ADVERTISEMENT

ಭಯದಲ್ಲಿ ರಾತ್ರಿ ಕಳೆಯುತ್ತಿರುವ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:28 IST
Last Updated 14 ನವೆಂಬರ್ 2017, 5:28 IST

ಚಿಟಗುಪ್ಪ: ಹುಮನಾಬಾದ್ ತಾಲ್ಲೂಕಿನ ಶಾಮತಾಬಾದ್ ಗ್ರಾಮದಲ್ಲಿ ಒಂದು ವಾರದಿಂದ ನಿತ್ಯ ರಾತ್ರಿ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿದ್ದು, ಆತಂಕಗೊಂಡಿರುವ ಗ್ರಾಮಸ್ಥರು ಮನೆ ಬಿಟ್ಟು ಕೊರೆಯುವ ಚಳಿಯಲ್ಲಿ ರಸ್ತೆ, ದೇಗುಲಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ.

ಶುಕ್ರವಾರ ಮಧ್ಯ ರಾತ್ರಿ ಶನಿವಾರ ಮುಂಜಾನೆ, ಭಾನುವಾರ ರಾತ್ರಿ ಸೋಮವಾರ ಮುಂಜಾನೆ ಭೂಮಿ ಒಳಗಿನಿಂದ ಭಾರಿ ಶಬ್ದ ಉಂಟಾಗಿದ್ದು, ಕೆಲವರ ಮನೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

‘ಗ್ರಾಮದೆಲ್ಲೆಡೆ ಏಕ ಕಾಲಕ್ಕೆ ಸ್ಥಳ ಬಿಟ್ಟು ಸ್ಥಳದಲ್ಲಿ ಭೂಮಿಯಿಂದ ಭಯಾನಕ ಶಬ್ದ ಕೇಳಿಸುತ್ತಿದ್ದು, ವೃದ್ಧರು, ಮಕ್ಕಳು ಹೆದರಿ ಮನೆಗಳಿಂದ ಹೊರಗಡೆ ಓಡಿ ಬರುವಾಗ ಬಿದ್ದಿದ್ದಾರೆ’ ಎಂದು ಗ್ರಾಮಸ್ಥ ಚನ್ನಬಸಪ್ಪ ಪಾಟೀಲ್ ತಿಳಿಸಿದರು.

ADVERTISEMENT

ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶಾಸಕರಿಗೆ ಮಾಹಿತಿ ನೀಡಲಾಗಿದೆ ಎಂದು ತಹಶೀಲ್ದಾರ ಡಿ.ಎಂ.ಪಾಣಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೋವಿಂದ್ ತಿಳಿಸಿದ್ದಾರೆ.

ಭಾನುವಾರ ಶಾಸಕ ರಾಜಶೇಖರ ಪಾಟೀಲ್ ಭೇಟಿ ನೀಡಿ, ನಾಗರಿಕರೊಂದಿಗೆ ಚರ್ಚೆ ನಡೆಸಿ ‘ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ತಜ್ಞರಿಗೆ ಗ್ರಾಮಕ್ಕೆ ಕರೆಸಿ ಪರಿಶೀಲಿಸಲಾಗುವುದು. ಗ್ರಾಮಸ್ಥರಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ನಾಗರಿಕರು ಭಯ ಪಡಬೇಕಿಲ್ಲ’ ಎಂದು ಹೇಳಿದರು. ಹನುಮಾನ ದೇಗುಲದಲ್ಲಿಯೇ ನಾಲ್ಕು ದಿನಗಳಿಂದ ಗ್ರಾಮಸ್ಥರು ರಾತ್ರಿ ಕಳೆಯುತ್ತಿದ್ದಾರೆ. ಗ್ರಾಮದಲ್ಲಿ ಪೊಲೀಸ್‌ ಗಸ್ತು ಹಾಕಲಾಗಿದೆ.

ಬೀದರ್ ನ ಹಿರಿಯ ಭೂ ವಿಜ್ಞಾನಿ ಸಿಕಂದರ್ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿ,‘ಭೂಮಿಯ ಒಳಗಡೆ ಇರುವ ಶಿಲಾ ಪದರಗಳು ಒಂದಕ್ಕೊಂದು ಹೊಂದಾಣಿಕೆ ಮಾಡಿಕೊಳ್ಳುವುದು ನಿಸರ್ಗದ ನಿಯಮ.

ಈ ಪದರಗಳ ಹೊಂದಾಣಿಕೆ ಸಮಯದಲ್ಲಿ ಭಯಂಕರವಾದ ಶಬ್ದ ಕೇಳಿಸುತ್ತದೆ. ಇದಕ್ಕೆ ಅತಿಯಾದ ಮಳೆಯೂ ಒಂದು ಕಾರಣ. ಆಸ್ತಿ, ಜೀವ ಹಾನಿ ಆಗುವುದಿಲ್ಲ. ಭಯ ಪಡುವ ಅವಶ್ಯಕತೆ ಇಲ್ಲ’ ಎಂದು ತಿಳಿಸಿದರು.

ಎಪಿಎಂಸಿ ಉಪಾಧ್ಯಕ್ಷ ಸಲೀಂ ಗುತ್ತೆದಾರ್, ಚಿಟಗುಪ್ಪ ತಹಶೀಲ್ದಾರ ಜಿಯಾವುಲ್ , ಸೂರ್ಯಕಾಂತ್, ಬಾಬುರಾವ್ ಕುಲಕರ್ಣಿ, ತುಕಾರಾಮ ಭೈರನಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ಸಂಜು ಬುಳ್ಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.