ADVERTISEMENT

ಜಿಲ್ಲೆಯಲ್ಲಿ 2,542 ಜೀತದಾಳುಗಳು!

ಜೀತ ವಿಮುಕ್ತಿ ಕರ್ನಾಟಕ ಸಂಘಟನೆ ಸಮೀಕ್ಷೆ, ಬೀದರ್‌ ತಾಲ್ಲೂಕಿನಲ್ಲಿ 230 ಜನ

ಚಂದ್ರಕಾಂತ ಮಸಾನಿ
Published 28 ಜನವರಿ 2017, 7:22 IST
Last Updated 28 ಜನವರಿ 2017, 7:22 IST

ಬೀದರ್: ಜೀತ ಪದ್ಧತಿ ನಿಷೇಧಿಸಿಧ ಕಾನೂನು ಜಾರಿಗೆ ಬಂದು ನಲವತ್ತು ವರ್ಷಗಳೇ ಕಳೆದರೂ ಜಿಲ್ಲೆಯಲ್ಲಿ ಇಂದಿಗೂ ಜೀತ ಪದ್ಧತಿ ಕೊನೆಗೊಂಡಿಲ್ಲ. ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ 2,542 ಜೀತದಾಳು ಇರುವುದು ಬೆಳಕಿಗೆ ಬಂದಿದೆ.

2016ರ ಏಪ್ರಿಲ್‌ ಹಾಗೂ ಮೇನಲ್ಲಿ ಜಿಲ್ಲೆಯಾದ್ಯಂತ ಜೀತದಾಳುಗಳ ಸಮೀಕ್ಷೆ ನಡೆಸಿದಾಗ ಬೀದರ್ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ತಲಾ 563, ಹುಮನಾಬಾದ್‌ ತಾಲ್ಲೂಕಿನಲ್ಲಿ 504, ಔರಾದ್‌ ತಾಲ್ಲೂಕಿನಲ್ಲಿ 543  ಮತ್ತು ಬಸವಕಲ್ಯಾಣ ತಾಲ್ಲೂಕಿನಲ್ಲಿ 324 ಜೀತದಾಳುಗಳು ಇರುವುದು ಗೊತ್ತಾಗಿದೆ.

ಜೀವಿಕ ಜಿಲ್ಲಾ ಸಂಚಾಲಕಿಯೊಂದಿಗೆ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು 453 ಗ್ರಾಮಗಳಿಗೆ ಭೇಟಿ ಕೊಟ್ಟಾಗಲೂ ಜೀತದಾಳು ಇರುವುದು ದೃಢಪಟ್ಟಿದೆ. ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಚಿತ್ರಗಳನ್ನೂ ಸೆರೆ ಹಿಡಿಯಲಾಗಿದೆ. ಆದರೆ ಕೆಳಹಂತದ ಅಧಿಕಾರಿಗಳು ದಾಖಲೆಗಳನ್ನೇ ಬದಲು ಮಾಡಿ ಜಿಲ್ಲಾ ಆಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.

‘ತಹಶೀಲ್ದಾರ್‌ ಒಂದೇ ನಮೂನೆಯ ವರದಿಗಳನ್ನು ಸಿದ್ಧಪಡಿಸಿ ಬಸವಕಲ್ಯಾಣ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಬಸವಕಲ್ಯಾಣ ಉಪ ವಿಭಾಗಾಧಿಕಾರಿಗಳು ಕಡತಗಳ ಮೇಲೆ ಸಹಿ ಮಾಡುವಂತೆ ನನ್ನನ್ನು ಕಚೇರಿಗೆ ಕರೆಸಿದ್ದರು. ಜೀತದಾಳು ಇಲ್ಲ ಎನ್ನುವ ದಾಖಲೆಗಳನ್ನು ನೋಡಿದಾಗ ಆಘಾತ ಉಂಟಾಯಿತು. ಸಮೀಕ್ಷಕರು ಮನೆ ಮನೆಗೆ ಭೇಟಿ ನೀಡಿದ ಸಾಕ್ಷ್ಯಾಧಾರ ಒದಗಿಸುವ ಚಿತ್ರಗಳು ಇಲ್ಲ.

