ADVERTISEMENT

ಕೃಷಿ ವಲಯಕ್ಕೆ ವಾರ್ಷಿಕ 757 ಕೋಟಿ ಸಾಲ ಯೋಜನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 8:25 IST
Last Updated 13 ಏಪ್ರಿಲ್ 2011, 8:25 IST

ಬೀದರ್: ಪ್ರಸ್ತುತ ಹಣಕಾಸು ವರ್ಷದಲ್ಲಿ ಬೀದರ್ ಜಿಲ್ಲೆಯ ಕೃಷಿ ವಲಯಕ್ಕೆ 757ಕೋಟಿ ರೂ. ಸೇರಿದಂತೆ ಒಟ್ಟು 1059.38 ಕೋಟಿ ರೂ. ಸಾಲ ಗುರಿ ನಿಗದಿಪಡಿಸಲಾಗಿದೆ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಜಿಲ್ಲಾ ವಾರ್ಷಿಕ ಸಾಲ ಯೋಜನೆ- 2011-12 ಬಿಡುಗಡೆ ಮಾಡಿದರು.

ವಾರ್ಷಿಕ  ಸಾಲ ಯೋಜನೆಯಲ್ಲಿ ಕೃಷಿ ವಲಯಕ್ಕೆ 757 ಕೋಟಿ ರೂ, ಕೃಷಿಯೇತರ ವಲಯಕ್ಕೆ 59.86 ಕೋಟಿ ರೂ ಮತ್ತು ಇತರ ಆದ್ಯತಾ ವಲಯಗಳಿಗೆ 214 ಕೋಟಿ ರೂ. ನಿಗದಿಪಡಿಸಲಾಗಿದೆ. ಆದ್ಯತಾ ವಲಯಕ್ಕೆ ಕಳೆದ ವರ್ಷಕ್ಕಿಂತ ಶೇ.14.43ರಷ್ಟು ಹೆಚ್ಚು ಮೊತ್ತವನ್ನು ನಿಗದಿಪಡಿಸಲಾಗಿದೆ.

ಕೃಷಿ ವಲಯಕ್ಕೆ ಕಳೆದ ವರ್ಷ 687ಕೋಟಿ ರೂ. ನಿಗದಿಪಡಿಸಲಾಗಿತ್ತು. ಕೃಷಿ ವಲಯದಲ್ಲಿ 549ಕೋಟಿ ಅಂದರೆ ಶೇ.72ರಷ್ಟು ಬೆಳೆ ಸಾಲಕ್ಕೆ ಮೀಸಲಿರಿಸಲಾಗಿದೆ. ಕೃಷಿ ವಲಯದ ಇನ್ನಿತರ ವಿಭಾಗದಲ್ಲಿ ಬಂಡವಾಳ ಹೂಡಿಕೆಗೆ 207ಕೋಟಿ ರೂ. ಸಾಲ ನಿಗದಿ ಮಾಡಲಾಗಿದೆ. ಇನ್ನುಳಿದಂತೆ ಸಣ್ಣ ನೀರಾವರಿಗೆ 48.30ಕೋಟಿ ರೂ, ಕೃಷಿ ಯಾಂತ್ರೀಕರಣಕ್ಕೆ 44.93ಕೋಟಿ ರೂ, ತೋಟಗಾರಿಕೆಗೆ ರೂ. 39.78ಕೋಟಿ ರೂ, ಹೈನುಗಾರಿಕೆಗೆ 30ಕೋಟಿ ರೂ ಮೀಸಲಿರಿಸಲಾಗಿದೆ.

ಗ್ರಾಮೀಣ  ಮತ್ತು ಗುಡಿ ಕೈಗಾರಿಕೆ, ಕರಕುಶಲ ಕೈಗಾರಿಕೆ ಸೇರಿದಂತೆ ಸಣ್ಣಮಟ್ಟದ ಉತ್ಪಾದನಾ ವಲಯಕ್ಕೆ 59.85 ಕೋಟಿ ರೂ. ಸಾಲ ನಿಗದಿಪಡಿಸಲಾಗಿದೆ. ಇತರ  ಆದ್ಯತಾ ವಲಯಗಳಾದ ಸ್ವಯಂ ಉದ್ಯೋಗಕ್ಕಾಗಿ, ಚಿಲ್ಲರೆ ಮಾರಾಟಗಾರರಿಗೆ, ವೃತ್ತಿಪರರಿಗೆ, ಗೃಹ  ಸಾಲ, ಶೈಕ್ಷಣಿಕ ಸಾಲಕ್ಕಾಗಿ 214ಕೋಟಿ ರೂ. ಗುರಿ ನಿಗದಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ ವಸತಿ ನಿರ್ಮಾಣ ಇತ್ಯಾದಿ ಕಾರ್ಯಗಳಿಗೆ 28ಕೋಟಿ ರೂ, ವಿವಿಧ ಸರ್ಕಾರಿ ಯೋಜನೆಗಳಿಗಾಗಿ 50ಕೋಟಿ ರೂ. ಮೀಸಲಿರಿಸಲಾಗಿದೆ.

ಆದ್ಯತಾ ವಲಯದಲ್ಲಿ  ಸಾಲ ನೀಡಿಕೆಗೆ ಡಿಸಿಸಿ ಬ್ಯಾಂಕ್ 494ಕೋಟಿ ರೂ, (ಶೇ.47.90), ವಾಣಿಜ್ಯ ಬ್ಯಾಂಕುಗಳಿಗೆ 414.52 (ಶೇ.40) ಹಾಗೂ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗೆ 113.55 (ಶೇ.11) ಗುರಿ ನಿಗದಿ ಮಾಡಲಾಗಿದೆ. ಆದ್ಯತಾ ವಲಯದ ಒಟ್ಟು ಸಾಲದ ಮೊತ್ತದಲ್ಲಿ ಔರಾದ್ ತಾಲೂಕಿಗೆ ಶೇ.15.95, ಬಸವಕಲ್ಯಾಣ ತಾಲ್ಲೂಕಿಗೆ ಶೇ.19.70, ಭಾಲ್ಕಿ ತಾಲೂಕಿಗೆ ಶೇ.17.02, ಬೀದರ ಶೇ.29.06 ವುತ್ತು ಹುಮ್ನಾಬಾದ್ ತಾಲ್ಲೂಕಿಗೆ ಶೇ.18.27 ಮೀಸಲಿರಿಸಲಾಗಿದೆ.

ವಾರ್ಷಿಕ ಸಾಲ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಸಾಲ ಯೋಜನೆ ನೆರವು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿತೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ನಬಾರ್ಡ್ ಬೀದರ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸತೀಶ್ ಬಿ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ, ಶಾಸಕ ರಹೀಂಖಾನ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಎಸ್‌ಬಿಐ ಪ್ರಾದೇಶಿಕ  ವ್ಯವಸ್ಥಾಪಕ ಪಿ.ಪಿ.ಬಿ. ಮುನಿ ಸುಬ್ಬಾರೆಡ್ಡಿ ಸ್ವಾಗತಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಸೂರ್ಯಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.