ADVERTISEMENT

ಬಸವಕಲ್ಯಾಣದಲ್ಲಿ ಭುಗಿಲೆದ್ದ ಅಸಮಾಧಾನ

ಖೂಬಾ ಬಿಜೆಪಿ ಸೇರ್ಪಡೆ: ಆತಂಕದಲ್ಲಿ ಮಾರುತಿರಾವ್‌ ಮುಳೆ, ಲಿಂಗರಾಜ  ಪಾಟೀಲ

ಚಂದ್ರಕಾಂತ ಮಸಾನಿ
Published 7 ಏಪ್ರಿಲ್ 2018, 6:46 IST
Last Updated 7 ಏಪ್ರಿಲ್ 2018, 6:46 IST

ಬೀದರ್‌: ರಾಜ್ಯ ವಿಧಾನಸಭಾ ಚುನಾವಣೆಯ ಅಧಿಸೂಚನೆ ಪ್ರಕಟಗೊಂಡ ನಂತರ ಬಸವಕಲ್ಯಾಣ ಕ್ಷೇತ್ರದಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿದ್ದು, ಕಾಂಗ್ರೆಸ್‌ ಬಿಟ್ಟರೆ ಉಳಿದ ಪಕ್ಷಗಳಲ್ಲಿ ಯಾರು ಅಭ್ಯರ್ಥಿ ಆಗಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಾಂಗ್ರೆಸ್‌ ಮುಕ್ತ ಭಾರತ ಘೋಷಣೆ ಅಡಿ ಬಿಜೆಪಿ ಮುಖಂಡರು ಬೇರೆ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಪಕ್ಷದೊಳಗಿನ ಮುಖಂಡರು ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕಾರಣ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಮಾಜಿ ಶಾಸಕ ಮಾರುತಿರಾವ್ ಮುಳೆ ಅವರು ಬಳ್ಳಾರಿಯ ಸಂಸದ ಶ್ರೀರಾಮಲು ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಟಿಕೆಟ್‌ ಭರವಸೆಯ ಮೇಲೆ ಬಿಜೆಪಿ ಸೇರಿದ್ದಾರೆ. ಇದೇ ವೇಳೆ ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಯಡಿಯೂರಪ್ಪ ಅವರ ಅಭಯ ಪಡೆದು ಬಿಜೆಪಿಗೆ ಬಂದಿರುವುದು ಕ್ಷೇತ್ರದ ಕಾರ್ಯಕರ್ತರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ADVERTISEMENT

‘ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್‌ ಹಾಗೂ ಮಾರುತಿರಾವ್‌ ಮುಳೆ ಇಬ್ಬರೂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಎಲ್ಲರಿಗೂ ಆಸೆ ತೋರಿಸಿ ಒಬ್ಬೊಬ್ಬರನ್ನು ಪಕ್ಷಕ್ಕೆ ಕರೆದುಕೊಂಡರೆ ನಮ್ಮ ರಾಜಕೀಯ ಭವಿಷ್ಯ ಏನಾದೀತು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ಕೇವಲ ಚುನಾವಣೆಯ ಸಂದರ್ಭದಲ್ಲಿ ಮರಾಠರನ್ನು ಓಲೈಸುತ್ತಿದ್ದಾರೆ. ಅವರಿಗೆ ಯಾವುದೇ ರಾಜಕೀಯ ಅಧಿಕಾರ ಕೊಡುತ್ತಿಲ್ಲ. ಈ ಬಾರಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾರುತಿರಾವ್‌ ಮುಳೆ ಅವರಿಗೆ ಟಿಕೆಟ್‌ ಕೊಡದಿದ್ದರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲೂ ಮರಾಠರು ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಮರಾಠಾ ಮುಖಂಡರು ಬಹಿರಂಗವಾಗಿಯೇ ಎಚ್ಚರಿಕೆ ನೀಡಿರುವುದು ಬಿಜೆಪಿ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಗಿದ್ದ ಸಂಜಯ ಪಟವಾರಿ, ಎಂ.ಜಿ.ಮುಳೆ, ಸುನೀಲ ಪಾಟೀಲ, ಲಿಂಗರಾಜ ಪಾಟೀಲ ಅಟ್ಟೂರ್, ಪ್ರದೀಪಕುಮಾರ ವಾತಡೆ, ಅನಿಲ ಭೂಸಾರೆ, ರವಿ ಚಂದನಕೇರೆ, ವಿಜಯಕುಮಾರ ಮಂಠಾಳೆ, ಸುಧೀರ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ, ಶಾಲಿನಿ ವಾಡಿಕರ್ ಇವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಖೂಬಾ ಅವರಿಗೆ ಟಿಕೆಟ್ ನೀಡಿದರೆ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂದು ಅನೇಕ ಕಾರ್ಯಕರ್ತರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

‘ಮುಖಂಡರು ಟಿಕೆಟ್‌ ಭರವಸೆ ಕೊಟ್ಟ ಎರಡು ತಿಂಗಳ ನಂತರ ಬಿಜೆಪಿ ಸೇರಿದ್ದೇನೆ. ಈ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್‌ ಕೊಟ್ಟರೆ ಸರಿ. ಇಲ್ಲದಿದ್ದರೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವೆ’ ಎಂದು ಹೇಳುತ್ತಾರೆ ಮಾರುತಿರಾವ್‌ ಮುಳೆ.

