ADVERTISEMENT

ಪ್ರತಿ ಗ್ರಾಮದಲ್ಲಿ ‘ಕುಡಿತದ ಕೆಡಕಿನ’ ಜಾಗೃತಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:40 IST
Last Updated 16 ಮೇ 2017, 8:40 IST

ಬೀದರ್: ‘ಸ್ತ್ರೀಶಕ್ತಿ ಗುಂಪು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ಗ್ರಾಮದಲ್ಲಿ ಕುಡಿತದ ಕೆಡಕಿನ ಬಗೆಗೆ ಜಾಗೃತಿ ಮೂಡಿಸಲಾಗುವುದು’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್‌.ಸಿ.ರುದ್ರಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮದ್ಯಪಾನ ಜಾಗೃತಿ ಸಂದೇಶ ಇರುವ ಮಹಾತ್ಮ ಗಾಂಧಿ ಚಿತ್ರ ಬಿಡುಗಡೆ ಮಾಡಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪ್ರತಿ ಗ್ರಾಮದಲ್ಲಿ ಬೀದಿ ನಾಟಕ ಆಯೋಜಿಸಲಾಗುವುದು. ಶಾಲಾ ಕಾಲೇಜುಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಒಂದು ನಾಟಕಕ್ಕೆ ₹3,000 ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಮುಂಚೆ ರಾಜ್ಯ ಸರ್ಕಾರವು ಮದ್ಯಪಾನ ಸಂಯಮ ಮಂಡಳಿಗೆ ₹80 ಲಕ್ಷ ಮಾತ್ರ ಹಣ ಬಿಡುಗಡೆ ಮಾಡುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಮಂಡಳಿಗೆ ₹1.90 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಗೆ ₹60 ಸಾವಿರ ಕಾಯ್ದಿರಿಸಲಾಗಿದೆ’ ಎಂದು ಹೇಳಿದರು.

‘ಮಂಡಳಿ ‘ಮದ್ಯಪಾನ ಆರೋಗ್ಯಕ್ಕೆ ಮಾರಕ ಹೇಗೆ? ಪರಿಹಾರ ಹೇಗೆ?’, ‘ಮಾದಕ ವಸ್ತುಗಳ ಮಾಯಾಜಾಲ’, ‘ಕುಡಿತ ಬೇಡ’ ಮುಂತಾದ ಕಿರುಪುಸ್ತಕ, ಕರಪತ್ರಗಳನ್ನು ಪ್ರಕಟಿಸಿದೆ’ ಎಂದು ಮಾಹಿತಿ ನೀಡಿದರು.

‘ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ 43 ಆರೋಪಿಗಳನ್ನು ಬಂಧಿಸಿ ₹ 7.99 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಇಲಾಖೆ ಅಧಿಕಾರಿಗಳು 770 ಪ್ರಕರಣಗಳನ್ನು ದಾಖಲಿಸಿ 905 ಆರೋಪಿಗಳನ್ನು ಬಂಧಿಸಿ ₹ 168.81 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ’ ಎಂದು ಹೇಳಿದರು.ಮಂಡಳಿಯ ಸದಸ್ಯ ಶಾಂತಲಿಂಗ ಸಾವಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಷಣ್ಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.