ADVERTISEMENT

ಕೋಟಿ ಸಸಿ ನೆಡುವ ಸಂಕಲ್ಪ ಮಾಡಿದ್ದ ತಿವಾರಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 9:15 IST
Last Updated 18 ಮೇ 2017, 9:15 IST

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಾದ್ಯಂತ 18 ಲಕ್ಷ ಸಸಿಗಳನ್ನು ನೆಡುವ ಹೇಳಿಕೆ ನೀಡಿದ ಕೆಲ ದಿನಗಳಲ್ಲೇ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೀದರ್ ಜಿಲ್ಲೆಯಲ್ಲಿ ಒಂದು ಕೋಟಿ ಸಸಿ ನೆಡುವ ಘೋಷಣೆ ಮಾಡಿದ್ದರು. ಜಿಲ್ಲೆಯಿಂದ ವರ್ಗವಾಗಿ ಹೋಗುವ ವೇಳೆಗೆ 40 ಲಕ್ಷ ಸಸಿಗಳನ್ನು ನೆಡಸಿದ್ದರು.

ಬೀದರ್‌ ಜಿಲ್ಲೆಯೊಂದರಲ್ಲೇ ಒಂದು ಕೋಟಿ ಸಸಿಗಳನ್ನು  ನೆಡಲು ಸಾಧ್ಯವೇ ಎಂದು ಅಧಿ ಕಾರಿಗಳೂ ಪ್ರಶ್ನಿಸಿದ್ದರು. ಅನುರಾಗ ತಿವಾರಿ ಒಂದಿಷ್ಟೂ ಒತ್ತಡಕ್ಕೆ ಒಳಗಾಗದೇ ಒಂದು ವರ್ಷ ಕಾಯ್ದು ನೋಡಿ ಯೋಜನೆ ಪೂರ್ಣಗೊಳಿಸಿ ತೋರಿಸುತ್ತೇನೆ ಎಂದು ಉತ್ತರಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಮೂಲಕ ಸಸಿಗಳನ್ನು ನೆಡಸಿದರು. ಸರ್ಕಾರಿ ಇಲಾಖೆಗಳ ಕಚೇರಿ ಆವರಣದಲ್ಲೂ ಸಸಿ ನೆಟ್ಟು ಪೋಷಣೆ ಮಾಡುವಂತೆ ಕಟ್ಟಪ್ಪಣೆ ಮಾಡಿದ್ದರು.

ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸಿಗಳ ಕೊರತೆ ಇರುವುದು ಗೊತ್ತಾದ ತಕ್ಷಣ ಬೇರೆ ಜಿಲ್ಲೆಗಳಿಂದ ಸಸಿ ತರಲು ವ್ಯವಸ್ಥೆ ಮಾಡಿದರು. ಸಾಲದ್ದಕ್ಕೆ ನೆರೆಯ ತೆಲಂಗಾಣದ ನರ್ಸರಿಗಳಿಂದಲೂ ಸಸಿಗಳನ್ನು ತರಿಸಿಕೊಂಡರು. ಒಟ್ಟು 40 ಲಕ್ಷ ಸಸಿಗಳನ್ನು ನೆಡಸುವಲ್ಲಿ ಯಶ ಸಾಧಿಸಿದರು. ಸರ್ಕಾರ, 2016ರ ಡಿಸೆಂಬರ್ 22ರಂದು ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿತು. ಹೀಗಾಗಿ ಒಂದು ಕೋಟಿ ಸಸಿ ನೆಡುವ ಅವರ ಕನಸು ನನಸಾಗಲಿಲ್ಲ. ಅದರೆ ಗುರುನಗರದಲ್ಲಿ ನೆಟ್ಟಿರುವ ಸಸಿಯನ್ನು ‘ತಿವಾರಿಯ ಮರ’ ಎಂದೇ ಕರೆಯುತ್ತಿದ್ದಾರೆ.

