೆ. ಸಮಸ್ಯೆಗಳ ಗಾತ್ರ ಬೆಳೆಯುತ್ತ ಹೋಗುತ್ತದೆ. ಖ್ಯಾತ ವಿಜ್ಞಾನಿ ಡಾ. ಸಿ.ವಿ. ರಾಮನ್ ಓದಿದ್ದು ಕನ್ನಡ ಮಾಧ್ಯಮದಲ್ಲೇ. ಹೀಗಾಗಿ ಕನ್ನಡ ಭಾಷೆ ಬಗ್ಗೆ  ಅಭಿಮಾನ ಅಗತ್ಯ ಎಂದು ತಿಳಿಸಿದರು. 
 
ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಪ್ರಧಾನ ಆಗಿರಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ರಾಜ್ಯದ ಅಭ್ಯರ್ಥಿಗಳಿಗೂ ಸಮಾನ ಪಾಲು ದೊರಕಬೇಕು. ಹೊರನಾಡ ಕನ್ನಡಿಗರಿಗೂ ಎಲ್ಲ ಸೌಕರ್ಯಗಳು ಲಭಿಸಬೇಕು ಎಂದು ಹೇಳಿದರು. 
 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಬೀದರ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅಶೋಕ್ ಖೇಣಿ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಮುಖಂಡ ಚಂದ್ರಸಿಂಗ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಫ್ರೋಜ್‌ಖಾನ್‌, ಶಕುಂತಲಾ ಬೆಲ್ದಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಆರ್.ಬರೂರು, ಸಮ್ಮೇಳನ ನಿಕಟ ಪೂರ್ವ ಅಧ್ಯಕ್ಷ ರಮೇಶ ಬಿರಾದಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ಮಡಕಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಚಂದ್ರಕಾಂತ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರು, ಖಜಾಂಚಿ ಟಿ.ಎಂ. ಮಚ್ಚೆ, ದೀಪಕ ಮನ್ನಳ್ಳಿ, ಶರಣಪ್ಪ ಮಿಠಾರೆ, ಚಂದ್ರಕಾಂತ ವಗದಾಳೆ ಇದ್ದರು.  ರಾಜಕುಮಾರ ಪಸಾರೆ ಸ್ವಾಗತಿಸಿದರು.  ಬಸವರಾಜ ಬಶೆಟ್ಟಿ ನಿರೂಪಿಸಿದರು. ಬಾಪು ಮಡಕಿ ವಂದಿಸಿದರು.   
 
ಸರ್ವಾಧ್ಯಕ್ಷೆ ಮೆರವಣಿಗೆ
ಜನವಾಡ: ಬೀದರ್ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸಾಧನಾ ರಂಜೋಳಕರ್ ಅವರನ್ನು ಸಾರೋಟಿನಲ್ಲಿ ಸೋಮವಾರ ಮೆರವಣಿಗೆ ಮಾಡಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯೂ ನಡೆಯಿತು.

ಬಿರು ಬಿಸಿಲಿನ ನಡುವೆಯೂ ಕನ್ನಡಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬರೂರದ ಕಲಾವಿದರು ಚಿಟಿಕೆ ಭಜನೆ ಹಾಗೂ ತಾಳಮಡಗಿಯ ಬೀರಲಿಂಗೇಶ್ವರ ಡೊಳ್ಳು ಸಂಘದ ಕಲಾವಿದರು ಡೊಳ್ಳು ಕುಣಿತ ಪ್ರದರ್ಶಿಸಿದರು. ಗ್ರಾಮದ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಆರಂಭಗೊಂಡ ಮೆರವಣಿಗೆ ಸಮ್ಮೇಳನದ ಮಹಾಮಂಟಪ ತಲುಪಿತು.
 
* ಒಗ್ಗಟ್ಟಿನಲ್ಲಿ ಬಲವಿದೆ. ಕಾರಣ ಕನ್ನಡದ ಏಳ್ಗೆಗಾಗಿ ಎಲ್ಲರೂ ಪಕ್ಷ ಭೇದ ಮರೆತು ಹೋರಾಟ ನಡೆಸಬೇಕು. ಕನ್ನಡದ ಸೇವೆಗೆ ಸದಾ ಕಂಕಣಬದ್ಧರಾಗಿರಬೇಕು.
ಸಾಧನಾ ರಂಜೋಳಕರ್, ಸಮ್ಮೇಳನ ಸರ್ವಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.