‘ಮಲ್ಲಿಕಾರ್ಜುನ ಖೂಬಾ ವಿರುದ್ಧ ಕ್ರಿಮಿನಲ್‌ ಆರೋಪ ಇದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿರುವ ಪಕ್ಷವೇ ಆರೋಪ ಎದುರಿಸುವ ವ್ಯಕ್ತಿಗೆ ಟಿಕೆಟ್‌ ಕೊಟ್ಟರೆ ಜನತೆಗೆ ತಪ್ಪು ಸಂದೇಶ ಹೋಗಲಿದೆ. ಮಲ್ಲಿಕಾರ್ಜುನ ಖೂಬಾ ಬಿಜೆಪಿಗೆ ಬರುವ ಮೊದಲೇ ತಾಲ್ಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಲು ಕಷ್ಟವಾಗಲಿದೆ’ ಎಂದು ಟಿಕೆಟ್‌ ಆಕಾಂಕ್ಷಿ ಲಿಂಗರಾಜ ಪಾಟೀಲ
ಹೇಳುತ್ತಾರೆ.

‘ಕಾಂಗ್ರೆಸ್‌ನಲ್ಲಿ ಗೊಂದಲ ಇಲ್ಲ ’

ಬಿ.ನಾರಾಯಣರಾವ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಅಂತಿಮವಾಗಿದೆ. ಏಪ್ರಿಲ್‌ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ. ಮಾಜಿ ಶಾಸಕ ಮಾರುತಿರಾವ್‌ ಮುಳೆ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಮೇಲೆ ಬಿ.ನಾರಾಯಣರಾವ್‌ ಅವರಿಗೆ ಟಿಕೆಟ್‌ ಇನ್ನಷ್ಟು ಸುಲಭವಾಗಿದೆ. ವೈಜನಾಥ ಕಾಮಶೆಟ್ಟಿ ಅವರನ್ನು ಕಾಂಗ್ರೆಸ್‌ಗೆ ಕರೆ ತಂದ ನಂತರ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಬಿಜೆಪಿ ಇನ್ನೂ ಸಮೀಕರಣದಲ್ಲೇ ಕಾಲ ಹರಣ ಮಾಡುತ್ತಿದೆ.‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಕಲ್ಯಾಣದಿಂದ ಸ್ಪರ್ಧಿಸಲಿದ್ದಾರೆ ಎಂದು ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹರಿಯಬಿಡುತ್ತಿವೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಅವರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲ ಮಾಧ್ಯಮಗಳೇ ವಿವಾದ ಸೃಷ್ಟಿಸುತ್ತೇವೆ’ ಎನ್ನುತ್ತಾರೆ ಬಿ.ನಾರಾಯಣರಾವ್‌.

ಹೊಸ ಅಭ್ಯರ್ಥಿಗೆ ಶೋಧ

ಬೀದರ್‌: ಜೆಡಿಎಸ್‌ನ ಭದ್ರಕೋಟೆ ಎಂದೇ ಗುರುತಿಸಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್‌ಗೇ ಅಭ್ಯರ್ಥಿ ಇಲ್ಲದಂತಾಗಿದೆ. ಶಾಸಕ ಖೂಬಾ ಪಕ್ಷ ತೊರೆದಿರುವ ಕಾರಣ ಜೆಡಿಎಸ್‌ ಹೊಸ ಅಭ್ಯರ್ಥಿಯ ಶೋಧದಲ್ಲಿ ತೊಡಗಿದೆ.‘ಬಿಜೆಪಿ ಅಭ್ಯರ್ಥಿಯ ಹೆಸರು ಪ್ರಕಟಗೊಂಡ ನಂತರ ಜೆಡಿಎಸ್‌ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದೆ. ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್‌. ಸಿಂಧ್ಯ ಬಸವಕಲ್ಯಾಣದಿಂದ ಸ್ಪರ್ಧಿಸುವ ಬಗೆಗೆ ಒಲವು ತೋರಿದ್ದಾರೆ. ಆದರೆ, ಬಿಜೆಪಿ ಟಿಕೆಟ್‌ ಸಿಗದಿದ್ದರೆ ಮಾರುತಿರಾವ್‌ ಮುಳೆ ಜೆಡಿಎಸ್‌ಗೆ ಬಂದರೆ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.