ADVERTISEMENT

ಭೂಕಾಲುವೆ ಹೂಳೆತ್ತುವ ಕಾಮಗಾರಿ: ಬೀದರ್ ನಗರದಲ್ಲಿರುವ ಐತಿಹಾಸಿಕ ಭೂಕಾಲುವೆಯಲ್ಲಿನ ಹೂಳು ತೆಗೆಸಿದರು. ಇದರಿಂದ 500 ವರ್ಷಗಳ ಹಿಂದಿನ ಪುರಾತನ ಬಾವಿಗಳಲ್ಲೂ ನೀರು ಹರಿದು ಬರಲು ಆರಂಭಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಕಾಮಗಾರಿ ವೀಕ್ಷಣೆಗೆ ಬೀದರ್‌ಗೆ ಬಂದಿದ್ದ ಸಂದರ್ಭದಲ್ಲಿ ಚಿದ್ರಿಯಲ್ಲಿನ ಪುರಾತನ ಬಾವಿಯಲ್ಲಿ ನೀರು ಬಂದಿರುವುದನ್ನು ಕಂಡು ಜಿಲ್ಲಾಧಿಕಾರಿಯ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಔರಾದ್‌ನಲ್ಲಿರುವ ಪುರಾತನ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಬೆಂಗಳೂರಿಗೆ ಹೋದ ನಂತರ ಬೀದರ್‌ ಜಿಲ್ಲೆಯ ಕಾಮಗಾರಿಯನ್ನು ಮಾದರಿಯಾಗಿ ಇಟ್ಟುಕೊಂಡು ‘ಕೆರೆ ಸಂಜೀವಿನಿ’ ಯೋಜನೆ ಜಾರಿ ಮಾಡಿದ್ದರು. ಐಎಎಸ್‌  ಅಧಿಕಾರಿಗಳ ವಲಯದಲ್ಲೂ ಅನುರಾಗ ತಿವಾರಿ ಕಾರ್ಯದ ಬಗೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಬೆಳೆ ವಿಮೆ: ಸತತ ಮೂರು ವರ್ಷಗಳಿಂದ ಬರದಿಂದಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಕಂಡು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು. ಕೃಷಿ ಇಲಾಖೆಯ ಅಧಿಕಾರಿ ಗಳನ್ನು ಕರೆಸಿ ಬೆಳೆ ವಿಮೆ ಮಾಡಿಸಿದ ರೈತರ ಅಂಕಿಸಂಖ್ಯೆಗಳ ಮಾಹಿತಿ ಪಡೆಯುತ್ತಿದ್ದರು. ಹೆಚ್ಚು ಹೆಚ್ಚು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಡ ಹಾಕಿದ್ದರು.

ಅನುರಾಗ ತಿವಾರಿ ಒತ್ತಡದಿಂದ ಕೃಷಿ ಅಧಿಕಾರಿಗಳು ಜಿಲ್ಲೆಯ ಬಹುತೇಕ ರೈತರ ಬೆಳೆ ವಿಮೆ ಮಾಡಿಸಿದ್ದರು. ದೇಶದಲ್ಲಿಯೇ ಮೊದಲ ಹಂತದಲ್ಲಿಯೇ ಬೀದರ್‌ ಜಿಲ್ಲೆಗೆ ವಿಮೆ ಪರಿಹಾರ ಬಿಡುಗಡೆ ಆಗುವಂತೆ ಮಾಡಿದ್ದರು ಎಂದು ಹೇಳುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್‌.

ಕಾಗದ ರಹಿತ ಕಚೇರಿ: ಜಿಲ್ಲೆಯ ಕಂದಾಯ ಇಲಾಖೆ ಕಚೇರಿ ಸೇರಿ ಒಟ್ಟು 95 ಕಚೇರಿಗಳನ್ನು ಗಣಕೀಕರಣ ಮಾಡಿ ಕಾಗದ ರಹಿತ ಕಚೇರಿಗಳನ್ನಾಗಿ ರೂಪಿಸಿದರು. ಬಿದರಿ ಕಲೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಬಿದರಿ ಕಲೆಯ ನೈಜ ಕಲಾಕೃತಿಯನ್ನು ಅಳವಡಿಸಲು ಯೋಜನೆ ರೂಪಿಸಿದ್ದರು. ಪ್ರಸ್ತುತ ನಗರದಲ್ಲಿ ಕಾಮಗಾರಿಗಳೂ ನಡೆಯುತ್ತಿವೆ.

