ADVERTISEMENT

ನೀಟ್, ಸಿಇಟಿ ತರಬೇತಿ: ನೋಂದಣಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 9:11 IST
Last Updated 14 ಏಪ್ರಿಲ್ 2017, 9:11 IST

ಬೀದರ್: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ 371(ಜೆ)ಗೆ ಅರ್ಹರಾದ ವಿದ್ಯಾರ್ಥಿಗಳಿಗಾಗಿ ಮೇನಲ್ಲಿ ಆಯೋಜಿಸಿರುವ ನೀಟ್ (ಎನ್‍ಇಇಟಿ) ಮತ್ತು ಸಿಇಟಿ  ತರಬೇತಿಗಾಗಿ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡುವ  ಅವಧಿಯನ್ನು ಏಪ್ರಿಲ್ 17ರವರೆಗೆ ವಿಸ್ತರಿಸಲಾಗಿದೆ
ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಆದಿತ್ಯ ಆಮ್ಲನ್ ಬಿಸ್ವಾಸ್ ತಿಳಿಸಿದ್ದಾರೆ.

ನೋಂದಣಿಗೆ ಏಪ್ರಿಲ್‌ 12 ಕೊನೆ ದಿನ ನಿಗದಿಪಡಿಸಲಾಗಿತ್ತು. ಏಪ್ರಿಲ್ 17ರಿಂದ ಮಂಡಳಿಯ ವ್ಯಾಪ್ತಿಯ  ಜಿಲ್ಲಾ ಹಾಗೂ   ತಾಲ್ಲೂಕು ಕೇಂದ್ರಗಳಲ್ಲಿ ಆಯ್ದ 35 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಟೆಲಿ ಮತ್ತು ನೇರ ತರಬೇತಿ ನೀಡಲಾಗುವುದು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುವ ಮತ್ತು 371(ಜೆ)ಗೆ ಅರ್ಹರಾಗುವ ವಿದ್ಯಾರ್ಥಿಗಳಿಗೆ ₹600 ಮತ್ತು ಉಳಿದ ವಿದ್ಯಾರ್ಥಿಗಳಿಗೆ ₹1,200 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ 15 ದಿನದ ತರಬೇತಿ ನೀಡುವುದರ ಜೊತೆಗೆ  ಎಂಟು ಸಂಪುಟಗಳ ಉಚಿತ ಅಭ್ಯಾಸ ಸಾಹಿತ್ಯವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಡಿ.ಡಿ.ಯನ್ನು ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹೆಸರಿನಲ್ಲಿ ಪಡೆದು ತರಬೇತಿ ಕೇಂದ್ರದಲ್ಲಿ ಸಲ್ಲಿಸಬೇಕು.
ತರಬೇತಿ ಪಡೆಯಲು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಥಮ ವರ್ಷದಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿರಬೇಕು. ಎಸ್‌ಸಿ,ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶೇ 5ರಷ್ಟು ರಿಯಾಯಿತಿ ಇರುತ್ತದೆ ಎಂದು ತಿಳಿಸಿದ್ದಾರೆ.

ತರಬೇತಿ ಏಪ್ರಿಲ್ 17 ರಿಂದ 15 ದಿನಗಳ ವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 4.30 ಗಂಟೆ ವರೆಗೆ  ನಡೆಯಲಿದೆ.  ಬೆಳಿಗ್ಗೆ 10 ರಿಂದ 11.30 ಗಂಟೆಯವರೆಗೆ ಭೌತ ವಿಜ್ಞಾನ, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ರಸಾಯನ ವಿಜ್ಞಾನ, ಮಧ್ಯಾಹ್ನ 1 ರಿಂದ 1.30 ಗಂಟೆಯವರೆಗೆ ವಿರಾಮ. ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಜೀವ ವಿಜ್ಞಾನ. ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಗಣಿತ ವಿಷಯ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.