ADVERTISEMENT

ಬಸವಪ್ರಜ್ಞೆ ಬೆಳೆಸಿಕೊಂಡರೆ ಜೀವನ ಸಾರ್ಥಕ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 7:03 IST
Last Updated 26 ಡಿಸೆಂಬರ್ 2017, 7:03 IST

ಬಸವಕಲ್ಯಾಣ: ‘ಬಸವಣ್ಣನವರು ಭಕ್ತಿ, ಜ್ಞಾನ ಮತ್ತು ಕ್ರಿಯೆಯ ಸಂಕೇತ. ಅದುವೇ ಬಸವ ಪ್ರಜ್ಞೆಯಾಗಿದ್ದು ಅದನ್ನು ಬೆಳೆಸಿಕೊಂಡರೆ ಜೀವನ ಸಾರ್ಥಕ ಆಗುತ್ತದೆ’ ಎಂದು ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದರು. ತಾಲ್ಲೂಕಿನ ಬೇಲೂರನಲ್ಲಿ ಸೋಮವಾರ ಆಯೋಜಿಸಿದ್ದ ಬಸವಣ್ಣನವರ ಆಶ್ವಾರೂಢ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧಿ ಮೋಸ ಮಾಡಬಹುದು. ಆದರೆ, ಪ್ರಜ್ಞೆ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಒಯ್ಯುತ್ತದೆ. ಆದ್ದರಿಂದ ಬುದ್ಧಿಗಿಂತಲೂ ಪ್ರಜ್ಞೆ ಶ್ರೇಷ್ಠ. ಜ್ಯೋತಿಷ್ಯ ಕೇಳಬಾರದು ಅದರಿಂದ ಪ್ರಜ್ಞೆ ಹಾಳಾಗುತ್ತದೆ. ಜ್ಯೋತಿಷಿಗಳು ತಮ್ಮ ಜೀವನ ನಡೆಸುವುದಕ್ಕಾಗಿ ಮಾಡಿಕೊಂಡಿರುವ ಕಾಯಕ ಅದಾಗಿದ್ದು ಅದರಿಂದ ಯಾರಿಗೂ ಪ್ರಯೋಜನವಿಲ್ಲ’ ಎಂದರು.

‘ಬೇಲೂರ ಗ್ರಾಮವು ಶರಣ ಉರಿಲಿಂಗಪೆದ್ದಿ, ಸಿದ್ದರಾಮೇಶ್ವರ ಮತ್ತು ಭಿಲ್ಲೇಶ ಬೊಮ್ಮಯ್ಯ ಅವರ ವಾಸಸ್ಥಾನವಾಗಿತ್ತು. ಆದ್ದರಿಂದ ಇದು ಶರಣಕ್ಷೇತ್ರ. ಬಸವಾದಿ ಶರಣರ ತತ್ವವನ್ನು ಎಲ್ಲರೂ ಪಾಲಿಸಬೇಕು’ ಎಂದರು.

ADVERTISEMENT

ಬುರಾಣಪುರ ಯೋಗೇಶ್ವರಿತಾಯಿ ಮಾತನಾಡಿ, ‘ನಾವೆಲ್ಲ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕು. ಜಾತಿ, ಧರ್ಮದ ಹೆಸರಲ್ಲಿ ಅಶಾಂತಿಯನ್ನುಂಟು ಮಾಡುವುದು ಸರಿಯಲ್ಲ. ಧರ್ಮ ಯಾವುದಾದರೂ ಸಾರ ಒಂದೇ. ಎಲ್ಲರೂ ಮಾನವೀಯತೆ ಬೆಳೆಸಿಕೊಳ್ಳಬೇಕು’ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರು ಕಾಯಕ, ದಾಸೋಹ ತತ್ವವನ್ನು ಸಾರಿದ್ದಾರೆ. ಕೆಳ ವರ್ಗದವರ ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಪ್ರಯತ್ನಿಸಿದರು. ಅನುಭವ ಮಂಟಪದಲ್ಲಿ ವಚನಗಳನ್ನು ರಚಿಸಿ ಲೋಕಕ್ಕೆ ಜ್ಞಾನ ನೀಡಿದರು’ ಎಂದರು.

ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ, ಮಾಜಿ ಶಾಸಕ ಎಂ.ಜಿ.ಮುಳೆ, ಬಿಜೆಪಿ ಮುಖಂಡ ಸಂಜಯ ಪಟವಾರಿ, ಹಿರಿಯರಾದ ಜಗನ್ನಾಥ ಚಿಲ್ಲಾಬಟ್ಟೆ, ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಸಾಗಾವೆ, ಬಸವರಾಜ ಗುಂಗೆ ಮಾತನಾಡಿದರು.

ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಸಾಯಗಾಂವ ಶಿವಾನಂದ ಸ್ವಾಮೀಜಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಜ ನರಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಶಂಕರ ನಾಗದೆ, ಪ್ರಕಾಶ ಮೆಂಡೋಳೆ, ಸುಭಾಷ ಕಾಮಣ್ಣ ಪಾಲ್ಗೊಂಡಿದ್ದರು.

* * 

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆಗಾಗಿ ಆಗ್ರಹಿಸಿದರೆ ಕೆಲವರು ಸಮಾಜ ಒಡೆಯಲಾಗುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ
ಶಿವಾನಂದ ಸ್ವಾಮೀಜಿ
ಹುಲಸೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.