ಪ್ರವಾಸೋದ್ಯಮ ಯೋಜನೆಯಡಿ ನಗರದ 22 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿದರು. ನಗರದಲ್ಲಿ ಐದು ಕಡೆ ಸಮುದಾಯ ಶೌಚಾಲಯ ನಿರ್ಮಿಸಿದರು. ಕೊಳಚೆ ನಿರ್ಮೂಲನೆ ಮಂಡಳಿ ಹಾಗೂ ಗೃಹ ನಿರ್ಮಾಣ ಮಂಡಳಿ ಸಹಯೋಗದೊಂದಿಗೆ ವಸತಿ ಸಮುಚ್ಛಯ ನಿರ್ಮಿಸಿ ಕೊಳೆಗೇರಿ ನಿವಾಸಿಗಳಿಗೆ ಸೂರು ಒದಗಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

**

ಪರೋಪಕಾರಿ
ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ 2016ರ ಸೆಪ್ಟೆಂಬರ್ 27ರಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ವಾರ್ತಾ ಇಲಾಖೆಯ ವಾಹನ ಹಿರಿಯ ಪತ್ರಕರ್ತರಿಬ್ಬರನ್ನು ಸ್ಥಳದಲ್ಲೇ ಬಿಟ್ಟು ಹೋದಾಗ ಅನುರಾಗ ತಿವಾರಿ ಅವರು ತಮ್ಮ ವಾಹನದಲ್ಲಿ ಪತ್ರಕರ್ತರನ್ನು ಕಳಿಸಿಕೊಟ್ಟಿದ್ದರು.

ಭಾಲ್ಕಿ ಪಟ್ಟಣದಿಂದ 25 ಕಿ.ಮೀ ದೂರದ ಹೊಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಎಲ್ಲರೂ ಹೊರಟು ಹೋದರು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪೊಲೀಸ್‌ ವಾಹನ ಮಾತ್ರ ಇತ್ತು. ಸುದ್ದಿ ಬರೆಯಲು ತ್ವರಿತವಾಗಿ ಬೀದರ್‌ಗೆ ಹೋಗಲು ಸಾಧ್ಯವಾಗದೇ ಪರಿತಪಿಸುತ್ತಿದ್ದ ಪತ್ರಕರ್ತರನ್ನು ವಿಚಾರಿಸಿ, ತಕ್ಷಣ ತಮ್ಮ ವಾಹನದ ಮೇಲಿನ ಕೆಂಪು ದೀಪ ತೆಗೆಸಿ ಅದರಲ್ಲಿ ಕುಳಿಸಿ ಕಳಿಸಿಕೊಟ್ಟಿದ್ದರು. ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ವಾಹನದಲ್ಲಿ ಬೀದರ್‌ಗೆ ಬಂದಿದ್ದರು.

**

‘ಕೆರೆ ಸಂಜೀವಿನಿ’ಗೆ ಪ್ರೇರಣೆ!

-ಚಂದ್ರಕಾಂತ ಮಸಾನಿ
ಬೀದರ್‌
: 18 ತಿಂಗಳು ಬೀದರ್‌ ಜಿಲ್ಲಾಧಿಕಾರಿ ಯಾಗಿದ್ದ ಅನುರಾಗ ತಿವಾರಿ ಅವರು ಜಲಮೂಲಗಳನ್ನು ಪುನಃಶ್ಚೇತನ ಗೊಳಿಸಲು ಹಾಗೂ ಕೆರೆಗಳಲ್ಲಿ ನೀರಿನಮಟ್ಟ ಹೆಚ್ಚಿಸಲು ಕೈಗೆತ್ತಿಕೊಂಡ ಕಾಮಗಾರಿ ಇದೀಗ ‘ಕೆರೆ ಸಂಜೀವಿನಿ’ ಯೋಜನೆ ಹೆಸರಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.

2015ರ ಜೂನ್‌ನಲ್ಲಿ ಇವರು ಬಂದಾಗ ಜಿಲ್ಲೆಯ ಜನ ಬರಕ್ಕೆ ನಲುಗಿದ್ದರು. ನದಿ, ಕೆರೆ, ಕಟ್ಟೆಗಳು ಬತ್ತಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿತ್ತು. ಕಾರಂಜಾ ಜಲಾಶಯ ಬರಿದಾ ಗಿತ್ತು. ನಗರ ಪ್ರದೇಶಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತಿತ್ತು.  ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿಗಳು ಹಾಗೂ ಗ್ರಾಮ ಪಂಚಾಯಿತಿಗಳ ಎದುರು ಜನ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದರು.

ಕುಡಿಯವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸವಾಲಾಗಿತ್ತು. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿ ಆರಂಭಿಸಿ ಕಾಲಮಿತಿ ಯಲ್ಲಿ ಪೂರ್ಣಗೊಳಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಅನುರಾಗ ತಿವಾರಿ ಅವರು ಭವಿಷ್ಯದಲ್ಲಿ ಜನರಿಗೆ ನೀರಿನ ಸಮಸ್ಯೆ ಎದುರಾಗದಂತೆ ಯೋಜನೆ ರೂಪಿಸಿದರು. ಜಿಲ್ಲಾ ಆಡಳಿತದ ಮೂಲಕವೇ ಕಡಿಮೆ ಖರ್ಚಿ ನಲ್ಲಿ ಜಿಲ್ಲೆಯ ಕೆರೆಗಳ ಹೂಳೆತ್ತುವ ಯೋಜನೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿ ಸರ್ಕಾರದಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು.

ಟೆಂಡರ್‌ ಕರೆದು ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸಿದರೆ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಭ್ರಷ್ಟರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಎನ್ನುವುದನ್ನು ಅರಿತು ಸಾರ್ವಜನಿಕರ ಸಹಭಾಗಿತ್ವದಲ್ಲಿ ನೇರವಾಗಿ ಜಿಲ್ಲಾ ಆಡಳಿತದ ಮೂಲಕ ಕೆರೆಗಳ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದರು.ಆರಂಭದಲ್ಲಿ ಎರಡು ಕೆರೆಗಳ ಹೂಳು ತೆಗೆದಾಗ ರೈತರು ಫಲವತ್ತಾದ ಮಣ್ಣನ್ನು ಹೊಲಗಳಿಗೆ ಸಾಗಿಸಿ ಜಿಲ್ಲಾ ಆಡಳಿತಕ್ಕೆ ಬೆಂಬಲ ನೀಡಿದರು. ಇದರಿಂದ ಪ್ರೇರಣೆಗೊಂಡು ಜಿಲ್ಲೆಯ ಎಲ್ಲ ಹಿಟಾಚಿ ಹಾಗೂ ಜೆಸಿಬಿಗಳನ್ನು ವಶಕ್ಕೆ ತೆಗೆದುಕೊಂಡು ಜಿಲ್ಲಾ ಆಡಳಿತದ ಮೂಲಕವೇ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡರು.

ಜೆಸಿಬಿಗಳಿಗೆ ನಿತ್ಯ ಡೀಸೆಲ್‌ ಹಾಕಿಸಿದರು. ಚಾಲಕರಿಗೆ ಭತ್ಯೆ ಸಹಿತ ವೇತನ ನೀಡಿದರು. ರೈತರು ಸ್ವಯಂ ಪ್ರೇರಣೆಯಿಂದ ಟ್ರ್ಯಾಕ್ಟರ್‌ ಗಳಲ್ಲಿ ಮಣ್ಣು ಸಾಗಿಸಿದರು. ಕಾಮಗಾರಿಯ ವೀಕ್ಷಣೆಗೆ ಸರ್ಕಾರೇತರ ಸಂಘಟನೆ ‘ಟೀಮ್‌ ಯುವಾ’  ಅನ್ನು  ಬಳಸಿಕೊಂಡರು. ಈ ತಂಡ ಪ್ರತಿದಿನ ತಿವಾರಿ ಅವರಿಗೆ ವರದಿ ನೀಡುತ್ತಿದ್ದ ರಿಂದ ಕೇವಲ ₹ 50 ಲಕ್ಷ ವೆಚ್ಚದಲ್ಲಿ 130 ಕೆರೆಗಳ ಹೂಳು ತೆಗೆಯಲು ಸಾಧ್ಯವಾಯಿತು.