ಕಚೇರಿಯಲ್ಲಿ ಕುಳಿತು ಸಮೀಕ್ಷಾ ವರದಿ ತಯಾರಿಸಲಾಗಿದೆ. ಹೀಗಾಗಿ ನಂಬಿಕೆಗೆ ಅರ್ಹವಲ್ಲದ ದಾಖಲೆ ಮೇಲೆ ಸಹಿ ಮಾಡಲು ನಿರಾಕರಿಸಿದ್ದೇನೆ’ ಎಂದು ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಸದಸ್ಯೆಯಾದ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಯ ಜಿಲ್ಲಾ ಸಂಚಾಲಕಿ ಇಂದುಮತಿ ಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಾಗೃತ ಸಮಿತಿಯಲ್ಲಿ ಕಾರ್ಮಿಕ ಅಧಿಕಾರಿ, ಕಂದಾಯ ನಿರೀಕ್ಷ ಕ, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ದಲಿತ ಮುಖಂಡ, ನೋಡಲ್‌ ಅಧಿಕಾರಿ, ಸರ್ಕಾರೇತರ ಸಂಘಟನೆಯ ಪ್ರಮುಖರು ಇರಬೇಕು. ಆದರೆ ಎಲ್ಲರೂ ಒಗ್ಗೂಡಿ ಪರಿಶೀಲನೆ ನಡೆಸಿದ ಒಂದು ಉದಾಹರಣೆಯೂ ಇಲ್ಲ.

‘ಜಿಲ್ಲೆಯಲ್ಲಿ 1976ರಿಂದ 1995ರ ವರೆಗೆ 12 ಜೀತದಾಳುಗಳನ್ನು ಗುರುತಿಸಲಾಗಿದೆ. ನಂತರ ಜಿಲ್ಲಾಡಳಿತ ಸರಿಯಾಗಿ ಸಮೀಕ್ಷೆ ನಡೆಸಿಲ್ಲ.  2001–2002ರಲ್ಲಿ 9 ಜನ, 2003–2004ಲ್ಲಿ ಇಬ್ಬರು ಸೇರಿ ಈವರೆಗೆ 23 ಜೀತದಾಳುಗಳಿಗೆ ಮಾತ್ರ ‘ಜೀತ ವಿಮುಕ್ತಿ ದೃಢೀಕರಣ ಪತ್ರ’ ಕೊಟ್ಟಿರುವ ಮಾಹಿತಿ ಮಾತ್ರ ಇದೆ’ ಎನ್ನುತ್ತಾರೆ ಕರ್ನಾಟಕ ಜೀತದಾಳು ಹಾಗೂ ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯ ಸಂಚಾಲಕ ಕಿರಣಕುಮಾರ ಪ್ರಸಾದ.

‘ಕೇಂದ್ರ ಸರ್ಕಾರ, 2014ರಲ್ಲಿ ಬೀದರ್ ಜಿಲ್ಲೆಯಲ್ಲಿ ಜೀತದಾಳುಗಳ ಸಮೀಕ್ಷೆ ನಡೆಸಲು ₹ 2 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿಯನ್ನು ನೀಡಲಾಯಿತು. ಬೆಂಗಳೂರಿನಿಂದ ಬೀದರ್‌ಗೆ ಬಂದು ತರಬೇತಿ ನೀಡಿದೆ. ಜಿಲ್ಲಾ ಆಡಳಿತ ನನಗೆ ಪ್ರಯಾಣ ವೆಚ್ಚ ಸಹ ಕೊಡಲಿಲ್ಲ. ಜಿಲ್ಲೆಯಲ್ಲಿ ಜೀತದಾಳು ಇಲ್ಲ ಎಂದು ಷರಾ ಬರೆದು ಜಿಲ್ಲಾ ಆಡಳಿತ ಕೇಂದ್ರಕ್ಕೆ ಹಣ ಮರಳಿಸಿದೆ’ ಎಂದು ವಿವರಿಸುತ್ತಾರೆ ಅವರು.

ಸರ್ಕಾರದ ಮಾರ್ಗಸೂಚಿ ಅನ್ವಯ 17 ಪ್ರಶ್ನಾವಳಿಯನ್ನು ಸಿದ್ಧಪಡಿಸಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಕಂದಾಯ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ನಮ್ಮ ಬಳಿ ಎಲ್ಲ ದಾಖಲೆಗಳು ಇವೆ. ಶೀಘ್ರದಲ್ಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ವಿರುದ್ಧ ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಿದ್ದೇವೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ಲಿಖಿತ ದೂರು ನೀಡಲಿದ್ದೇವೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.