ADVERTISEMENT

ತಂಬಾಕು ಉತ್ಪನ್ನ ಖರೀದಿಗೆ ವಾರ್ಷಿಕ ₹ 32 ಕೋಟಿ ಖರ್ಚು

ತಂಬಾಕಿನಿಂದ ಬಾಯಿ, ಶ್ವಾಸಕೋಶ ಕ್ಯಾನ್ಸರ್‌, ಹೃದಯಾಘಾತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:12 IST
Last Updated 22 ಮಾರ್ಚ್ 2017, 9:12 IST

ಬೀದರ್‌:  ‘ಗ್ಲೋಬಲ್‌ ಅಡಲ್ಟ್‌ ಟೊಬ್ಯಾಕೋ ಸರ್ವೆ– ಇಂಡಿಯಾ’ ಸಂಸ್ಥೆಯು 2011ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಬೀದರ್‌ ಜಿಲ್ಲೆಯ ಜನ ತಂಬಾಕು ಸೇವನೆಗಾಗಿಯೇ ಪ್ರತಿ ವರ್ಷ ₹ 32 ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ತಂಬಾಕು ನಿಷೇಧ ಕೋಶದ ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಎಂ.ಎ.ಜಬ್ಬಾರ್‌ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದ ಸಮೀಪ ಮಂಗಳವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕರಿಗೆ ತಂಬಾಕು ನಿಷೇಧ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಬೀದಿ ನಾಟಕ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿ­ಣಾಮ  ಉಂಟಾಗುತ್ತಿದೆ. ಅಲ್ಲದೇ ಹಣವೂ ವ್ಯರ್ಥವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಮೀಕ್ಷೆಯ ಪ್ರಕಾರ ನಿತ್ಯ ಹತ್ತರಲ್ಲಿ ಒಬ್ಬರು ತಂಬಾಕಿನಿಂದಾಗಿಯೇ ಸಾವಿಗೀಡಾಗುತ್ತಿದ್ದಾರೆ.

ತಂಬಾಕಿನಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್‌ ಆಗುತ್ತದೆ. ತಂಬಾಕು ಸೇವನೆ ಹೃದಯಾಘಾತಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ಉತ್ಪನ್ನಗಳಿಂದ ಆದಷ್ಟು ದೂರ ಇರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ಶಿವಶಂಕರ ಬಿ. ಅವರು, ತಮಟೆ ಬಾರಿಸುವ ಮೂಲಕ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ತಂಬಾಕು ವ್ಯಸನದಿಂದ ಮುಕ್ತಿ ಹೊಂದಲು ಬೀದರ್‌ನ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 37ರಲ್ಲಿರುವ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು.
ಆಪ್ತ ಸಮಾಲೋಚಕರ ಮೂಲಕ ಔಷಧೋಪಚಾರ ಪಡೆಯಬೇಕು ಎಂದರು.

ಚಿಮಕೋಡದ ನಂದೀಶ್ವರ ನಾಟ್ಯ ಸಂಘದ ಕಲಾವಿದರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ಕುರಿತು ಮನೋಜ್ಞವಾಗಿ ನಾಟಕ ಪ್ರದರ್ಶನ ನೀಡಿದರು. ಬೀದರ್‌ನ ಕಲಾ ಕುಸುಮ ಜನಪದ ಮತ್ತು ನಾಟ್ಯ ಸಂಘ ಹಾಗೂ ಕೋಹಿನೂರಿನ ಸೃಜನ ಕಲಾ ಸ್ವಯಂ ಸೇವಾ ಸಂಸ್ಥೆಯ ಕಲಾವಿದರು ಪಾಲ್ಗೊಂಡಿದ್ದರು.

ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಮಾರ್ಥಂಡರಾವ್ ಖಾಶೆಂಪು ರಕರ್, ಡಾ. ರಾಜಶೇಖರ ಪಾಟೀಲ, ಡಾ.ಇಂದುಮತಿ ಪಾಟೀಲ್, ಜಿಲ್ಲಾ ಅರೋಗ್ಯ ಶಿಕ್ಷಣ ಅಧಿಕಾರಿ ಸುಭಾಷ ಮುಧಾಳೆ, ಶ್ರವಣ ಜಾಧವ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರಪ್ರಕಾಶ ವಗ್ಗೆ, ಸಮಾಜ ಕಾರ್ಯಕರ್ತ ಶಂಭು ಕಡ್ಲಿಕೊಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ ಸದಾಶಿವ, ಪ್ರವೀಣ ಗುರಮಿಟಕಲ್, ಸತೀಶ ಸ್ವಾಮಿ ಹಾಗೂ ವಿದ್ಯಾಸಾಗರ ಸೇರಿದಂತೆ ಇತರರು  ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.