‘ತಿವಾರಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಬೀದರ್‌ ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿರುವ 132 ತೆರೆದಬಾವಿ ಹಾಗೂ 15 ಕಲ್ಯಾಣಿಗಳಲ್ಲಿನ ಹೂಳು ತೆಗೆಸಿದರು. ಬೀದರ್‌ ನಗರದಲ್ಲಿರುವ 500 ವರ್ಷಗಳ ಹಿಂದಿನ ಬಾವಿಗಳಲ್ಲಿನ ಝರಿಗಳು ಪುನಃ ಶ್ಚೇತನಗೊಂಡು ಹರಿಯಲಾರಂಭಿಸಿದವು’ ಎಂದು ಪ್ರವಾಸೋದ್ಯೋಮ ಇಲಾಖೆಯ ಸಹಾಯಕ ನಿರ್ದೇಶಕ ಕಿಶೋರ ಜೋಶಿ ನೆನಪಿಸಿಕೊಳ್ಳುತ್ತಾರೆ.

ಮಳೆಗಾಲ ಶುರುವಾದ ಮೇಲೆ ಎಲ್ಲ ಕೆರೆಗಳು ತುಂಬಿದವು. ‘ಬೀದರ್‌ ಮಾದರಿ’ ಕಾಮಗಾರಿ ಬರಪೀಡಿತ ಇತರ ಜಿಲ್ಲೆಗಳಿಗೂ ಪ್ರೇರಣೆ ಆಯಿತು. ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ‘ಬೀದರ್ ಮಾದರಿ’ಯಲ್ಲಿ ಕೆರೆಗಳ ಹೂಳೆತ್ತಲು 2016ರಲ್ಲಿ ಆದೇಶ ಹೊರಡಿ ಸಿದರು. ಈ ಯೋಜನೆಗೆ ‘ಕೆರೆ ಸಂಜೀವಿನಿ’ ಹೆಸರು ನೀಡಿದರು.

**

ಹುಟ್ಟಿದ ದಿನವೇ ಮರಣದ ಸಂದೇಶ
36 ವರ್ಷದ ಅನುರಾಗ ತಿವಾರಿ ಅವರಿಗೆ ಬೀದರ್‌ ಜಿಲ್ಲೆಯ ಅಧಿಕಾರಿಗಳು ಹಾಗೂ ಆಪ್ತರು ಬುಧವಾರ ಹುಟ್ಟುಹಬ್ಬದ ಸಂದೇಶ ಕಳಿಸಿದ್ದರು. ಆದರೆ ಅವರ ಕಡೆಯಿಂದ ಯಾರಿಗೂ ಪ್ರತಿಕ್ರಿಯೆ ಬಂದಿರಲಿಲ್ಲ.

ಹಿಂದಿ ಚಾನೆಲ್‌ಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಆತಂಕಕ್ಕೆ ಒಳಗಾದರು. ಮಾಧ್ಯಮ ಪ್ರತಿನಿಧಿಗಳಿಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳಲು ಯತ್ನಿಸಿದರು. 10 ಗಂಟೆಯ ವೇಳೆಗೆ ಕನ್ನಡ ಚಾನೆಲ್‌ಗಳಲ್ಲೂ ಸುದ್ದಿ ಪ್ರಸಾರವಾದ ನಂತರ ಬೇಸರಪಟ್ಟುಕೊಂಡರು.

ಸಂದರ್ಶಕರಿಗೆ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸಮಯ ನಿಗದಿಪಡಿಸಿದ್ದರೂ ಯಾವುದೇ ಸಮಯಕ್ಕೆ ಅವರ ಬಳಿ ಹೋದರೂ ತಕ್ಷಣ ಸ್ಪಂದಿಸುತ್ತಿದ್ದರು. ಅಧಿಕಾರಿಗಳು,  ಜನಸಾಮಾನ್ಯರೇ ಇರಲಿ ಹೊರಗಡೆ ಕೂತಿರುವವರನ್ನು ಸಿಸಿ ಟಿವಿಯಲ್ಲಿ ನೋಡಿದ ತಕ್ಷಣ ಒಳಗೆ ಕರೆಸುತ್ತಿದ್ದರು. ಎಲ್ಲರನ್ನೂ ಭೇಟಿ ಮಾಡಿದ ನಂತರವೇ ಹೊರಗೆ ಹೋಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.